– 5ನೇ ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿ ಸಂಸದ ಪಿ.ಸಿ.ಗದ್ದಿಗೌಡರ್
– ವೀಣಾ ಕಾಶಪ್ಪನವರ್‌ಗೆ ‘ಕೈ’ ಟಿಕೆಟ್ ಮಿಸ್? ಸಂಯುಕ್ತ ಪಾಟೀಲ್‌ಗೆ ಮಣೆ?
ಸ್ಮಾರಕಗಳ ನೆಲೆ, ದೇವಾಲಯಗಳ ತೊಟ್ಟಿಲು, ಚಾಲುಕ್ಯರ ನಾಡು, ಬಸವಣ್ಣ ನವರ ಐಕ್ಯ ಭೂಮಿ, ಶಕ್ತಿ ಪೀಠ ಬನಶಂಕರಿ ದೇವಿ ನೆಲೆಸಿರುವ ಐತಿಹಾಸಿಕ ಜಿಲ್ಲೆ ಬಾಗಲಕೋಟೆ. ಕಲೆ, ಸಂಸ್ಕೃತಿಗೆ ಈ ನೆಲದ ಕೊಡುಗೆ ಅಪಾರ.
ಕರ್ನಾಟಕ ರಾಜ ಮನೆತನ ಚಾಲುಕ್ಯರ ನಾಡು ಬಾಗಲಕೋಟೆ (Bagalkot) ಈಗ ‘ಲೋಕ’ಸಮರಕ್ಕೆ ಸಜ್ಜಾಗಿದೆ. ಕ್ಷೇತ್ರಕ್ಕಾಗಿ ಕಲಿಗಳಂತೆ ಕಾದಾಡಲು ಕಾಂಗ್ರೆಸ್-ಬಿಜೆಪಿ (Congress-BJP) ರಣರಂಗಕ್ಕೆ ಇಳಿದಿವೆ. ಆರಂಭದಲ್ಲಿ ಕ್ಷೇತ್ರದಲ್ಲಿ ಭದ್ರಬುನಾದಿ ಹಾಕಿದ್ದ ಕಾಂಗ್ರೆಸ್ ಕಾಲಾನಂತರ ತನ್ನ ಅಸ್ತಿತ್ವ ಕಳೆದುಕೊಂಡಿತು. ಬಾಗಲಕೋಟೆ ಲೋಕಸಭಾ ಕ್ಷೇತ್ರ ಈಗ ಬಿಜೆಪಿ ತೆಕ್ಕೆಯಲ್ಲಿದೆ. ಗೆಲುವಿನ ನಾಗಾಲೋಟ ಮುಂದುವರಿಸಲು ಕಮಲ ಕಲಿಗಳು ಪ್ರಯತ್ನಿಸುತ್ತಿದ್ದಾರೆ. ಇಲ್ಲಿ ಮತ್ತೆ ತನ್ನ ಅಸ್ತಿತ್ವ ಸ್ಥಾಪಿಸಬೇಕು ಎಂದು ‘ಕೈ’ ಪಾಳಯ ತಂತ್ರ ರೂಪಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿದೆ.
