ಸಾಂಸ್ಕೃತಿಕ, ಸಾಹಿತ್ಯಿಕ, ಆರ್ಥಿಕವಾಗಿ ಸಂಪದ್ಭರಿತವಾಗಿದ್ದ ಭರತಖಂಡ ಜಗತ್ತಿನಲ್ಲೇ ವಿಶೇಷ ಸ್ಥಾನ ಪಡೆದಿತ್ತು. ವೇದೋಪನಿಷತ್, ರಾಮಾಯಣ-ಮಹಾಭಾರತದಂತಹ ಉತ್ಕೃಷ್ಟ ಜ್ಞಾನ ಭಂಡಾರಗಳ ಸೃಷ್ಟಿ. ಚಿನ್ನ, ಬೆಳ್ಳಿ, ವಜ್ರ ವೈಡೂರ್ಯ, ಕಲೆ-ಸಾಹಿತ್ಯ-ವಾಸ್ತುಶಿಲ್ಪ ಶ್ರೀಮಂತಿಕೆಯಿಂದ ಕೂಡಿದ ರಾಜರ ಆಡಳಿತ. ಹಿಮಾಲಯ, ಅರಣ್ಯ ಸಂಪತ್ತು, ಫಲವತ್ತಾದ ಮಣ್ಣಿನಲ್ಲಿ ಬಿತ್ತಿದ್ದೆಲ್ಲವೂ ಚಿನ್ನ. ಹೆಜ್ಜೆ ಹೆಜ್ಜೆಗೂ ಸಿಗುವ ನಾನಾ ಭಾಷೆಯ, ಭಿನ್ನ ಸಂಸ್ಕೃತಿಯ ಜಯ. ಏನುಂಟು ಏನಿಲ್ಲ.. ಇಂತಹ ಸಕಲ ಶ್ರೀಮಂತಿಕೆಯ ದೇಶ ಪರಕೀಯರ ಕಣ್ಣು ಕುಕ್ಕಿದ್ದು ಇತಿಹಾಸ ಸತ್ಯ.
ಭರತಖಂಡದ ಸಕಲ ಸಂಪತ್ತನ್ನು ದೋಚಲು ಇತಿಹಾಸದುದ್ದಕ್ಕೂ ಪರಕೀಯರು ನಡೆಸಿದ ದಾಳಿಗಳಿಗೆ ಲೆಕ್ಕವಿಲ್ಲ. ಮೊಘಲರು, ಫ್ರೆಂಚರು, ಡಚ್ಚರು, ಪೋರ್ಚುಗೀಸರು, ಬ್ರಿಟಿಷರು.. ಹೀಗೆ ಒಬ್ಬೊಬ್ಬರಾಗಿ ದಾಳಿ ನಡೆಸಿ ಭಾರತದ ಸಂಪತ್ತನ್ನು ಲೂಟಿ ಮಾಡಿದರು. ಆದರೆ ಬ್ರಿಟಿಷರು ಮಾತ್ರ ದಶಕಗಳ ಕಾಲ ಉಳಿದು ಸಂಪತ್ತನ್ನು ದೋಚಿದರು. ಬಿಳಿಯರ ದಬ್ಬಾಳಿಕೆ, ದೌರ್ಜನ್ಯದಿಂದ ಬೇಸತ್ತಿದ್ದ ಕೋಟ್ಯಂತರ ಭಾರತೀಯರ ಸಹನೆ ಕಟ್ಟೆ ಒಮ್ಮೆಲೆ ಒಡೆದು ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿತು. ಸುಮಾರು 90 ವರ್ಷಗಳ ಬ್ರಿಟಿಷ್ (British) ಆಳ್ವಿಕೆಯ ನಂತರ ಭಾರತವು ಅಂತಿಮವಾಗಿ ಸ್ವಾತಂತ್ರ್ಯವನ್ನು ಪಡೆದಾಗ 1947, ಆಗಸ್ಟ್ 15 ಆಗಿತ್ತು. ಅಂದು ಮಧ್ಯರಾತ್ರಿ ಭಾರತ ಪರಿಪೂರ್ಣವಾಗಿ ದಾಸ್ಯದ ಸಂಕೋಲೆಯಿಂದ ಹೊರಬಂದು ಸ್ವತಂತ್ರವಾಯಿತು.
