ವಾಷಿಂಗ್ಟನ್: ಖಲಿಸ್ತಾನಿ ಭಯೋತ್ಪಾದಕ (Khalistani Terrorist) ಗುರುಪತ್‍ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿ ಹೂಡಿರುವ ಸಿವಿಲ್ ಮೊಕದ್ದಮೆ ಹಿನ್ನೆಲೆಯಲ್ಲಿ ಅಮೆರಿಕ ಕೋರ್ಟ್ (United States Court) ಭಾರತ ಸರ್ಕಾರಕ್ಕೆ (Indian Government ) ಸಮನ್ಸ್ (Summons) ಜಾರಿ ಮಾಡಿದೆ.
ನ್ಯೂಯಾರ್ಕ್‍ನ ಸದರ್ನ್‌ನ ಜಿಲ್ಲಾ ನ್ಯಾಯಾಲಯದ ಸಮನ್ಸ್‌ನಲ್ಲಿ ಭಾರತ ಸರ್ಕಾರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (Ajit Doval), ಭಾರತದ ಗುಪ್ತಚರ ಸಂಸ್ಥೆಯ ಮಾಜಿ ಮುಖ್ಯಸ್ಥ ಸಮಂತ್ ಗೋಯೆಲ್, ಏಜೆಂಟ್ ವಿಕ್ರಮ್ ಯಾದವ್ ಮತ್ತು ಭಾರತೀಯ ಉದ್ಯಮಿ ನಿಖಿಲ್ ಗುಪ್ತಾ ಅವರನ್ನು ಹೆಸರಿಸಲಾಗಿದೆ. ಸಮನ್ಸ್‌ನಲ್ಲಿ ಹೆಸರಿಸಿದವರು 21 ದಿನಗಳಲ್ಲಿ ಉತ್ತರಿಸುವಂತೆ ನ್ಯಾಯಾಲಯ ಸೂಚಿಸಿದೆ.
ಸಮನ್ಸ್‌ಗೆ ಭಾರತ ಸರ್ಕಾರ ಇನ್ನೂ ಪ್ರತಿಕ್ರಿಯಿಸಿಲ್ಲ. ಸಮನ್ಸ್‌ನ ಪ್ರತಿಯನ್ನು ಹಂಚಿಕೊಂಡ ಪನ್ನು ಅವರ ಎಕ್ಸ್ ಖಾತೆಯನ್ನು ತಡೆಹಿಡಿಯಲಾಗಿದೆ ಎಂದು ವರದಿಯಾಗಿದೆ. ಅಲ್ಲದೇ ಈ ವಿಷಯವು ಭಾರತ-ಯುಎಸ್ ಬಾಂಧವ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಭಾರತದಲ್ಲಿನ ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮೂಲಭೂತ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟಿಸ್‍ನ ಮುಖ್ಯಸ್ಥ ಮತ್ತು ಅಮೆರಿಕ ಮತ್ತು ಕೆನಡಾದ ದ್ವಿ ಪೌರತ್ವವನ್ನು ಹೊಂದಿರುವ ಪನ್ನುನ್‍ನನು ಕೊಲ್ಲುವ ಸಂಚನ್ನು ಅಮೆರಿಕ ವಿಫಲಗೊಳಿಸಿದೆ ಎಂದು ನವೆಂಬರ್‌ನಲ್ಲಿ ಪತ್ರಿಕೆಯೊಂದು ವರದಿ ಮಾಡಿತ್ತು. ಬಳಿಕ ಅಮೆರಿಕದ ಅಧಿಕಾರಿಗಳು ಇದನ್ನು ದೃಢಪಡಿಸಿದ್ದರು.
ಇದರ ಬೆನ್ನಲ್ಲೇ, ಈ ವಿಚಾರವಾಗಿ ವಿದೇಶಾಂಗ ಸಚಿವಾಲಯ ಇದು ಕಳವಳಕಾರಿ ವಿಷಯ ಎಂದು ಹೇಳಿತ್ತು. ಅಲ್ಲದೇ ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ ಅವರು ಭಾರತವು ಈ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನು ಪ್ರಾರಂಭಿಸಿದೆ. ಆದರೆ ಇದು ಭಾರತ-ಅಮೆರಿಕದ ಸಂಬಂಧಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಒತ್ತಿ ಹೇಳಿದ್ದರು.
ಪನ್ನುನ್ ಭಾರತೀಯ ನಾಯಕರ ವಿರುದ್ಧ ದ್ವೇಷ ಭಾಷಣ ಮತ್ತು ಹಲವಾರು ಬೆದರಿಕೆಗಳನ್ನು ಹಾಕಿದ್ದಾನೆ. ಕೇಂದ್ರ ಸರ್ಕಾರ 2020ರಲ್ಲಿ ಆತನನ್ನು ಭಯೋತ್ಪಾದಕ ಎಂದು ಘೋಷಿಸಿತು.