ನವದೆಹಲಿ ಸಮೀಪದ ಫರೀದಾಬಾದಿನಲ್ಲಿ ನಡೆದಿರುವ ‘ವಿಜ್ಞಾನಿಕ’ ವಿಜ್ಞಾನ ಸಾಹಿತ್ಯ ಹಬ್ಬದಲ್ಲಿ ಕನ್ನಡದ ನಾಟಕವೊಂದು ಪ್ರದರ್ಶನಗೊಂಡು ಗಮನಸೆಳೆದಿದೆ. ವಿಜ್ಞಾನಿ ರಿಚರ್ಡ್ ಫೈನ್ಮನ್ ಜೀವನವನ್ನು ಆಧರಿಸಿದ ‘ಕ್ಯೂಇಡಿ’ ನಾಟಕವನ್ನು ಮೈಸೂರಿನ ಅರಿವು ರಂಗದ ಕಲಾವಿದರು ಇಂದು (ಜ.18) ಪ್ರದರ್ಶಿಸಿದರು.
ದೇಶದ ವಿವಿಧ ಭಾಗಗಳಿಂದ ಬಂದಿದ್ದ ವೀಕ್ಷಕರಿಗಾಗಿ ಹಿರಿಯ ಲೇಖಕ ಶ್ರೀ ಕೊಳ್ಳೇಗಾಲ ಶರ್ಮ ಅವರು ನಾಟಕದ ಪರಿಚಯವನ್ನು ಇಂಗ್ಲಿಷಿನಲ್ಲಿ ಮಾಡಿಕೊಟ್ಟರು. ಹೊರರಾಜ್ಯಗಳ ಪ್ರತಿನಿಧಿಗಳಿಗೆ ಕನ್ನಡ ನಾಟಕ ಹೊಸ ಅನುಭವ ಕೊಟ್ಟರೆ, ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಪ್ರತಿನಿಧಿಗಳಿಗೆ ದೆಹಲಿಯ ಚಳಿಯ ನಡುವೆ ಕನ್ನಡ ಕಾರ್ಯಕ್ರಮ ಬೆಚ್ಚನೆ ಅನುಭವ ಮೂಡಿಸಿತು.
Advertisement
ಕೇಂದ್ರ ಸರ್ಕಾರ ಹಾಗೂ ವಿಜ್ಞಾನ ಭಾರತಿ ಆಶ್ರಯದಲ್ಲಿ ಆಯೋಜಿಸಲಾಗಿರುವ ಇಂಡಿಯಾ ಇಂಟರ್ನ್ಯಾಷನಲ್ ಸೈನ್ಸ್ ಫೆಸ್ಟಿವಲ್ (India International Science Festival) ಅಂಗವಾಗಿ ಈ ವಿಜ್ಞಾನ ಸಾಹಿತ್ಯ ಹಬ್ಬ ನಡೆದಿದೆ. ಇದನ್ನೂ ಓದಿ: ರೂಬಿಕ್ಸ್ ಕ್ಯೂಬ್‍ನಲ್ಲಿ ಶ್ರೀರಾಮನ ಚಿತ್ರ ಮೂಡಿಸಿದ 12ರ ಬಾಲಕ
Advertisement
Advertisement
‘ಭಾರತದಲ್ಲಿ ವಿಜ್ಞಾನ ಸಂವಹನ’ ಕುರಿತ ಗೋಷ್ಠಿಯಲ್ಲಿ ಲೇಖಕ ಟಿ. ಜಿ. ಶ್ರೀನಿಧಿ ಪಾಲ್ಗೊಂಡು, ವಿಜ್ಞಾನ ಸಂವಹನದಲ್ಲಿ ಇನ್ಫೋಗ್ರಾಫಿಕ್ ಗಳ ಬಳಕೆಯ ಬಗ್ಗೆ ಮಾತನಾಡಿದರು. ಚಿತ್ರಗಳು ಹಾಗೂ ಪಠ್ಯವನ್ನು ಆಕರ್ಷಕ ವಿನ್ಯಾಸದಲ್ಲಿ ಒಟ್ಟುಸೇರಿಸಿ ರೂಪಿಸಿದ ಇನ್ಫೋಗ್ರಾಫಿಕ್ ಗಳನ್ನು ಮಕ್ಕಳಿಗೆ ವಿಜ್ಞಾನದ ಪರಿಕಲ್ಪನೆಗಳನ್ನು ಪರಿಚಯಿಸಲು ಬಳಸಬಹುದೇ ಎನ್ನುವ ಬಗ್ಗೆ ಇಜ್ಞಾನ ಟ್ರಸ್ಟ್ ನಡೆಸಿದ ಚಟುವಟಿಕೆಯನ್ನು ಅವರು ಪರಿಚಯಿಸಿದರು. ಈ ಅಧ್ಯಯನಕ್ಕೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ನೆರವು ನೀಡಿತ್ತು.
Advertisement
ಜನಪ್ರಿಯ ವಿಜ್ಞಾನ ಸಂವಹನ ಕೈಗೊಳ್ಳುವ ಕುರಿತು ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಗುಬ್ಬಿ ಲ್ಯಾಬ್ಸ್ ನಿರ್ದೇಶಕ ಹಾಗೂ ಕನ್ನಡ ವಿಜ್ಞಾನ ಲೇಖಕ ಡಾ. ಹೆಚ್. ಎಸ್. ಸುಧೀರ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು. ವಿಜ್ಞಾನದ ಕಠಿಣ ಪರಿಕಲ್ಪನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕುರಿತು ಅವರು ಮಾತನಾಡಿದರು.
ನಾಳೆ (ಜ.19) ನಡೆಯಲಿರುವ ಸೃಜನಾತ್ಮಕ ವಿಜ್ಞಾನ ಸಂವಹನ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಶ್ರೀ ಕೊಳ್ಳೇಗಾಲ ಶರ್ಮ ಭಾಗವಹಿಸಲಿದ್ದಾರೆ.