Advertisement
ಭಾರತೀಯರಿಗೆ (India) ಸ್ವಾತಂತ್ರ್ಯ ಸುಲಭವಾಗಿ ದಕ್ಕಿದ್ದಲ್ಲ. ಹೋರಾಟಗಾರರು, ಕ್ರಾಂತಿಕಾರಿಗಳ ತ್ಯಾಗ-ಬಲಿದಾನದಿಂದ ನಾವಿಂದು ಭಾರತದ ಪ್ರಜೆಗಳಾಗಿದ್ದೇವೆ. ಭಾರತ ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯ ದೇಶವಾಗಿದೆ. ಆಗಸ್ಟ್ 15 ನಮಗೆ ಸ್ವಾತಂತ್ರ್ಯ ಸಿಕ್ಕ ದಿನ. ಪ್ರತಿ ವರ್ಷ ಆ ದಿನವನ್ನು ದೇಶದೆಲ್ಲೆಡೆ ಆಚರಿಸುತ್ತೇವೆ. ಈ ದಿನ, ದೇಶಕ್ಕಾಗಿ ಹೋರಾಡಿ ಮಡಿದ ಹೋರಾಟಗಾರರು, ವೀರ ಯೋಧರನ್ನು ಸ್ಮರಿಸುತ್ತೇವೆ. ನಮ್ಮ ದೇಶ, ನಮ್ಮ ತನ, ನಮ್ಮ ಸಂಸ್ಕೃತಿ ಎಂದು ಹೆಮ್ಮೆಯಿಂದ ಬೀಗುತ್ತೇವೆ. ಆ ದಿನ ಮತ್ತೆ ಬಂದಿದೆ. ಸ್ವತಂತ್ರ್ಯ ಸಂಭ್ರಮದ ಹೊತ್ತಲ್ಲಿ ಸಂಗ್ರಾಮದ ಇತಿಹಾಸವನ್ನೊಮ್ಮೆ ಮೆಲುಕು ಹಾಕೋಣ. ಇದನ್ನೂ ಓದಿ: ಆ.20 ರಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಆರಂಭ
Advertisement
Advertisement
ಭಾರತದ ಸ್ವಾತಂತ್ರ್ಯ ಇತಿಹಾಸವೇನು?
ಭಾರತದ ಸ್ವಾತಂತ್ರ‍್ಯ ಹೋರಾಟವು ಒಂದು ಶತಮಾನಕ್ಕೂ ಹೆಚ್ಚು ಕಾಲ ನಡೆದ ಸುದೀರ್ಘ ಪ್ರಯಾಣವಾಗಿತ್ತು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು 17 ನೇ ಶತಮಾನದ ಆರಂಭದಲ್ಲಿ ಕೇವಲ ವ್ಯಾಪಾರಿಗಳಾಗಿ ಭಾರತಕ್ಕೆ ಬಂದು, ನಿಧಾನವಾಗಿ ಭೂಮಿಗೆ ದಾರಿ ಮಾಡಿಕೊಂಡರು. ಭಾರತಕ್ಕೆ ಸೇರಿದ ಸಂಪನ್ಮೂಲಗಳನ್ನು ಸ್ವಾಧೀನಪಡಿಸಿಕೊಂಡರು. ರಾಷ್ಟ್ರವನ್ನು ವಸಾಹತುವನ್ನಾಗಿ ಮಾಡಿದರು. ತದನಂತರ 19 ನೇ ಶತಮಾನದ ವೇಳೆಗೆ, ಬ್ರಿಟಿಷ್ ಕ್ರೌನ್ ಭಾರತದ ನಿಯಂತ್ರಣವನ್ನು ತೆಗೆದುಕೊಂಡಿತು. ಅದನ್ನು ನೇರ ವಸಾಹತುವನ್ನಾಗಿ ಮಾಡಿತು. ಬ್ರಿಟಿಷರ ನಿರಂತರ ದಬ್ಬಾಳಿಕೆ, ಗುಲಾಮಗಿರಿಯಿಂದ ನೊಂದಿದ್ದ ಜನ ತಿರುಗಿಬಿದ್ದರು. ಬ್ರಿಟಿಷರ ವಿರುದ್ಧ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹುಟ್ಟುಕೊಂಡಿತು.