Advertisement
Advertisement
ಕ್ಷೇತ್ರ ಪರಿಚಯ
ಬಾಗಲಕೋಟೆ ಲೋಕಸಭಾ ಕ್ಷೇತ್ರವು 1967 ರಲ್ಲಿ ಅಸ್ತಿತ್ವಕ್ಕೆ ಬಂತು. ಕ್ಷೇತ್ರದ ಮೊದಲ ಸಂಸದನಾಗಿ ಕಾಂಗ್ರೆಸ್‌ನ ಸಂಗನಗೌಡ ಬಸನಗೌಡ ಪಾಟೀಲ್ ಆಯ್ಕೆಯಾಗಿದ್ದರು. 1991 ರ ವರೆಗೆ ಕಾಂಗ್ರೆಸ್ ಗೆಲುವಿನ ಬಾವುಟ ಹಾರಿಸಿತ್ತು. 1996 ರಲ್ಲಿ ಮೊದಲ ಬಾರಿಗೆ ಜನತಾದಳ ಪಕ್ಷದ ಹೆಚ್.ವೈ.ಮೇಟಿ ಗೆಲುವು ದಾಖಲಿಸಿದರು. ಇದರೊಂದಿಗೆ ಕಾಂಗ್ರೆಸ್ ಸತತ ಗೆಲುವಿನ ಸರಪಳಿಯ ಕೊಂಡಿ ಕಳಚಿತು. ಅದಾದ ಬಳಿಕ ಕ್ಷೇತ್ರದಲ್ಲಿ ಒಮ್ಮೆ ಲೋಕ ಶಕ್ತಿ ಹಾಗೂ ಮತ್ತೊಮ್ಮೆ ಕಾಂಗ್ರೆಸ್ ಗೆದ್ದಿದ್ದು ಬಿಟ್ಟರೆ, ಕಳೆದ 20 ವರ್ಷಗಳಿಂದ ಇಲ್ಲಿ ಬಿಜೆಪಿ ಗೆಲುವಿನ ಓಟ ಮುಂದುವರಿಸಿದೆ. ಪಕ್ಷದ ಪಿ.ಸಿ.ಗದ್ದಿಗೌಡರ್ (2004, 2009, 2014, 2019) ಸತತ ನಾಲ್ಕು ಬಾರಿ ಗೆದ್ದು ಬೀಗಿದ್ದಾರೆ.
Advertisement
ವಿಧಾನಸಭಾ ಕ್ಷೇತ್ರಗಳೆಷ್ಟು?
ಬಾಗಲಕೋಟೆ 7 ವಿಧಾನಸಭಾ ಕ್ಷೇತ್ರ ಹಾಗೂ ಪಕ್ಕದ ಗದಗ ಜಿಲ್ಲೆಯ ನರಗುಂದ ಸೇರಿ 8 ಕ್ಷೇತ್ರಗಳನ್ನು ಒಳಗೊಂಡಿದೆ. ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ, ಬೀಳಗಿ, ಮುಧೋಳ, ಜಮಖಂಡಿ, ತೇರದಾಳ, ಬಾದಾಮಿ ಹಾಗೂ ಹುನಗುಂದ. ಗದಗ ಜಿಲ್ಲೆಯ ನರಗುಂದ ಕ್ಷೇತ್ರ ಸೇರಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ಇದನ್ನೂ ಓದಿ: ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಬಚ್ಚೇಗೌಡ ರಾಜೀನಾಮೆ
Advertisement
ಒಟ್ಟು ಮತದಾರರು ಎಷ್ಟು?
ಕ್ಷೇತ್ರದಲ್ಲಿ ಒಟ್ಟು 17,90,118 ಮತದಾರರಿದ್ದಾರೆ. ಅವರ ಪೈಕಿ ಪುರುಷರು 8,87,780 ಹಾಗೂ ಮಹಿಳಾ ಮತದಾರರು 9,02,239 ಇದ್ದಾರೆ. ತೃತೀಯ ಲಿಂಗಿ ಮತದಾರರು 99 ಮಂದಿ ಇದ್ದಾರೆ.
ಕಳೆದ ಚುನಾವಣೆಯಲ್ಲಿ ಏನಾಗಿತ್ತು?
2019 ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಪಿ.ಸಿ.ಗದ್ದಿಗೌಡರ್ 1,68,187 ಮತಗಳ ಅಂತರದಿಂದ ಗೆಲುವು ದಾಖಲಿಸಿ ಸತತ ನಾಲ್ಕನೆಯ ಬಾರಿ ಸಂಸದರಾಗಿ ಆಯ್ಕೆಯಾದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೀಣಾ ಕಾಶಪ್ಪನವರ್ ಭಾರಿ ಅಂತರದ ಸೋಲು ಅನುಭವಿಸಿದರು. ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದರೂ ಬಿಜೆಪಿ ಅಭ್ಯರ್ಥಿ ಗೆದ್ದು ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ.
