ವಿದೇಶಕ್ಕೆ ಭಾರತದ ಬ್ರಹ್ಮೋಸ್‌ – ಶಸ್ತ್ರಾಸ್ತ ರಫ್ತು ಎಷ್ಟಿತ್ತು? ಎಷ್ಟು ಏರಿಕೆಯಾಗಿದೆ?

Public TV
6 Min Read
India In Talks With Over 12 Countries For Exports Of BrahMos Missiles

ಸ್ತ್ರಾಸ್ತ್ರಗಳನ್ನು ಆಮದು ಮಾಡುಕೊಳ್ಳುವ ಟಾಪ್‌ ರಾಷ್ಟ್ರಗಳಲ್ಲಿ ಭಾರತ (India) ಮೊದಲನೇಯ ಸ್ಥಾನದಲ್ಲಿದೆ. ಆದರೆ ಈಗ ಭಾರತ ಶಸ್ತ್ರಾಸ್ತ್ರಗಳನ್ನು ರಫ್ತು (Arms Export) ಮಾಡುವ ದೇಶವಾಗಿ ನಿಧಾನವಾಗಿ ಹೊರಹೊಮ್ಮುತ್ತಿದೆ. ಇದರ ಭಾಗವಾಗಿ ಈಗ ಭಾರತ ವಿಶ್ವದ 12 ದೇಶಗಳಿಗೆ ಬ್ರಹ್ಮೋಸ್‌ ಕ್ಷಿಪಣಿಯನ್ನು (BrahMos Missile) ರಫ್ತು ಮಾಡಲು ಮಾತುಕತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಬ್ರಹ್ಮೋಸ್‌ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿದ್ದು ಹೇಗೆ? ಬ್ರಹ್ಮೋಸ್‌ ಕ್ಷಿಪಣಿ ವಿಶೇಷತೆ ಏನು? ಮಿಸೈಲ್‌ ಮ್ಯಾನ್‌ ಅಬ್ದುಲ್‌ ಕಲಾಂ (APJ Abdul Kalam) ಪಾತ್ರ ಏನು? ಪಾಕಿಸ್ತಾನಕ್ಕೆ ಈ ಕ್ಷಿಪಣಿ ಹಾರಿದ್ದು ಹೇಗೆ? 10 ವರ್ಷದ ಹಿಂದೆ ಶಸ್ತ್ರಾಸ್ತ್ರ ರಫ್ತು ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ? ಈ ಎಲ್ಲಾ ವಿಷಯಗಳ ಬಗ್ಗೆ ಕೆಲ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಸ್ವಾತಂತ್ರ್ಯ ಸಿಕ್ಕಿದ ಬಳಿಕ ಭಾರತ ಶಾಂತಿ ಮಂತ್ರವನ್ನು ಅನುಸರಿಸಿದರೂ ಪಾಕಿಸ್ತಾನ (Pakistan) ಮತ್ತು ಚೀನಾದ (China) ಮಧ್ಯೆ ಯುದ್ಧ ನಡೆಸಬೇಕಾಯಿತು. 1947, 1965, 1971 ರಲ್ಲಿ ಪಾಕಿಸ್ತಾನದ ಜೊತೆ 1962 ರಲ್ಲಿ ಚೀನಾದ ಜೊತೆ ಯುದ್ಧ ಮಾಡಬೇಕಾಯಿತು. ಪಾಕಿಸ್ತಾನ ಜೊತೆಗಿನ ಮೂರು ಯುದ್ಧದಲ್ಲಿ ಭಾರತ ಗೆದ್ದರೆ ಚೀನಾದ ವಿರುದ್ಧ ಭಾರತ ಸೋತಿತ್ತು. ಗಡಿಯಲ್ಲಿರುವ ಈ ದೇಶಗಳ ಕಿರಿಕಿರಿ ಜಾಸ್ತಿ ಆಗುತ್ತಿದ್ದಂತೆ ಭಾರತ ಸರ್ಕಾರ ರಕ್ಷಣೆಗೆ ಹೆಚ್ಚು ಒತ್ತು ನೀಡಲು ಆರಂಭಿಸಿತು. ಅಷ್ಟೇ ಅಲ್ಲದೇ ಸ್ವಂತ ಕ್ಷಿಪಣಿ ಅಭಿವೃದ್ಧಿ ಪಡಿಸಲು ಮುಂದಾಯಿತು.