Advertisement
ಮಹಾತ್ಮ ಗಾಂಧಿ (Mahatma Gandhi) ಭಾರತಕ್ಕೆ ಬಂದಾಗ ಚಳವಳಿಗೆ ನಿಜವಾದ ಪುಶ್ ಬಂದಿತು. ಅವರ ನಾಯಕತ್ವದಲ್ಲಿ ಅಹಿಂಸಾತ್ಮಕ ಪ್ರತಿರೋಧ ಅಥವಾ ಸತ್ಯಾಗ್ರಹದ ಪರಿಕಲ್ಪನೆಗಳು ತಿಳಿದುಬಂದವು. ಶಾಂತಿಯುತ ಪ್ರತಿಭಟನೆ ಪರಿಕಲ್ಪನೆಯ ಮೂಲಕ ಗಾಂಧಿಯವರು ಭಾರತಕ್ಕೆ ಅಸಹಕಾರ ಚಳವಳಿ, ನಾಗರಿಕ ಅಸಹಕಾರ ಚಳವಳಿ ಮತ್ತು ಕ್ವಿಟ್ ಇಂಡಿಯಾ ಚಳವಳಿಯನ್ನು ನೀಡಿದರು. ವಿಶ್ವ ಸಮರ-2 ನಿಂದ ಬ್ರಿಟಿಷರ ನಿಯಂತ್ರಣ ಭಾರತದಲ್ಲಿ ದುರ್ಬಲಗೊಂಡಿತು. ಸ್ವಾತಂತ್ರ‍್ಯದ ಬೇಡಿಕೆ ಎದುರಿಸಲಾಗದಂತಾಯಿತು. ಬ್ರಿಟಿಷರು ಅಂತಿಮವಾಗಿ ಸ್ವಾತಂತ್ರ್ಯ ನೀಡಲು ಒಪ್ಪಿಕೊಳ್ಳಲು ಕಾರಣವಾಯಿತು. ಆಗಸ್ಟ್ 15, 1947 ರಂದು, ಭಾರತವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಲಾಯಿತು. ಇದು 200 ವರ್ಷಗಳ ವಸಾಹತುಶಾಹಿ ಆಳ್ವಿಕೆಯನ್ನು ಕೊನೆಗೊಳಿಸಿತು.
ಸ್ವಾತಂತ್ರ್ಯ ದಿನದ ಮಹತ್ವವೇನು?
ಹೋರಾಟ, ತ್ಯಾಗ, ಬಲಿದಾನದ ಫಲ ಈ ಸ್ವಾತಂತ್ರ್ಯ. ಬ್ರಿಟಿಷರ ದಬ್ಬಾಳಿಕೆಯ ಅಂತ್ಯ ಮತ್ತು ಸಾರ್ವಭೌಮ ರಾಷ್ಟ್ರದ ಉದಯವನ್ನು ಸೂಚಿಸುವ ದಿನ. ಸ್ವಾತಂತ್ರ‍್ಯ ದಿನವು (Independence day) ನ್ಯಾಯ, ಸಮಾನತೆ ಮತ್ತು ಸ್ವ-ನಿರ್ಣಯದ ಹಕ್ಕನ್ನು ಪ್ರತಿನಿಧಿಸುತ್ತದೆ.
ಆಚರಣೆ ಹೇಗೆ?
ಸ್ವಾತಂತ್ರ್ಯ ದಿನವನ್ನು ವಿವಿಧ ವಯಸ್ಸಿನ ಜನರು ವಿಭಿನ್ನವಾಗಿ ಆಚರಿಸುತ್ತಾರೆ. ರಾಷ್ಟ್ರೀಯ ಮಟ್ಟದಲ್ಲಿ ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಸಮಾರಂಭದೊಂದಿಗೆ ಪ್ರಾರಂಭವಾಗುತ್ತದೆ. ಪ್ರತಿ ವರ್ಷ, ಭಾರತದ ಪ್ರಧಾನ ಮಂತ್ರಿ ತಿರಂಗಾವನ್ನು ಹಾರಿಸುತ್ತಾರೆ. ನಂತರ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ. ಭಾಷಣದಲ್ಲಿ ಕಳೆದ ವರ್ಷದಲ್ಲಿ ದೇಶದ ಸಾಧನೆಗಳು, ಮುಂದಿರುವ ಸವಾಲುಗಳು ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡುತ್ತಾರೆ.
