ನವದೆಹಲಿ: ಅಮಿತ್ ಶಾ ಅವರನ್ನು ಸರ್ದಾರ್ ವಲ್ಲಭ್‍ಭಾಯಿ ಪಟೇಲ್ ಅವರಿಗೆ ಹೋಲಿಸುವ ಮೂಲಕ ಬಿಜೆಪಿ ವಕ್ತಾರ ತೇಜಿಂದರ್ ಸಿಂಗ್ ಪಾಲ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ.
ಅಮಿತ್ ಶಾ ಅವರು ಗೃಹ ಸಚಿವರಾಗಿ ನೇಮಕವಾದ ಬಳಿಕ ಟ್ವೀಟ್ ಮಾಡಿದ ತೇಜಿಂದರ್ ಸಿಂಗ್ ಪಾಲ್ ಅವರು, ದೇಶಕ್ಕೆ ಮತ್ತೊಬ್ಬ ಸರ್ದಾರ್ ಪಟೇಲ್ ಬಂದಿದ್ದಾರೆ. ಕಲ್ಲು ತೂರುವ ಕಾಶ್ಮೀರ ಹಾಗೂ ಬಾಂಗ್ಲಾದೇಶಿಗಳೆ ನಿಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.
Stone pelters in Kashmir,Bangladeshi Pack your Bag. India Got New Sardar Patel as Home Minister @AmitShah
— Tajinder Pal Singh Bagga (@TajinderBagga) May 31, 2019
ದೇಶದ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ರಾಜ್ಯಗಳ ಒಕ್ಕೂಟ ವ್ಯವಸ್ಥೆಗೆ ಪ್ರಮುಖ ಪಾತ್ರವಹಿಸಿದ್ದರು. 1947ರ ಇಂಡೋ-ಪಾಕಿಸ್ತಾನ ಯುದ್ಧದ ಅವಧಿಯಲ್ಲಿ ಅವರು ಭಾರತೀಯ ಸೇನೆಯ ಕಮಾಂಡರ್-ಇನ್-ಚೀಫ್ ಆಗಿ ಸಹ ಕಾರ್ಯನಿರ್ವಹಿಸಿದ್ದರು. ಅವರು ಕೈಗೊಂಡ ಕಠಿಣ ನಿರ್ಧಾರಗಳಿಂದಾಗಿ ಅವರಿಗೆ ‘ಉಕ್ಕಿನ ಮನುಷ್ಯ’ ಎಂಬ ಬಿರುದು ಸಿಕ್ಕಿತ್ತು.
ಸರ್ದಾರ್ ಪಟೇಲ್ ಅವರಂತೆ ಅಮಿತ್ ಶಾ ಕೂಡ ಕಾರ್ಯನಿರ್ವಹಿಸಲಿದ್ದಾರೆ. ಕಾಶ್ಮೀರ ಪ್ರತ್ಯೇಕಕ್ಕೆ ಆಗ್ರಹಿಸಿ ಭದ್ರತಾ ಸಿಬ್ಬಂದಿಯ ಮೇಲೆ ಕಲ್ಲು ತೂರುವ ಜನರನ್ನು ಅಮಿತ್ ಶಾ ದೇಶದಿಂದ ಹೊರ ಹಾಕುತ್ತಾರೆ ಎಂದು ತೇಜಿಂದರ್ ಸಿಂಗ್ ಪಾಲ್ ಹೇಳಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಪಶ್ಚಿಮ ಬಂಗಾಳದ ರಾಯ್‍ಗಂಜ್‍ನಲ್ಲಿ ನಡೆದಿದ್ದ ಸಮಾವೇಶದಲ್ಲಿ ಮಾತನಾಡಿದ್ದ ಅಮಿತ್ ಶಾ ಅವರು, ಬಿಜೆಪಿಯು ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್ ಸಿ) ನಡೆಸಲಾಗುವುದು. ದೇಶದ ಒಳಗಡೆ ನುಸುಳಿರುವ ಪ್ರತಿಯೊಬ್ಬರನ್ನೂ ಹೊರಕ್ಕೆ ದಬ್ಬುತ್ತೇವೆ. ಆದರೆ ಪಶ್ಚಿಮ ಬಂಗಾಳದಲ್ಲಿರುವ ವಲಸಿಗರು ಚಿಂತಿಸಬೇಕಿಲ್ಲ. ಬೌದ್ಧರು, ಹಿಂದೂಗಳು ಮತ್ತು ಸಿಖ್ಖರನ್ನು ಬಿಟ್ಟು ಉಳಿದೆಲ್ಲ ವಲಸಿಗರನ್ನು ದೇಶದಿಂದ ಹೊರಗೆ ಹಾಕಲಾಗುವುದು ಎಂದು ಹೇಳಿದ್ದರು.
ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಕೇಂದ್ರದಲ್ಲಿ ಎನ್‍ಡಿಎ ಮತ್ತೆ ಅಧಿಕಾರ ಗದ್ದು ಏರಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ 24 ಮಂದಿ ಸಂಪುಟ ದರ್ಜೆ ಸಚಿವರು, 9 ಮಂದಿ ಸ್ವತಂತ್ರ ಖಾತೆ ಸಚಿವರಾಗಿ ಹಾಗೂ 24 ಜನರು ರಾಜ್ಯ ಸಚಿವರಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದರು. ಎಲ್ಲ ಸಚಿವರಿಗೆ ಇಂದು ಖಾತೆ ಹಂಚಿಕೆ ಮಾಡಲಾಗಿದ್ದು, ಪ್ರಧಾನಿ ಮೋದಿ ಅವರು ಇಂದು ಮೊದಲ ಕ್ಯಾಬಿನೆಟ್ ಸಭೆ ನಡೆಸಿದರು.