ಸುಡಾನ್ ಹಿಂಸಾಚಾರ – ವಿಮಾನ ನಿಲ್ದಾಣಗಳ ಸ್ಥಗಿತ; ಪ್ರಜೆಗಳನ್ನು ಕರೆತರಲು ಭೂಮಾರ್ಗ ಹುಡುಕಾಟದಲ್ಲಿ ಭಾರತ

Public TV
1 Min Read
SUDAN 2

ನವದೆಹಲಿ: ಸುಡಾನ್‍ನ (Sudan) ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಸುರಕ್ಷಿತ ಭೂ ಮಾರ್ಗಗಳ ಹುಡುಕಾಟ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸೇನೆ ಹಾಗೂ ಅರೆಸೇನಾ ಪಡೆಗಳ ನಡುವಿನ ಘರ್ಷಣೆಯಿಂದ ಸುಡಾನ್ ರಾಜಧಾನಿ ಸೇರಿದಂತೆ ದೇಶಾದ್ಯಂತ ಹಿಂಸಾಚಾರ ಭುಗಿಲೆದ್ದಿದೆ. ಇದರಿಂದ ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ಸುರಕ್ಷಿತ ಭೂ ಮಾರ್ಗಗಳ ಹುಡುಕಾಟ ನಡೆಸಲಾಗುತ್ತಿದೆ. ಘರ್ಷಣೆ ನಡೆಯುತ್ತಿರುವ ಪ್ರದೇಶಗಳಿಂದ ಭಾರತದ ನಾಗರಿಕರನ್ನು ರಕ್ಷಿಸಿ ಕರೆತರಲು ಭಾರತೀಯ ರಾಯಭಾರ ಕಚೇರಿಯ  (Indian Embassy) ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ: Twitter – 10 ಲಕ್ಷ ಫಾಲೋವರ್ಸ್ ಹೊಂದಿದ್ರೆ ಸಿಗುತ್ತೆ ಬ್ಲೂ ಟಿಕ್?

Sudan

ಈಗಾಗಲೆ ಬೇರೆ ಬೇರೆ ಭಾಗಗಳ 150 ಕ್ಕೂ ಹೆಚ್ಚು ಜನರು ಸುಡಾನ್‍ನಿಂದ ಸೌದಿ ಅರೇಬಿಯಾವನ್ನು (Saudi Arabia) ತಲುಪಿದ್ದಾರೆ. ಅದರಲ್ಲಿ ಸೌದಿಯ ಪ್ರಜೆಗಳನ್ನು ಹೊರತುಪಡಿಸಿ, ಭಾರತ ಸೇರಿದಂತೆ 12 ಇತರ ದೇಶಗಳ ಪ್ರಜೆಗಳಿದ್ದಾರೆ ಎಂದು ತಿಳಿದು ಬಂದಿದೆ. ದಕ್ಷಿಣ ಕೊರಿಯಾ (South Korea) ಮತ್ತು ಜಪಾನ್ (Japan) ಹತ್ತಿರದ ದೇಶಗಳಿಗೆ ರಕ್ಷಣಾ ಪಡೆಗಳನ್ನು ನಿಯೋಜಿಸುವುದರೊಂದಿಗೆ ತಮ್ಮ ಸಾವಿರಾರು ಪ್ರಜೆಗಳ ಸ್ಥಳಾಂತರಕ್ಕೆ ತಯಾರಿ ನಡೆಸುತ್ತಿದ್ದಾರೆ.

ಖಾರ್ಟೂಮ್‍ನಲ್ಲಿ (Khartoum), ಸಂಘರ್ಷದಿಂದ ಭಯಭೀತರಾದ ನಾಗರಿಕರು ತಮ್ಮ ಮನೆಗಳಲ್ಲಿ ಆಶ್ರಯಿಸಿದ್ದಾರೆ. ತೀವ್ರ ಬಿಸಿಲಿನ ನಡುವೆ ವಿದ್ಯುತ್ ಸಹ ಸ್ಥಗಿತಗೊಂಡಿದ್ದು, ಹೆಚ್ಚಿನ ಭಾಗಗಳಲ್ಲಿ ಇಂಟರ್ನೆಟ್ ಕಡಿತವಾಗಿದೆ. ಇದುವರೆಗಿನ ಹಿಂಸಾಚಾರದಲ್ಲಿ 420ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 3,700 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ ನಿಜವಾದ ಸಾವಿನ ಸಂಖ್ಯೆ ಇದಕ್ಕಿಂತ ಹೆಚ್ಚಿದೆ ಎನ್ನಲಾಗಿದೆ. ಇದನ್ನೂ ಓದಿ: ಸುಡಾನ್ ಸಂಘರ್ಷ – ಭಾರತೀಯರು ಸೇರಿದಂತೆ 150 ಜನರನ್ನು ಸುರಕ್ಷಿತವಾಗಿ ಕರೆತಂದ ಸೌದಿ ಅರೇಬಿಯಾ

Share This Article