ಶಾಲಾ-ಕಾಲೇಜುಗಳು ಹಾಗೂ ವಿವಿಧ ಸಂಸ್ಥೆಗಳಲ್ಲಿ ಧ್ವಜಾರೋಹಣ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಸ್ವಾತಂತ್ರ‍್ಯ ಚಳವಳಿಯ ವೀರರನ್ನು ಸ್ಮರಿಸಲು, ಯುವ ಪೀಳಿಗೆಯಲ್ಲಿ ಹೆಮ್ಮೆ ಮತ್ತು ದೇಶಭಕ್ತಿಯ ಭಾವವನ್ನು ಮೂಡಿಸಲು ದೇಶಭಕ್ತಿ ಗೀತೆಗಳು, ನೃತ್ಯಗಳು ಮತ್ತು ಕಿರುನಾಟಕಗಳನ್ನು ಪ್ರದರ್ಶಿಸಲಾಗುತ್ತದೆ. ಶಾಲಾ-ಕಾಲೇಜುಗಳಲ್ಲಿ ಎನ್‌ಸಿಸಿ ಕೆಡೆಟ್‌ಗಳು ಪರೇಡ್‌ಗಳನ್ನು ನಡೆಸುತ್ತಾರೆ. ಮಕ್ಕಳಿಗೆ ಸಿಹಿ ಹಂಚಲಾಗುತ್ತದೆ.
ಸ್ವಾತಂತ್ರ್ಯದ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳು.
ಸ್ವಾತಂತ್ರ್ಯ ಮತ್ತು ವಿಭಜನೆ: ಭಾರತದ ಸ್ವಾತಂತ್ರ‍್ಯದ ಜೊತೆಗೆ ಭಾರತ (India) ಮತ್ತು ಪಾಕಿಸ್ತಾನದ (Pakistan) ವಿಭಜನೆಯ ದಿನವೂ ಆಗಿದೆ. ವಿಭಜನೆಯು ಜನರ ಸ್ಥಳಾಂತರ ಮತ್ತು ಕೋಮುಗಲಭೆಗೆ ಕಾರಣವಾಯಿತು. ಇದು ಇತಿಹಾಸದಲ್ಲಿ ದುಃಖದ ಸಂದರ್ಭವಾಗಿದೆ.
ಮೊದಲ ಭಾಷಣ: ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಸ್ವಾತಂತ್ರ‍್ಯ ದಿನಾಚರಣೆಯ ಮುನ್ನಾದಿನದಂದು ‘ಟ್ರಿಸ್ಟ್ ವಿತ್ ಡೆಸ್ಟಿನಿ’ ಭಾಷಣ ಮಾಡಿದರು. ಮಧ್ಯರಾತ್ರಿಯ ಗಂಟೆಯ ಸದ್ದಲ್ಲಿ ಜಗತ್ತು ನಿದ್ರಿಸುವಾಗ, ಭಾರತವು ಜೀವನ ಮತ್ತು ಸ್ವಾತಂತ್ರ‍್ಯಕ್ಕೆ ಎಚ್ಚರಗೊಂಡಿದೆ’ ಎಂದು ಭಾಷಣ ಮಾಡಿದ್ದರು.
ತಿರಂಗಾ: ಪಿಂಗಲಿ ವೆಂಕಯ್ಯ ವಿನ್ಯಾಸಗೊಳಿಸಿದ ಭಾರತದ ರಾಷ್ಟ್ರಧ್ವಜವನ್ನು ಜುಲೈ 22, 1947 ರಂದು ಅಳವಡಿಸಿಕೊಳ್ಳಲಾಯಿತು. ತ್ರಿವರ್ಣವು ಭಾರತದ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ. ಧೈರ್ಯ ಮತ್ತು ತ್ಯಾಗಕ್ಕಾಗಿ ಕೇಸರಿ, ಶಾಂತಿ ಮತ್ತು ಸತ್ಯಕ್ಕಾಗಿ ಬಿಳಿ ಹಾಗೂ ನಂಬಿಕೆಗೆ ಹಸಿರು. ಮಧ್ಯದಲ್ಲಿರುವ ಅಶೋಕ ಚಕ್ರವು ನ್ಯಾಯದ ಸಂಕೇತವಾಗಿದೆ.
