ಚಿಕ್ಕಬಳ್ಳಾಪುರ: ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳಿಗೆ ಇಡೀ ವಿಶ್ವಕ್ಕೆ ಭಾರತ ರಾಜಧಾನಿಯಾಗುತ್ತಿದೆ. ಇದಕ್ಕೆ ಕಾರಣಗಳನ್ನು ಹುಡುಕುವ ಸಂಶೋಧನೆಗಳು ಹೆಚ್ಚಾಗುವ ಜೊತೆಗೆ ಪರಿಹಾರಗಳನ್ನು ಕಂಡುಹಿಡಿಯುವ ಕೆಲಸ ಸಂಸ್ಥೆಗಳಿಂದ ಆಗಬೇಕಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದರು.
ತಾಲೂಕಿನ ಮೋಟ್ಲೂರು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಒನ್ ಹೆಲ್ತ್ ಟ್ರಸ್ಟ್ ನೂತನ ಕ್ಯಾಂಪಸ್‌ಗೆ ಭೂಮಿಪೂಜೆ ನೆರವೇರಿಸಿದ ನಂತರ ಮಾತನಾಡಿದ ಅವರು, ಟಿಬಿ, ಮಲೇರಿಯಾ ಮುಂತಾದ ಹಲವಾರು ಜಾಗತಿಕ ಆರೋಗ್ಯ ಸವಾಲುಗಳನ್ನು ಎದುರಿಸಲು ಒನ್ ಹೆಲ್ತ್ ಟ್ರಸ್ಟ್ ನಡೆಸುತ್ತಿರುವ ಸಂಶೋಧನೆ ಶ್ಲಾಘನೀಯ ಎಂದರು.
ಸೇವಿಸುವ ಆಹಾರದಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಮತ್ತು ಆಹಾರದಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ಸಂಶೋಧನೆಗಳು ನಡೆಯಬೇಕಿದೆ. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ನಂತಹ ಕಾಯಿಲೆಗಳು ಅಧಿಕವಾಗುತ್ತಿರುವುದರ ಹಿಂದೆ ಇರುವ ಸಮಸ್ಯೆಗಳನ್ನು ಕಂಡುಹಿಡಿದು, ಅದಕ್ಕೆ ಪರಿಹಾರ ಸೂಚಿಸುವ ಮೂಲಕ ಜನರ ಆರೋಗ್ಯಕರ ಜೀವನಕ್ಕೆ ಸಂಸ್ಥೆ ಪೂರಕವಾಗಿ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು. ಇದನ್ನೂ ಓದಿ: ಮೊಟ್ಟೆ ಹೊಡೆದ ಸಂಪತ್ ಕಾಂಗ್ರೆಸ್ ಕಾರ್ಯಕರ್ತ ಅಲ್ಲ – ಪಕ್ಕಾ RSS ಕಾರ್ಯಕರ್ತ: ಸಿದ್ದರಾಮಯ್ಯ
ಜನರ ಆರೋಗ್ಯವನ್ನು ನೈಸರ್ಗಿಕವಾಗಿ ಕಾಪಾಡುವತ್ತ ಗಮನ ಹರಿಸಬೇಕು. ಅಭಿವೃದ್ಧಿಯ ಹೆಸರಿನಲ್ಲಿ ಕೀಟನಾಶಕ, ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಬೇಕು. ರೈತರು ವೈಜ್ಞಾನಿಕ ಬೆಳೆ ಬೆಳೆಯುವುದರಲ್ಲಿ ಪರಿಣಿತರಾಗಿದ್ದಾರೆ, ಆದರೆ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಾಗುತ್ತಿರುವುದು ಹಲವು ಅನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ನೈಸರ್ಗಿಕ ಕೃಷಿಯತ್ತ ಗಮನಹರಿಸಬೇಕೆಂದು ಹೇಳಿದರು.
ಮಣ್ಣಿನ ಸಂರಕ್ಷಣೆ ಕುರಿತು ಸಂಶೋಧನೆಯಾಗಬೇಕು. ಮುಂದಿನ 18 ತಿಂಗಳಲ್ಲಿ ಕ್ಯಾಂಪಸ್ ಪೂರ್ಣ ಪ್ರಮಾಣದಲ್ಲಿ ಸಿದ್ಧಪಡಿಸಲಾಗುವುದು. ಇದಕ್ಕೆ ಅಗತ್ಯವಿರುವ ಎಲ್ಲಾ ಸಹಕಾರ ನೀಡಲು ಸರ್ಕಾರ ಸಿದ್ಧವಾಗಿದ್ದು, ಸ್ಥಳೀಯ ಮುಖಂಡರು ಮತ್ತು ಸಾರ್ವಜನಿಕರು ಸಹಕಾರ ನೀಡುವಂತೆ ಕೋರಿದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ಜೀವ ಬೆದರಿಕೆ- ತನಿಖೆ ಮಾಡಿಸ್ತೀವಿ ಎಂದ ಸಿಎಂ