ಪಿ.ಸಿ.ಗದ್ದಿಗೌಡರ್‌ಗೆ ಬಿಜೆಪಿ ಮತ್ತೆ ಟಿಕೆಟ್
ಬಾಗಲಕೋಟೆ ಜಿಲ್ಲೆಯಲ್ಲಿ ಹಿಂದುತ್ವ ಗಟ್ಟಿಯಾಗಿ ಬೇರೂರಿದ್ದು, ಬಿಜೆಪಿಯ ಅಬೇಧ್ಯ ಕೋಟೆಯಾಗಿದೆ. 2004 ರಿಂದ 2019 ರ ವರೆಗಿನ ನಾಲ್ಕು ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಮೇಲುಗೈ ಸಾಧಿಸಿದೆ. ಪ್ರಬಲ ಲಿಂಗಾಯತ ಗಾಣಿಗ ಸಮಾಜದ ಪಿ.ಸಿ.ಗದ್ದಿಗೌಡರ್ (P. C. Gaddigoudar) ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತ ಹೊಂದಿದ್ದಾರೆ. ಬಿಜೆಪಿಯ ಒಗ್ಗಟ್ಟು, ಜಿಲ್ಲೆಯ ಕೈ ನಾಯಕರ ಒಳೇಟು, ತಂತ್ರ-ಕುತಂತ್ರಗಳಿಂದ ಗದ್ದಿಗೌಡರ್‌ಗೆ ಗೆಲುವು ನಿರಾಯಾಸವಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಜಗಜ್ಜಾಹೀರಾಗಿದೆ. ಈ ಹಿನ್ನೆಲೆಯಲ್ಲಿ ಸೋಲಿಲ್ಲದ ಸರದಾರ ಗದ್ದಿಗೌಡರ್‌ಗೆ ಈ ಬಾರಿಯೂ ಬಿಜೆಪಿ ಟಿಕೆಟ್ ನೀಡಿ ಮಣೆ ಹಾಕಿದೆ. ಆದರೂ ನಾಲ್ಕು ಬಾರಿ ಗೆದ್ದಿರುವ ಗದ್ದಿಗೌಡರ್ ಮೇಲೆ ಕೆಲ ಆರೋಪಗಳಿವೆ. ಕ್ಷೇತ್ರಕ್ಕಾಗಿ ವಿಶೇಷ ಯೋಜನೆಗಳನ್ನು ತಂದಿಲ್ಲ ಎಂಬ ಆರೋಪ ಎದುರಿಸುತ್ತಿದ್ದಾರೆ. ಕೆಲವು ದೀರ್ಘಾವಧಿ ಕಾಮಗಾರಿಗಳು (ಬಾಗಲಕೋಟೆ-ಕುಡಚಿ ರೈಲು ಮಾರ್ಗ, ಗದಗ-ಹುಟಗಿ ಡಬ್ಲಿಂಗ್ ಕಾಮಗಾರಿ) ದಶಕ ಕಳೆದರೂ ಮುಗಿಯದಕ್ಕೆ ಜನರಲ್ಲಿ ಅಸಮಾಧಾನವಿದೆ. ಇದನ್ನೂ ಓದಿ: ಬಿಜೆಪಿಯಲ್ಲೇ ಇದ್ದು ಶುದ್ದೀಕರಣದ ಕಡೆ ನನ್ನ ನಡೆ: ಡಿವಿಎಸ್ ಘೋಷಣೆ
ವೀಣಾ ಕಾಶಪ್ಪನವರ್‌ಗೆ ‘ಕೈ’ ಟಿಕೆಟ್ ಮಿಸ್?