 

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾದ ಡಿಆರ್‌ಡಿಒ ವಿಜ್ಞಾನಿಗಳು 1989ರಲ್ಲೇ ಅಗ್ನಿ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿ ಪರೀಕ್ಷಾರ್ಥ ಪ್ರಯೋಗ ನಡೆಸಿದ್ದರು. ಈ ಸಂದರ್ಭದಲ್ಲಿ ಧ್ವನಿಗಿಂತ ವೇಗವಾಗಿ ಸಂಚರಿಸುವ ಸೂಪರ್‌ ಸಾನಿಕ್‌ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಲು ಭಾರತ ಮುಂದಾಯಿತು. ಆದರೆ ಅದಕ್ಕೆ ಬೇಕಾದ ತಂತ್ರಜ್ಞಾನ ಭಾರತದ ಬಳಿ ಇರಲಿಲ್ಲ. ಅಣುಬಾಂಬ್ ಪರೀಕ್ಷೆ ಮಾಡಿದ ಬಳಿಕ ಅಮೆರಿಕ ಭಾರತದ ಮೇಲೆ ಹಲವು ದಿಗ್ಭಂಧನ ವಿಧಿಸಿತ್ತು. ಈ ಸಂದರ್ಭದಲ್ಲಿ ಭಾರತ ಮತ್ತು ರಷ್ಯಾದ ಸಂಬಂಧ ಚೆನ್ನಾಗಿತ್ತು. ಕೊನೆಗೆ ಭಾರತ ಮತ್ತು ರಷ್ಯಾದ ಜಂಟಿ ಹೂಡಿಕೆಯಲ್ಲಿ ಬ್ರಹ್ಮೋಸ್‌ ಕಂಪನಿ 1998ರಲ್ಲಿ ಸ್ಥಾಪನೆಯಾಯಿತು. ಕ್ಷಿಪಣಿ ಮನುಷ್ಯ ಅಬ್ಧುಲ್‌ ಕಲಾಂ ಮತ್ತು ರಷ್ಯಾದ ರಕ್ಷಣಾ ಸಚಿವ ಮಿಖಾಲಿವೋ ಫೆಬ್ರವರಿ 12 ರಂದು ಮಾಸ್ಕೋದಲ್ಲಿ ಸಹಿ ಹಾಕಿದರು. ಬ್ರಹ್ಮೋಸ್ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ರಷ್ಯಾದ NPOM ನಡುವಿನ ಜಂಟಿ ಉದ್ಯಮವಾಗಿದೆ. ಬಹ್ಮಪುತ್ರ ಮತ್ತು ರಷ್ಯಾದ ಮಾಸ್ಕೋವಾ ನದಿಗಳನ್ನು ಪ್ರತಿನಿಧಿಸಲು ಈ ಕ್ಷಿಪಣಿಗೆ ಬ್ರಹ್ಮೋಸ್‌ ಎಂದು ಹೆಸರನ್ನು ಇಡಲಾಯಿತು. 250 ಮಿಲಿಯನ್‌ ಡಾಲರ್‌ ಹೂಡಿಕೆಯ ಕಂಪನಿಯಲ್ಲಿ ಭಾರತದ ಪಾಲು ಶೇ.50.5 ಇದ್ದರೆ ರಷ್ಯಾದ ಪಾಲು ಶೇ.49.5 ಇದೆ.  ಇದನ್ನೂ ಓದಿ: ನೀಲಿ ಬಣ್ಣದ ಜೀನ್ಸ್‌ ಬ್ಯಾನ್‌, ಆತ್ಮಹತ್ಯೆಗೈದ್ರೆ ಕುಟುಂಬಕ್ಕೆ ಶಿಕ್ಷೆ – ಉತ್ತರ ಕೊರಿಯಾದಲ್ಲಿದೆ ವಿಚಿತ್ರ ಕಾನೂನುಗಳು

