ನವದೆಹಲಿ: ಆಗಸ್ಟ್ ತಿಂಗಳಿನಲ್ಲಿ 1,59,069 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಸತತ 17 ತಿಂಗಳಿನಿಂದ ಜಿಎಸ್‌ಟಿ ಸಂಗ್ರಹ 1.50 ಲಕ್ಷ ಕೋಟಿ ರೂ. ದಾಟುತ್ತಿದೆ.
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಜಿಎಸ್‌ಟಿ ಸಂಗ್ರಹ 11% ರಷ್ಟು ಏರಿಕೆಯಾಗಿದೆ. ಕಳೆದ ಆಗಸ್ಟ್ ತಿಂಗಳಿನಲ್ಲಿ1,43,612 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಈ ವರ್ಷದ ಜುಲೈನಲ್ಲಿ 1,65,105 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು.
ಒಟ್ಟು ಜಿಎಸ್‌ಟಿ ಸಂಗ್ರಹದಲ್ಲಿ ಕೇಂದ್ರ ಜಿಎಸ್‌ಟಿ (CGST) ಪಾಲು 28,328 ಕೋಟಿ ರೂ. ಆಗಿದ್ದರೆ ರಾಜ್ಯ ಜಿಎಸ್‌ಟಿ (SGST) 35,794 ಕೋಟಿ ರೂ. ಆಗಿದೆ. ಇಂಟಿಗ್ರೇಟೆಡ್ ಜಿಎಸ್‌ಟಿ (ಭಾರತಕ್ಕೆ ಆಮದು ಮಾಡಿಕೊಳ್ಳುವ ಮತ್ತು ಭಾರತದಿಂದ ರಫ್ತು ಮಾಡುವ ಸಂದರ್ಭಗಳಲ್ಲಿ ಸರಕು ಮೇಲೆ ಹಾಕುವ ತೆರಿಗೆ) 83,251 ಕೋಟಿ ರೂ.ಗಳಾಗಿವೆ. ಇದರಲ್ಲಿ 11,695 ಕೋಟಿ ರೂ.(ವಸ್ತುಗಳನ್ನು ಆಮದು ಮಾಡಿಕೊಂಡಿದ್ದಕ್ಕೆ 1,016 ಕೋಟಿ ರೂ. ಸಂಗ್ರಹ ಸೇರಿ) ಸೆಸ್ ಕೂಡ ಸೇರಿದೆ. ಇದನ್ನೂ ಓದಿ: ಆದಿತ್ಯ ಎಲ್ 1 ಉಡಾವಣೆಗೂ ಮುನ್ನ ತಿರುಪತಿಗೆ ಭೇಟಿ ನೀಡಿದ ಇಸ್ರೋ ಮುಖ್ಯಸ್ಥ
- Advertisement
- Advertisement
ಇಂಟಿಗ್ರೇಟೆಡ್ ಜಿಎಸ್‌ಟಿಯಿಂದ ಕೇಂದ್ರ ಜಿಎಸ್‌ಟಿಗೆ 37,581 ಕೋಟಿ ರೂ. ಮತ್ತು ರಾಜ್ಯ ಜಿಎಸ್‌ಟಿಗೆ 31,408 ಕೋಟಿ ರೂ. ವರ್ಗಾಯಿಸಲಾಗಿದೆ. ಈ ಹಂಚಿಕೆಯ ಬಳಿಕ ಆಗಸ್ಟ್ ತಿಂಗಳಿನಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯ ಕ್ರಮವಾಗಿ 65,909 ಕೋಟಿ ರೂ. ಮತ್ತು 67,202 ಕೋಟಿ ರೂ.ಗಳಾಗಿವೆ.
ಕರ್ನಾಟಕದಲ್ಲಿ(Karnataka) ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 16% ರಷ್ಟು ಏರಿಕೆಯಾಗಿದ್ದು, 11,116 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು ಎರಡನೇ ಸ್ಥಾನ ಪಡೆದಿದೆ. ಕಳೆದ ಆಗಸ್ಟ್‌ನಲ್ಲಿ 9,583 ಕೋಟಿ ರೂ. ಸಂಗ್ರಹವಾಗಿತ್ತು.
ಮಹಾರಾಷ್ಟ್ರದಲ್ಲಿ 23,282 ಕೋಟಿ ರೂ. ಸಂಗ್ರಹವಾಗಿದ್ದು ಮೊದಲ ಸ್ಥಾನದಲ್ಲೇ ಮುಂದುವರಿದಿದೆ. ಗುಜರಾತ್ 9,765 ಕೋಟಿ ರೂ., ತಮಿಳುನಾಡು 9,475 ಕೋಟಿ ರೂ., ಉತ್ತರ ಪ್ರದೇಶದಲ್ಲಿ 7,468 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ.
Web Stories