ಇದೇ ಮೊದಲು – ಭಾರತದ ಸೇನಾ ಬತ್ತಳಿಕೆಗೆ ಲೇಸರ್‌ ಅಸ್ತ್ರ, ಪ್ರಯೋಗ ಯಶಸ್ವಿ

Public TV
2 Min Read
Laser Weapon

ಅಮರಾವತಿ: ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ತಯಾರಿಸಿದ Mk-II(A) ಲೇಸರ್ ಶಸ್ತ್ರಾಸ್ತ್ರದ (DEW) ಮೊದಲ ಯಶಸ್ವಿ ಪ್ರಯೋಗ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಭಾನುವಾರ ನಡೆಯಿತು.

ಆಂಧ್ರಪ್ರದೇಶದ ಕರ್ನೂಲ್‌ನಲ್ಲಿರುವ ರಾಷ್ಟ್ರೀಯ ಮುಕ್ತ ವಾಯು ಪ್ರದೇಶದಲ್ಲಿ (NOAR) ಲೇಸರ್ ಅಸ್ತ್ರವನ್ನು ಬಳಸಿ ಡ್ರೋನ್‌ನ್ನು ಹೊಡೆದುರುಳಿಸಲಾಯಿತು. ಈ ಮೂಲಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ನಾಲ್ಕು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸಹ ಸೇರಿಕೊಂಡಿತು. ಅಮೆರಿಕ, ಚೀನಾ ಮತ್ತು ರಷ್ಯಾದಲ್ಲಿ ಈಗಾಗಲೇ ಲೇಸರ್‌ ಶಸ್ತ್ರಾಸ್ತ್ರಗಳು ಇವೆ.

ಲೇಸರ್ ಅಸ್ತ್ರದಿಂದ ಡ್ರೋನ್‌ಗಳು ಮತ್ತು ಸ್ಪೋಟಕಗಳನ್ನು ಹೊಡೆದುರುಳಿಸಬಹುದಾಗಿದೆ. ಈ ತಂತ್ರಜ್ಞಾನವನ್ನು ಹೈದರಾಬಾದ್‌ನ DRDOನ ಹೈ ಎನರ್ಜಿ ಸಿಸ್ಟಮ್ಸ್ ಅಂಡ್ ಸೈನ್ಸಸ್ ಸೆಂಟರ್ (CHESS) ಹಾಗೂ ಹಲವಾರು ಶೈಕ್ಷಣಿಕ ಸಂಸ್ಥೆಗಳು ಮತ್ತು ದೇಶಿಯ ಕೈಗಾರಿಕೆಗಳ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

‘ಸ್ಟಾರ್ ವಾರ್ಸ್’ ತಂತ್ರಜ್ಞಾನ!
ಜನಪ್ರಿಯ ಚಲನಚಿತ್ರ ಸರಣಿ ‘ಸ್ಟಾರ್ ವಾರ್ಸ್’ ನಲ್ಲಿನ ಡೆತ್ ಸ್ಟಾರ್‌ನಂತೆ ಲೇಸರ್-ಡ್ಯೂ ಕಾರ್ಯನಿರ್ವಹಿಸುತ್ತದೆ. ಭಾರತೀಯ ಸೇನೆಯು ಹೆಚ್ಚಿನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಆರಂಭ ಮಾತ್ರ ನಾವು ಶೀಘ್ರದಲ್ಲೇ ಇದಕ್ಕಿಂತ ಶಕ್ತಿಶಾಲಿ ಅಸ್ತ್ರವನ್ನು ತಯಾರಿಸುತ್ತೇವೆ ಎಂದು ಡಿಆರ್‌ಡಿಒ ಅಧ್ಯಕ್ಷ ಡಾ. ಸಮೀರ್ ಕಾಮತ್‌ ತಿಳಿಸಿದ್ದಾರೆ.

ಲೇಸರ್ ಅಸ್ತ್ರ ಹೇಗೆ ಕೆಲಸ ಮಾಡುತ್ತದೆ?
Mk-II(A) ಲೇಸರ್ ಶಸ್ತ್ರಾಸ್ತ್ರ ವಿಶ್ವದ ಅತ್ಯಂತ ಪ್ರಬಲವಾದ ಪ್ರತಿ ಡ್ರೋನ್ ವ್ಯವಸ್ಥೆಗಳಲ್ಲಿ ಒಂದಾಗಿದ್ದು, ಗುರಿಯನ್ನು ಕೆಲವೇ ಸೆಕೆಂಡುಗಳಲ್ಲಿ ಹೊಡೆದುರುಳಿಸುತ್ತದೆ. ಏಕಕಾಲದಲ್ಲಿ ಬಹು ಡ್ರೋನ್ ದಾಳಿಗಳನ್ನು ತಡೆಯಲು ಶಕ್ತವಾಗಿದೆ. ಅಲ್ಲದೇ ಕಣ್ಗಾವಲು ವ್ಯವಸ್ಥೆ ಮತ್ತು ಆಂಟೆನಾಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

ಲೇಸರ್ ಅಸ್ತ್ರ ರಾಡಾರ್ ಅಥವಾ ಅದರ ಅಂತರ್ನಿರ್ಮಿತ ಎಲೆಕ್ಟ್ರೋ ಆಪ್ಟಿಕ್ (EO) ವ್ಯವಸ್ಥೆಯಿಂದ ಗುರಿಯನ್ನು ಪತ್ತೆಹಚ್ಚಿ, ಶಕ್ತಿಯುತ ಲೇಸರ್‌ ಕಿರಣ ಬಳಸಿ ದಾಳಿ ಮಾಡುತ್ತದೆ. ಯುದ್ಧದ ಸಮಯದಲ್ಲಿ ದುಬಾರಿ ಮದ್ದುಗುಂಡುಗಳ ಮೇಲಿನ ಅವಲಂಬನೆಯನ್ನು ಈ ವ್ಯವಸ್ಥೆ ಕಡಿಮೆ ಮಾಡುತ್ತದೆ.

Share This Article