ವೆಲ್ಲಿಂಗ್ಟನ್: ಕೇನ್ ವಿಲಿಯಮ್ಸನ್ (Kane Williamson) ಶತಕದ ನೆರವಿನಿಂದ ನ್ಯೂಜಿಲೆಂಡ್ (New Zealand) ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ (Sri Lanka) ವಿರುದ್ಧ 2 ವಿಕೆಟ್‌ಗಳ ರೋಚಕ ಜಯ ಸಾಧಿಸಿದ್ದು ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಪ್ರವೇಶಿಸಿದೆ.
ಭಾರತ 2021ರಲ್ಲಿ ಡಬ್ಲ್ಯೂಟಿಸಿ ಫೈನಲ್ ಪ್ರವೇಶಿಸಿ, ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್‌ಗಳಿಂದ ಸೋಲು ಕಂಡಿತ್ತು. ಇದೀಗ ಮತ್ತೊಮ್ಮೆ ಫೈನಲ್ ಪ್ರವೇಶಿಸಿದ್ದು, ಆಸ್ಟ್ರೇಲಿಯಾ (Australia) ವಿರುದ್ಧ ಸೆಣಸಲಿದೆ ಲಂಡನ್‌ನಲ್ಲಿ ಜೂನ್ 7ರಿಂದ 11ರವರೆಗೆ ಪಂದ್ಯ ನಡೆಯಲಿದೆ.
Advertisement
A thriller in Christchurch. #NZvSL pic.twitter.com/7hv2j4bEjJ
— BLACKCAPS (@BLACKCAPS) March 13, 2023
Advertisement
2ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯುವ ಸಲುವಾಗಿ ಭಾರತ ತಂಡ, ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು 3-0 ಅಂಥವಾ 3-1 ಅಂತರದಲ್ಲಿ ಗೆಲ್ಲಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ನಡೆಯುತ್ತಿರುವ ಅಹಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವು ಅಗತ್ಯವಿತ್ತು. ಆದ್ರೆ ಅಂತಿಮ ಪಂದ್ಯ ಡ್ರಾ ನಲ್ಲಿ ಅಂತ್ಯಗೊಂಡಿದೆ.
Advertisement
Advertisement
ಮತ್ತೊಂದೆಡೆ ಶ್ರೀಲಂಕಾ ತಂಡ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲು ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಅಗತ್ಯವಿತ್ತು. ಆದರೆ ಮೊದಲ ಟೆಸ್ಟ್ ಪಂದ್ಯದಲ್ಲೇ ನ್ಯೂಜಿಲೆಂಡ್ ಎದುರು ಕೇವಲ 2 ವಿಕೆಟ್‌ಗಳ ವಿರೋಚಿತ ಸೋಲು ಅನುಭವಿಸುವ ಮೂಲಕ ಫೈನಲ್ ರೇಸ್‌ನಿಂದ ಹೊರ ಬಿದ್ದಿದೆ.
ಪ್ರಸ್ತುತ 68.52 ಪಿಸಿಟಿ (Percentage Of Points Earned) ಹೊಂದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ. 60.29 ಪಿಸಿಟಿ ಹೊಂದಿರುವ ಭಾರತ 2ನೇ ಸ್ಥಾನದಲ್ಲಿದೆ. ಶ್ರೀಲಂಕಾ 53.33 ಪಿಸಿಟಿ ಹೊಂದಿದ್ದು 4ನೇ ಸ್ಥಾನದಲ್ಲಿತ್ತು. ಒಂದು ವೇಳೆ ನ್ಯೂಜಿಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಮಾಡಿದ್ದರೆ, ಲಂಕಾ 61.1 ಪಿಸಿಟಿ ಅರ್ಹತೆಯೊಂದಿಗೆ ಫೈನಲ್ ಪ್ರವೇಶಿಸುತ್ತಿತ್ತು. ಆದರೀಗ ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತಿದ್ದು, ಪಿಸಿಟಿ 48.48ಕ್ಕೆ ಇಳಿಕೆಯಾಗಿದ್ದು, 4ನೇ ಸ್ಥಾನದಲ್ಲಿ ಉಳಿದಿದೆ. ಈ ಮೂಲಕ ಫೈನಲ್ ಪ್ರವೇಶಿಸುವ ಅರ್ಹತೆ ಕಳೆದುಕೊಂಡಿದೆ.
ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 355 ರನ್ ಗಳಿಸಿದ್ದ ಶ್ರೀಲಂಕಾ ತಂಡ 2ನೇ ಟೆಸ್ಟ್ನಲ್ಲಿ 302 ರನ್ ಗಳಿಗೆ ಆಲೌಟ್ ಆಗಿತ್ತು. ಇತ್ತ ಮೊದಲ ಇನ್ನಿಂಗ್ಸ್ನಲ್ಲಿ 373 ರನ್ ಗಳಿಸಿದ್ದ ನ್ಯೂಜಿಲೆಂಡ್, ಗೆಲುವಿಗೆ 285 ರನ್ ಗುರಿ ಪಡೆದಿತ್ತು. ಇಂದು ತನ್ನ ಸರದಿ ಆರಂಭಿಸಿದ ಕಿವೀಸ್ ಪಡೆ ಕೇನ್ ವಿಲಿಯಮ್ಸನ್ ಔಟಾಗದೇ 121 ರನ್ ಬಲದಿಂದ ಲಂಕಾ ವಿರುದ್ಧ 2 ವಿಕೆಟ್‌ಗಳ ರೋಚಕ ಜಯ ಸಾಧಿಸಿತು.
Test hundred number 27 for Kane Williamson. A crucial knock on Day 5 ???? pic.twitter.com/hRpM9WhP1s
— BLACKCAPS (@BLACKCAPS) March 13, 2023
ಏಕದಿನ ಕ್ರಿಕೆಟ್‌ನಂತೆ ರೋಚಕ:
ಶ್ರೀಲಂಕಾ, ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯ ಏಕದಿನ ಕ್ರಿಕೆಟ್‌ನಂತೆ ಅತ್ಯಂತ ರೋಚಕತೆಯಿಂದ ಕೂಡಿತ್ತು. ಕೊನೆಯ 12 ಎಸೆತಗಳಲ್ಲಿ 14 ರನ್ ಬೇಕಿತ್ತು. ಈ ವೇಳೆ 69ನೇ ಓವರ್‌ನಲ್ಲಿ 1 ವಿಕೆಟ್ ಕಳೆದುಕೊಂಡ ಕಿವೀಸ್ ಪಡೆ ಕೇವಲ 7 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಕೊನೆಯ ಓವರ್‌ನಲ್ಲಿ 7 ರನ್‌ಗಳ ಅಗತ್ಯವಿತ್ತು. ಈ ವೇಳೆ ಮೊದಲ ಎರಡು ಎಸೆತಗಳಲ್ಲಿ ತಲಾ ಒಂದೊಂದು ರನ್ ತೆಗೆದುಕೊಂಡರು. ಆದರೆ 3ನೇ ಎಸೆತದಲ್ಲಿ 1 ರನ್ ಕದಿಯಲು ಯತ್ನಿಸಿ ಮ್ಯಾಟ್ ಹೆನ್ರಿ ರನೌಟ್‌ಗೆ ತುತ್ತಾಗಿ, ತಂಡಕ್ಕೆ ಆಘಾತ ನೀಡಿದರು. ಆದರೆ ವಿಲಿಯಮ್ಸನ್ 4ನೇ ಎಸೆತವನ್ನು ಬೌಂಡರಿಗಟ್ಟಿದರು. ಕೊನೆಯ 2 ಎಸೆತಗಳಲ್ಲಿ 1 ರನ್ ಬೇಕಿದ್ದಾಗ 5ನೇ ಎಸೆತ ಎದುರಿಸುವಲ್ಲಿ ವಿಫಲರಾದರು. ಕೊನೆಯ ಎಸೆತದಲ್ಲಿ ಒಂದು ರನ್ ಕದಿಯಲು ಯತ್ನಿಸಿ 1 ಬಾಲ್ ಹೊಡೆಯುವಲ್ಲಿ ವಿಫಲರಾದರು. ಈ ವೇಳೇ ಬೈಸ್ ರನ್ ಕದಿಯಲು ಯತ್ನಿಸಿದ ಕೇನ್ ರನೌಟ್‌ಗೆ ತುತ್ತಾಗುವ ಸಾಧ್ಯತೆಯಿತ್ತು. ಆದ್ರೆ ತಮ್ಮ ಮಿಂಚಿನ ಓಟದಿಂದ ಬಾಲ್ ವಿಕೆಟ್‌ಗೆ ತಗುಲುವ ಕ್ಷಣಕ್ಕೂ ಮುನ್ನ ಕ್ರೀಸ್‌ನಲ್ಲಿ ಬ್ಯಾಟ್ ಇರಿಸಿದ್ದರು. ಪರಿಣಾಮ ತಂಡ 285 ರನ್‌ಳ ಗುರಿ ತಲುಪಿ ರೋಚಕ ಜಯ ಸಾಧಿಸಿತು.
ಸಂಕ್ಷಿಪ್ತ ಸ್ಕೋರ್:
ಶ್ರೀಲಂಕಾ ಮೊದಲ ಇನ್ನಿಂಗ್ಸ್ – 355/10
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 373/10
ಶ್ರೀಲಂಕಾ 2ನೇ ಇನ್ನಿಂಗ್ಸ್ 302/10
ನ್ಯೂಜಿಲೆಂಡ್ 2ನೇ ಇನ್ನಿಂಗ್ಸ್ 285/8