Connect with us

ಭಾರತ-ಪಾಕ್ ಗಡಿಯಲ್ಲಿ ಅತ್ಯಂತ ಎತ್ತರದ ತ್ರಿವರ್ಣಧ್ವಜ ಹಾರಿಸಿದ ಭಾರತ- ಪಾಕ್‍ಗೆ ಈಗ ಭಯವೇನು ಗೊತ್ತಾ?

ಭಾರತ-ಪಾಕ್ ಗಡಿಯಲ್ಲಿ ಅತ್ಯಂತ ಎತ್ತರದ ತ್ರಿವರ್ಣಧ್ವಜ ಹಾರಿಸಿದ ಭಾರತ- ಪಾಕ್‍ಗೆ ಈಗ ಭಯವೇನು ಗೊತ್ತಾ?

ನವದೆಹಲಿ: ಭಾರತ ಪಾಕಿಸ್ತಾನ ಗಡಿಯಲ್ಲಿರುವ ಅಮೃತಸರ ಬಳಿಯ ಅಟ್ಟಾರಿಯಲ್ಲಿ ಭಾನುವಾರದಂದು ಭಾರತ ಅತ್ಯಂತ ಎತ್ತರದ ತ್ರಿವರ್ಣ ಧ್ವಜವನ್ನ ಹಾರಿಸಿದೆ.

120 ಅಡಿ ಉದ್ದ, 80 ಅಡಿ ಅಗಲವಿರುವ ಧ್ವಜವನ್ನ 360 ಅಡಿ ಉದ್ದದ ಸ್ತಂಭದ ಮೇಲೆ ಹಾರಿಸಲಾಗಿದೆ. ಈ ಧ್ವಜ ಎಷ್ಟು ಎತ್ತರವಿದೆ ಎಂದರೆ ಇದನ್ನು ಸುಮಾರು 30 ಕಿ.ಮೀ ದೂರದಲ್ಲಿರುವ ಲಾಹೋರ್‍ನಲ್ಲಿರುವ ಪ್ರಸಿದ್ಧ ಅನಾರ್ಕಲಿ ಬಜಾರ್‍ನಿಂದಲೂ ಕಾಣಬಹುದಾಗಿದೆ. 100 ಕೆಜಿ ತೂಕವಿರುವ ಈ ಧ್ವಜವನ್ನ ಎತ್ತರದ ಪ್ರದೇಶದಲ್ಲಿ ಜೋರಾಗಿ ಬೀಸೋ ಗಾಳಿಯನ್ನು ತಡೆದುಕೊಳ್ಳಲು ಸಹಾಯವಾಗುವಂತೆ ಪ್ಯಾರಾಚೂಟ್ ಮೆಟೀರಿಯಲ್‍ನಿಂದ ಮಾಡಲಾಗಿದೆ.

360 ಅಡಿ ಉದ್ದವಿರುವ ಸ್ತಂಭ 55 ಟನ್ ತೂಕವಿದ್ದು ದೆಹಲಿಯ ಕುತುಬ್ ಮಿನಾರ್‍ಗಿಂತ ಎತ್ತರವಿದೆ. ಧ್ವಜ ಸ್ತಂಭದ ಸುತ್ತ ಎಲ್‍ಇಡಿ ಫ್ಲಡ್ ಲೈಟ್‍ಗಳನ್ನ ಹಾಕಲಾಗಿದ್ದು, ರಾತ್ರಿ ಹೊತ್ತಿನಲ್ಲೂ ಮೈಲಿ ದೂರದಲ್ಲಿದ್ರೂ ಧ್ವಜ ಕಾಣುವಂತೆ ಮಾಡಲಾಗಿದೆ.

ಈ ಯೋಜನೆಗೆ ಸುಮಾರು 4 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಅಮೃತಸರ ಇಂಪ್ರೂವ್‍ಮೆಂಟ್ ಟ್ರಸ್ಟ್ ಇದನ್ನು ಪೂರ್ಣಗೊಳಿಸಿದೆ. ಧ್ವಜದ ದೈನಂದಿನ ನಿರ್ವಹಣೆಯನ್ನು ಬಿಎಸ್‍ಎಫ್‍ನ ಆದೇಶದಂತೆ ಮಾಡಲಾಗುತ್ತದೆ ಎಂದು ವರದಿಯಾಗಿದೆ. ಅತೀ ಎತ್ತರದ ಈ ತ್ರಿವರ್ಣ ಧ್ವಜ ಈಗ ಅಟ್ಟಾರಿ ವಾಗಾ ಗಡಿಯಲ್ಲಿ ಪ್ರತಿದಿನ ಸಂಜೆ ಬೀಟಿಂಗ್ ರಿಟ್ರೀಟ್ ವೀಕ್ಷಿಸಲು ಬರುವ ಸಾವಿರಾರು ಜನರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಪಾಕಿಸ್ತಾನದ ವಿರೋಧ: ಇದೇ ವೇಳೆ ಗಡಿ ಭಾಗದಲ್ಲಿ ಎತ್ತರದ ಧ್ವಜ ಅಳವಡಿಸಿರುವುದಕ್ಕೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿದೆ. ಭಾರತ ಈ ಧ್ವಜವನ್ನು ಗಡಿ ಭಾಗದಲ್ಲಿ ಗೂಢಾಚಾರಿಕೆ ಮಾಡಲು ಬಳಸುತ್ತದೆ ಎಂದು ಪಾಕಿಸ್ತಾನ ಹೆದರಿದೆ.

ಈ ಹೇಳಿಕೆಯನ್ನು ಭಾರತ ತಳ್ಳಿಹಾಕಿದ್ದು, ಧ್ವಜಸ್ತಂಭವನ್ನು ಝೀರೋ ಲೈನ್‍ಗಿಂತ 200 ಮೀಟರ್ ಒಳಗೆ ಅಳವಡಿಸಲಾಗಿದೆ. ಧ್ವಜ ನಿಂತಿರುವುದು ಭಾರತದ ಮಣ್ಣಿನಲ್ಲಿ. ದೇಶವೊಂದು ತನ್ನ ನೆಲದಲ್ಲಿ ಧ್ವಜ ಹಾರಿಸುವುದನ್ನು ಯಾವುದೇ ಕಾನೂನಾಗಲೀ ಅಥವಾ ಅಂತರಾಷ್ಟ್ರೀಯ ಕಟ್ಟುಪಾಡುಗಳಾಗಲೀ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ.

Advertisement
Advertisement