2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸಿದ್ರೆ ಈ ಬಾರಿ ಉಲ್ಟಾ ಆಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಾಗಿವೆ. ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಮಾಜಿ ಸಚಿವ ಅಜಯಕುಮಾರ್ ಸರನಾಯಕ್, ವೀಣಾ ಕಾಶಪ್ಪನವರ್, ವಿಜಯಪುರದ ಸಂಯುಕ್ತಾ ಪಾಟೀಲ್, ರಕ್ಷಿತಾ ಈಟಿ ಹೀಗೆ ಹಲವು ಹೆಸರುಗಳು ಮುಂಚೂಣಿಯಲ್ಲಿವೆ. ಕಳೆದ ಬಾರಿ ಪಕ್ಷದಿಂದ ಟಿಕೆಟ್ ಗಿಟ್ಟಿಸಿ ಸೋಲನುಭವಿಸಿದ್ದ ವೀಣಾ ಕಾಶಪ್ಪನವರ್‌ಗೆ ಈ ಬಾರಿ ಟಿಕೆಟ್ ಮಿಸ್ ಆಗಲಿದೆ. ಬುಧವಾರ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಮಾಧ್ಯಮಗಳ ಮುಂದೆ ವೀಣಾ ಕಾಶಪ್ಪನವರ್ (Veena Kashappanavar) ಟಿಕೆಟ್ ವಿಚಾರವಾಗಿ ಕಣ್ಣೀರಿಟ್ಟರು. ಈ ಬಾರಿ ವಿಜಯಪುರ ಜಿಲ್ಲೆಯ ಸಂಯುಕ್ತ ಪಾಟೀಲ್ ಅವರ ಹೆಸರು ಮುಂಚೂಣಿಯಲ್ಲಿದೆ. ಬಹುತೇಕ ಅವರಿಗೆ ಟಿಕೆಟ್ ಪಕ್ಕ ಎನ್ನುವ ಮಾಹಿತಿ ಇದೆ.
ಮೈತ್ರಿಯಿಂದ ಬಿಜೆಪಿಗೆ ಲಾಭ?
ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿದೆ. ಕಾಂಗ್ರೆಸ್ ಮಾತ್ರ ಪೈಪೋಟಿ ಕೊಟ್ಟರೆ, ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬMತಿದೆ. ಬಿಜೆಪಿಗೆ ತನ್ನದೇ ಆದ ಮತಬ್ಯಾಂಕ್ ಇದೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಇದ್ದಾಗಲೇ ಬಿಜೆಪಿ ಅಭ್ಯರ್ಥಿ ಗದ್ದಿಗೌಡರ್ ನಿರಾಯಾಸ ಗೆಲುವು ಸಾಧಿಸಿದ್ದರು. ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದ್ದು, ಕಮಲಕ್ಕೆ ಮತ್ತಷ್ಟು ಅನುಕೂಲವಾಗುವ ಸಾಧ್ಯತೆ ಇದೆ.
‘ಕೈ’ ಹಿಡಿಯುತ್ತಾ ಗ್ಯಾರಂಟಿ ಯೋಜನೆಗಳು?
ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದೆ. ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಕೈಹಿಡಿಯಲಿವೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಹೀಗಾಗಿ ಬಿಜೆಪಿಗೆ ಈ ಸಲ ಕಾಂಗ್ರೆಸ್‌ನಿಂದ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆ ಇದೆ. ಜೊತೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳ ಪೈಕಿ 5 ಕಾಂಗ್ರೆಸ್ ತೆಕ್ಕೆಗೆ ಸೇರಿವೆ. ಮೂರರಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಇದು ಕೂಡ ಕಾಂಗ್ರೆಸ್ ವರದಾನ ಆಗಬಹುದು ಎನ್ನಲಾಗಿದೆ.
ಜಾತಿವಾರು ಲೆಕ್ಕಾಚಾರ
ಲಿಂಗಯತ ಪಂಚಮಸಾಲಿ: 1,80,000
ಲಿಂಗಾಯತ ಗಾಣಿಗ: 98,000
ಲಿಂಗಾಯತ ರೆಡ್ಡಿ: 80,000
ಲಿಂಗಾಯತ ಬಣಜಿಗ: 50,000
ದೇವಾಂಗ & ನೇಯ್ಗೆ: 80,000
ಪರಿಶಿಷ್ಟ ಜಾತಿ (ಎಸ್‌ಸಿ): 3,05,000
ವಿಶ್ವಕರ್ಮ: 30,000
ಅಂಬಿಗರು: 32,000
ಕ್ಷತ್ರಿಯ: 65,0000
ಪರಿಶಿಷ್ಟ ಪಂಗಡ (ಎಸ್‌ಟಿ): 85,000
ಮುಸ್ಲಿಂ: 1,70,000
ಕುರುಬ: 2,60,000
ಉಪ್ಪಾರ್: 25,000
ಬ್ರಾಹ್ಮಣ: 25,000
ಜೈನ್: 15,000
ಕುಂಬಾರ್: 12,000
ಇತರೆ: 40,000