ಎಚ್ಚರಿಕೆ ಮತ್ತು ಭದ್ರತೆ: ಸ್ವಾತಂತ್ರ್ಯ ದಿನದ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು, ದೇಶದಾದ್ಯಂತ ವಿಶೇಷವಾಗಿ ರಾಜಧಾನಿ ದೆಹಲಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗುತ್ತದೆ. ಪ್ರಧಾನಮಂತ್ರಿ ಧ್ವಜಾರೋಹಣ ಮಾಡುವ ಕೆಂಪು ಕೋಟೆಗೆ ಬಿಗಿ ಭದ್ರತೆ ಒದಗಿಸಲಾಗುತ್ತದೆ.
ಹೋರಾಟ: ಆಗಸ್ಟ್ 15, 1947ರಲ್ಲಿ ಬ್ರಿಟಿಷರ ಆಳ್ವಿಕೆ ಅಂತ್ಯಗೊಂಡರೂ, ಏಕೀಕೃತ ಮತ್ತು ಶಾಂತಿಯುತ ರಾಷ್ಟ್ರಕ್ಕಾಗಿ ಹೋರಾಟವು ಹೆಚ್ಚು ಕಾಲ ಮುಂದುವರೆಯಿತು. ಒಂದೆಡೆ ಸ್ವಾತಂತ್ರ್ಯ ಹಾಗೂ ಮತ್ತೊಂದೆಡೆ ವಿಭಜನೆಯಿಂದಾಗಿ ಹಿಂಸಾಚಾರ, ಕೋಮು ಗಲಭೆಗಳು ಮತ್ತು ಜೀವಹಾನಿಗಳು ಸಂಭವಿಸಿದವು. ಒಂದು ಕಾಲದಲ್ಲಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಜನರು ಕೆಲವೇ ಗಂಟೆಗಳಲ್ಲಿ ಬದ್ಧ ವೈರಿಗಳಾದರು.
ಸ್ವಾತಂತ್ರ್ಯ ಹೋರಾಟಗಾರರು: ಸ್ವಾತಂತ್ರ‍್ಯ ದಿನಾಚರಣೆಯು ಅನೇಕ ಸ್ವಾತಂತ್ರ‍್ಯ ಹೋರಾಟಗಾರರ ಸಂಯೋಜಿತ ಕೊಡುಗೆಯಾಗಿದೆ. ಲಾಲ್ ಲಜಪತ್ ರಾಯ್ ಅವರಿಂದ ಹಿಡಿದು ಮಹಾತ್ಮ ಗಾಂಧಿಯವರೆಗೆ.. ಸುಭಾಷ್ ಚಂದ್ರ ಬೋಸ್‌ರಿಂದ ಹಿಡಿದು ಭಗತ್ ಸಿಂಗ್ ವರೆಗೆ.. ಪ್ರತಿಯೊಬ್ಬರೂ ಭಾರತವನ್ನು ಸೆರೆಯಿಂದ ಮುಕ್ತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸುಭಾಸ್ ಚಂದ್ರ ಬೋಸ್ ಅವರು ಸ್ವಾತಂತ್ರ್ಯಕ್ಕಾಗಿ ಉಗ್ರಗಾಮಿ ಧೋರಣೆ ಅನುಸರಿಸಿದರು. ಮಹಾತ್ಮ ಗಾಂಧಿಯವರು ಅಹಿಂಸಾತ್ಮಕ ಮಾರ್ಗದಿಂದ ಬ್ರಿಟಿಷರಿಗೆ ಪ್ರತಿರೋಧವೊಡ್ಡಿದರು. ಇಬ್ಬರದೂ ಭಿನ್ನ ಹೋರಾಟವಾದರೂ ಅಂತಿಮವಾಗಿ ಭಾರತದ ಸ್ವಾತಂತ್ರ್ಯಕ್ಕೆ ಕಾರಣವಾಯಿತು.
ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಕೊಡುಗೆಯೂ ಇದೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿಯಿಂದ ಸರೋಜಿನಿ ನಾಯ್ಡುವರೆಗೆ ಅಸಂಖ್ಯ ಮಹಿಳೆಯರು ಭಾರತ ಮಾತೆಯ ಸ್ವಾತಂತ್ರ್ಯಕ್ಕಾಗಿ ಮುಂಚೂಣಿಯಲ್ಲಿದ್ದರು ಎಂಬುದನ್ನು ಯಾರೂ ಮರೆಯಬಾರದು.