ಬ್ರಹ್ಮೋಸ್‌ ವಿಶೇಷತೆ ಏನು?
ಚಲಿಸುವ ಪಥದ ಆಧಾರದ ಮೇಲೆ ಕ್ಷಿಪಣಿಗಳನ್ನು ಬ್ಯಾಲಿಸ್ಟಿಕ್‌ ಮತ್ತು ಕ್ರೂಸ್‌ ಕ್ಷಿಪಣಿಗಳಾಗಿ ವಿಂಗಡಿಸಲಾಗುತ್ತದೆ. ಬ್ಯಾಲಿಸ್ಟಿಕ್‌ ಕ್ಷಿಪಣಿ ಭೂಮಿಯ ವಾತಾವರಣವನ್ನು ಬಿಟ್ಟು ಬಾಹ್ಯಾಕಾಶವನ್ನು ಪ್ರವೇಶಿಸಿ ನಂತರ ಭೂಮಿಗೆ ಅಪ್ಪಳಿಸುತ್ತದೆ. ಭಾರತದ ಅಗ್ನಿ, ಪೃಥ್ವಿ ಬ್ಯಾಲಿಸ್ಟಿಕ್‌ ಕ್ಷಿಪಣಿಗಳಾಗಿವೆ.

ballistic missile

ಕ್ರೂಸ್‌ ಕ್ಷಿಪಣಿ ಶಬ್ಧದ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಹೋಗುತ್ತದೆ. ಆರಂಭದಲ್ಲಿ ಕ್ರೂಸ್‌ ಕ್ಷಿಪಣಿ ಕೆಳಹಂತದಲ್ಲಿ ಭೂಮಿಯ ಮೇಲ್ಮೆಗೆ ಸಮಾನಂತರವಾಗಿ ಶಬ್ಧದ ವೇಗಕ್ಕಿಂತ ಕಡಿಮೆ ವೇಗದಲ್ಲಿ ಚಲಿಸಿ ಗುರಿ ತಲುಪುತ್ತಿದ್ದಂತೆ ಇದರ ವೇಗ ಶಬ್ಧದ ವೇಗಕ್ಕಿಂತ ಹೆಚ್ಚಾಗಿ ಕೊನೆಗೆ ಗುರಿಯನ್ನು ತಲುಪುತ್ತದೆ. ಈ ತಂತ್ರಜ್ಞಾನದಿಂದ ಶತ್ರುಗಳ ರೇಡಾರ್‌ಗಳಿಗೆ ಸಹ ಈ ಕ್ಷಿಪಣಿಯ ಪಥವನ್ನು ಅಷ್ಟು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಈ ಕ್ಷಿಪಣಿ ಸಮುದ್ರದ ಒಳಗೆ ಹೋಗಿ ಮತ್ತೆ ಮೇಲೆ ಬರುವ ಸಾಮರ್ಥ್ಯವನ್ನು ಹೊಂದಿದೆ. ಭಾರತದ ಬ್ರಹ್ಮೋಸ್‌ ಕ್ರೂಸ್‌ ಕ್ಷಿಪಣಿಯ ವರ್ಗಕ್ಕೆ ಸೇರುತ್ತದೆ.

ಬ್ರಹ್ಮೋಸ್‌ ಕ್ಷಿಪಣಿಗಳನ್ನು ಭೂಮಿಯಿಂದ, ಬಾನಿನಿಂದ, ಸಮುದ್ರದಿಂದ, ಜಲಾಂತರ್ಗಾಮಿ, ಚಲಿಸುವ ವಾಹನಗಳಿಂದಲೂ ಉಡಾಯಿಸಬಹುದು. ಭೂ ನೆಲೆ ಮತ್ತು ಯುದ್ಧ ನೌಕೆ ಆಧಾರಿತ ಬ್ರಹ್ಮೋಸ್ ಕ್ಷಿಪಣಿಗಳು ಗರಿಷ್ಠ 200 ಕೆಜಿ ಸಿಡಿತಲೆಗಳನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದರೆ ಯುದ್ಧ ವಿಮಾನದಿಂದ ಉಡಾವಣೆಯಾಗುವ ವೇರಿಯೆಂಟ್‌ 300 ಕೆಜಿ ಭಾರವನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ.

