ಏಷ್ಯನ್‌ ಗೇಮ್ಸ್‌ಗೆ ವರ್ಣರಂಜಿತ ತೆರೆ – ಐತಿಹಾಸಿಕ 107 ಪದಕಗಳೊಂದಿಗೆ ಭಾರತ ವಿದಾಯ

Public TV
2 Min Read
India

ಹ್ಯಾಂಗ್‌ಝೌ: ಚೀನಾದ‌ ಹ್ಯಾಂಗ್‌ಝೌನಲ್ಲಿ ನಡೆದ 19ನೇ ಆವೃತ್ತಿಯ ಏಷ್ಯನ್‌ ಗೇಮ್ಸ್‌ಗೆ ಭಾನುವಾರ ವರ್ಣರಂಜಿತ ತೆರೆ ಬಿದ್ದಿದ್ದು, ಭಾರತ ಅದ್ಭುತ ಸಾಧನೆಯೊಂದಿಗೆ ವಿದಾಯ ಹೇಳಿದೆ. ಏಷ್ಯನ್‌ ಗೇಮ್ಸ್‌ನ ಧ್ವಜವನ್ನು ಮುಂದಿನ ಅತಿಥೇಯ ನಗರವಾದ ದೋಹಾ, ಕತಾರ್‌ಗೆ ಹಸ್ತಾಂತರಿಸುವ ನಿರೀಕ್ಷೆಯಿದ್ದು, 2027ಕ್ಕೆ ದೋಹಾದಲ್ಲಿ ಏಷ್ಯನ್‌ ಗೇಮ್ಸ್‌ ನಡೆಯಲಿದೆ.

ಏಷ್ಯನ್‌ ಗೇಮ್ಸ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪದಕಗಳ ಬೇಟೆಯಲ್ಲಿ ಭಾರತ ಶತಕ ಬಾರಿಸಿದೆ. ಕ್ರೀಡಾಕೂಟ ಆರಂಭವಾದ ದಿನದಿಂದ ಇಲ್ಲಿಯವರೆಗೆ ಭಾರತದ ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ ಚಿನ್ನ, ಬೆಳ್ಳಿ, ಕಂಚು ಸೇರಿ ಒಟ್ಟು 107 ಪದಕಗಳನ್ನ ಬಾಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಹ ಭಾರತದ ಕ್ರೀಡಾಪಟುಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿರುವ ಮೋದಿ, ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಸಾಧನೆಯೊಂದಿಗೆ ವಿದಾಯ ಹೇಳಿದೆ. ನಮ್ಮ ಅಸಾಧಾರಣ ಕ್ರೀಡಾಪಟುಗಳು 107 ಪದಕಗಳನ್ನು ತಂದುಕೊಟ್ಟಿದ್ದಾರೆ. ಕಳೆದ 60 ವರ್ಷಗಳಲ್ಲಿ ಅದ್ಭುತ ಸಾಧನೆ ಮಾಡಿದ್ದು, ಇಡೀ ರಾಷ್ಟ್ರವೇ ಹರ್ಷಗೊಂಡಿದೆ. ನಮ್ಮ ಕ್ರೀಡಾಪಟುಗಳ ಅಸಾಧಾರಣ ಪ್ರತಿಭೆ, ಕಠಿಣ ಪರಿಶ್ರಮ ದೇಶಕ್ಕೆ ಹೆಮ್ಮೆ ತಂದಿದೆ. ಅವರ ವಿಜಯ ಮಾಲೆ ನೆನಪಿಡುವ ಕ್ಷಣಗಳನ್ನ ಕಲ್ಪಿಸಿದೆ ಎಂದು ಶ್ಲಾಘಿಸಿದ್ದಾರೆ.

ಏಷ್ಯನ್‌ ಗೇಮ್ಸ್‌ನಲ್ಲಿ ಒಟ್ಟು 28 ಚಿನ್ನ, 38 ಬೆಳ್ಳಿ ಹಾಗೂ 41 ಕಂಚಿನ ಪದಕಗಳೊಂದಿಗೆ 107 ಪದಕಗಳನ್ನು ಗೆದ್ದುಕೊಂಡಿದೆ. ಈ ಮೂಲಕ 19ನೇ ಆವೃತ್ತಿಯ ಏಷ್ಯನ್‌ ಗೇಮ್ಸ್‌ನಲ್ಲಿ ಹೆಚ್ಚಿನ ಪದಕ ಪಡೆದ 4ನೇ ರಾಷ್ಟ್ರವಾಗಿ ಹೊರಹೊಮ್ಮಿದೆ.

ಇನ್ನೂ 383 ಪದಕ ಪಡೆದ ಚೀನಾ (201 ಚಿನ್ನ, 111 ಬೆಳ್ಳಿ, 71 ಕಂಚು) ಮೊದಲ ಸ್ಥಾನ, 188 ಪದಕ ಪಡೆದ (52 ಚಿನ್ನ, 67 ಬೆಳ್ಳಿ, 69 ಕಂಚು) ಜಪಾನ್‌ 2ನೇ ಸ್ಥಾನದಲ್ಲಿದ್ದರೆ, 190 ಪದಕ ಪಡೆದ (42 ಚಿನ್ನ, 38 ಬೆಳ್ಳಿ, 41 ಕಂಚು) ಗಳೊಂದಿಗೆ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

Web Stories

Share This Article