cruise missile

ಚಲಿಸುವ ಗುರಿಯನ್ನು ನಿಖರವಾಗಿ ಹೊಡೆದು ಉರುಳಿಸವ ಸಾಮರ್ಥ್ಯ ಬ್ರಹ್ಮೋಸ್‌ಗೆ ಇದೆ. ಶತ್ರು ನೆಲೆಗಳಿಂದ ಬರುವ ಕ್ಷಿಪಣಿ ಹಾದಿಯನ್ನು ತಪ್ಪಿಸುವ ಎಲೆಕ್ಟ್ರಾನ್‌ ಸಂಕೇತಗಳ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳುವ ಸಿಗ್ನಲ್‌ ಜಾಮಿಂಗ್‌ ವ್ಯವಸ್ಥೆ ಬ್ರಹ್ಮೋಸ್‌ನಲ್ಲಿದೆ. ಮೊದಲ ಬಾರಿಗೆ ಬ್ರಹ್ಮೋಸ್‌ ಕ್ಷಿಪಣಿಯನ್ನು 2001ರ ಜೂನ್‌ 12 ರಲ್ಲಿ ಒಡಿಶಾದ ತೀರಪ್ರದೇದೇಶದದಲ್ಲಿ ಪರೀಕ್ಷೆ ಮಾಡಿದ್ದು ಈಗ ಭಾರತದ ಭೂ, ವಾಯು, ನೌಕಾ ಸೇನೆಗೆ ಸೇರ್ಪಡೆಯಾಗಿದೆ. ಇದನ್ನೂ ಓದಿ: ಡಾಲರ್‌ಗೆ ರೂಪಾಯಿ ಸೆಡ್ಡು – ಇಂಟರ್‌ನ್ಯಾಷನಲ್‌ ಕರೆನ್ಸಿ ಆಗುತ್ತಾ?

ಯಾವೆಲ್ಲ ದೇಶಗಳು ಆಸಕ್ತಿ ತೋರಿಸಿವೆ?
ಫಿಲಿಪೈನ್ಸ್‌ ಬ್ರಹ್ಮೋಸ್‌ ನೆವಿ ಮಿಸೈಲ್‌ ಖರೀದಿ ಸಂಬಂಧ 375 ಮಿಲಿಯನ್‌ ಡಾಲರ್‌ ಮೊತ್ತದ ಒಪ್ಪಂದಕ್ಕೆ 2022ರಲ್ಲಿ ಸಹಿ ಹಾಕಿದೆ. ಈ ವರ್ಷದ ಅಂತ್ಯಕ್ಕೆ ಕ್ಷಿಪಣಿ ರಫ್ತು ಆಗುವ ಸಾಧ್ಯತೆಯಿದೆ. ಈಗಾಗಲೇ 12 ದೇಶಗಳ ಜೊತೆ ಭಾರತ ಬ್ರಹ್ಮೋಸ್‌ ಕ್ಷಿಪಣಿ ರಫ್ತು ಸಂಬಂಧ ಮಾತುಕತೆ ನಡೆಸುತ್ತಿದೆ. ಈ ಜುಲೈ ತಿಂಗಳಿನಲ್ಲಿ ಅರ್ಜೆಂಟೀನಾ ರಕ್ಷಣಾ ಸಚಿವರ ಜೊತೆ ಭಾರತದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮಾತುಕತೆ ನಡೆಸಿದ್ದಾರೆ.

India Philippines to sign USD 375 million deal for sale of BrahMos missile

ಬ್ರಹ್ಮೋಸ್‌ ಖರೀದಿಗೆ ಹಲವು ದೇಶಗಳು ಆಸಕ್ತಿ ತೋರಿಸಿದ್ದು ಯಾಕೆ ಎನ್ನುವುದಕ್ಕೆ ಕಾರಣವಿದೆ. ಬ್ರಹ್ಮೋಸ್‌ ಭಾರತದಲ್ಲಿ ಪ್ರಯೋಗ ಯಶಸ್ವಿಯಾಗಿದ್ದು ಈಗಾಗಲೇ ಮೂರು ಸೇನೆಗೆ ಸೇರ್ಪಡೆಯಾಗಿದೆ. ನಿಖರವಾಗಿ ಗುರಿಯನ್ನು ಹೊಡೆಯುವುದು ಅಲ್ಲದೇ ಬೆಲೆಯೂ ಕಡಿಮೆ. ಅಧಿಕೃತವಾಗಿ ಈ ಕ್ಷಿಪಣಿಯ ಬೆಲೆ ಎಷ್ಟು ಎಂಬುದನ್ನು ಸರ್ಕಾರ ತಿಳಿಸದೇ ಇದ್ದರೂ ಮಾಧ್ಯಮಗಳಲ್ಲಿ ಬಂದಿರುವ ಮಾಹಿತಿ ಪ್ರಕಾರ ಒಂದು ಕ್ಷಿಪಣಿಯ ಬೆಲೆ 35 ಕೋಟಿ ರೂ. ಇದೆಯಂತೆ.. ಇದರ ಜೊತೆ ಭಾರತದ ವಿಜ್ಞಾನಿಗಳ ಬಗ್ಗೆ ನಂಬಿಕೆ ಈಗ ವಿಶ್ವಕ್ಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬ್ರಹ್ಮೋಸ್‌ ಖರೀದಿಗೆ ಹಲವು ದೇಶಗಳು ಆಸಕ್ತಿ ತೋರಿಸಿವೆ.

ಪಾಕಿಸ್ತಾನಕ್ಕೆ ಹಾರಿತ್ತು ಬ್ರಹ್ಮೋಸ್‌
ಈ ಬ್ರಹ್ಮೋಸ್‌ ಕ್ಷಿಪಣಿ ಪಾಕಿಸ್ತಾನಕ್ಕೂ ಹಾರಿತ್ತು. 2022ರ ಮಾರ್ಚ್‌ 9ರ ಸಂಜೆಯ ವೇಳೆ ಹರ್ಯಾಣದ ಸಿರ್ಸಾದಿಂದ ಬ್ರಹ್ಮೋಸ್‌ ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಯಾಗಿ ಕೇವಲ 3 ನಿಮಿಷ 44 ಸೆಕೆಂಡ್‌ನಲ್ಲಿ 124 ಕಿ.ಮೀ ಕ್ರಮಿಸಿ ಪಾಕಿಸ್ತಾನದ ಭೂ ಪ್ರದೇಶದ ಒಳಗಡೆ ಬಿದ್ದಿತ್ತು. ಈ ಘಟನೆಯಿಂದ ಯಾವುದೇ ಸಾವು, ನೋವು ಸಂಭವಿಸಲಿಲ್ಲ. ಈ ವಿಷಯವನ್ನು ಇಟ್ಟುಕೊಂಡು ಪಾಕಿಸ್ತಾನ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಕೊನೆಗೆ ಭಾರತ ತಾಂತ್ರಿಕ ಸಮಸ್ಯೆಯಿಂದ ಈ ಕ್ಷಿಪಣಿ ಉಡಾವಣೆಯಾಗಿದೆ ಎಂದು ಹೇಳಿ ವಿಷಾದ ವ್ಯಕ್ತಪಡಿಸಿ ತನಿಖೆ ನಡೆಸುವುದಾಗಿ ಹೇಳಿತ್ತು. ತನಿಖೆಯ ಬಳಿಕ ವಾಯುಸೇನೆಯ ಇಮೇಜ್‌ಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ವಿಂಗ್‌ ಕಮಾಂಡರ್‌ ಅಭಿನವ್‌ ಶರ್ಮಾ ಅವರನ್ನು ಸೇವೆಯಿಂದಲೇ ವಜಾಗೊಳಿಸಿತ್ತು. ಈ ಕ್ಷಿಪಣಿ ಪ್ರಕರಣದಿಂದ ಭಾರತ ಸರ್ಕಾರಕ್ಕೆ 24 ಕೋಟಿ ರೂ. ನಷ್ಟವಾಗಿತ್ತು.

BrahMos

ಶಸ್ತ್ರಾಸ್ತ ರಫ್ತು ಹೆಚ್ಚಳ
ಮೇಕ್‌ ಇನ್‌ ಇಂಡಿಯಾಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವ ಕಾರಣ ಈಗ ಶಸ್ತ್ರಾಸ್ತ್ರಗಳನ್ನು ಭಾರತ ಹೆಚ್ಚು ರಫ್ತು ಮಾಡುತ್ತಿದೆ. ವರ್ಷದಿಂದ ವರ್ಷಕ್ಕೆ ರಫ್ತು ಪ್ರಮಾಣ ಹೆಚ್ಚಾಗುತ್ತಿದೆ. ರಕ್ಷಣಾ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ 2014-15 – 1,941 ಕೋಟಿ ರೂ., 2017-18 – 4,682 ಕೋಟಿ ರೂ., 2018-19- 10,746 ಕೋಟಿ ರೂ., 2021-22- 12,815 ಕೋಟಿ ರೂ., 2022-23 – 15,918 ಕೋಟಿ ರೂ. ಮೊತ್ತದ ರಕ್ಷಣಾ ಸಾಮಾಗ್ರಿಗಳನ್ನು ರಫ್ತು ಮಾಡಿದೆ.

india arms

ಸರ್ಕಾರದ ಅಂಕಿಅಂಶಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ರಫ್ತು ಮಾಡಲಾದ ಪ್ರಮುಖ ರಕ್ಷಣಾ ಸಾಧನಗಳಲ್ಲಿ ಸಿಮ್ಯುಲೇಟರ್, ಅಶ್ರುವಾಯು ಲಾಂಚರ್, ಟಾರ್ಪಿಡೊ-ಲೋಡಿಂಗ್ ಮೆಕ್ಯಾನಿಸಂ, ಅಲಾರ್ಮ್ ಮಾನಿಟರಿಂಗ್ ಮತ್ತು ಕಂಟ್ರೋಲ್, ನೈಟ್ ವಿಷನ್ ಮಾನೋಕ್ಯುಲರ್ ಮತ್ತು ಬೈನಾಕ್ಯುಲರ್, ಅಗ್ನಿಶಾಮಕ ನಿಯಂತ್ರಣ ವ್ಯವಸ್ಥೆಗಳು, ಶಸ್ತ್ರಸಜ್ಜಿತ ರಕ್ಷಣಾ ವಾಹನ, ಶಸ್ತ್ರಾಸ್ತ್ರಗಳನ್ನು ಪತ್ತೆ ಹಚ್ಚುವ ರಾಡಾರ್, ಹೈ ಫ್ರಿಕ್ವೆನ್ಸಿ ರೇಡಿಯೊ ಇತ್ಯಾದಿಗಳನ್ನು ರಫ್ತು ಮಾಡಿವೆ. ಇಟಲಿ, ಶ್ರೀಲಂಕಾ, ರಷ್ಯಾ, ಮಾಲ್ಡೀವ್ಸ್, ಮಾರಿಷಸ್, ನೇಪಾಳ, ಫ್ರಾನ್ಸ್, ಶ್ರೀಲಂಕಾ, ಈಜಿಪ್ಟ್, ಇಸ್ರೇಲ್, ಭೂತಾನ್, ಯುಎಇ, ಸೌದಿ ಅರೇಬಿಯಾ, ಇಥಿಯೋಪಿಯಾ, ಫಿಲಿಪೈನ್ಸ್, ಪೋಲೆಂಡ್, ಸ್ಪೇನ್ ಮತ್ತು ಚಿಲಿ ದೇಶಗಳು ರಫ್ತು ಲಿಸ್ಟ್‌ನಲ್ಲಿವೆ.

2025ರ ವೇಳೆಗೆ ಭಾರತ 35 ಸಾವಿರ ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಬೇಕೆಂಬ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಈ ಗುರಿಯನ್ನು ತಲುಪಬೇಕಾದರೆ ಸರ್ಕಾರ ಬಹಳ ಶ್ರಮಪಡಬೇಕಾದ ಅಗತ್ಯವಿದೆ.

 

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article