ನವದೆಹಲಿ: ತಾಲಿಬಾನ್ ಆಡಳಿತದಿಂದಾಗಿ ತತ್ತರಿಸುವ ಅಫ್ಘಾನಿಸ್ತಾನಕ್ಕೆ ಭಾರತ ನೆರವು ನೀಡಲು ಮುಂದಾಗಿದೆ ಸತತ ನಾಲ್ಕನೇ ಬಾರಿಗೆ ಅಪ್ಘಾನಿಸ್ತಾನಕ್ಕೆ ಭಾರತ ವೈದ್ಯಕೀಯ ನೆರವು ನೀಡಿದೆ. ಶನಿವಾರ ಭಾರತ ಅಫ್ಘಾನಿಸ್ತಾನಕ್ಕೆ ಮೂರು ಟನ್ಗಳಷ್ಟು ಅಗತ್ಯ ಜೀವರಕ್ಷಕ ಔಷಧಿಗಳನ್ನು ಕಳುಹಿಸಿದೆ.
ಯುದ್ಧ ಪೀಡಿತ ದೇಶಕ್ಕೆ ಭಾರತ ನಾಲ್ಕನೇ ಬ್ಯಾಚ್ನಲ್ಲಿ 3 ಟನ್ಗಳಷ್ಟು ವೈದ್ಯಕೀಯ ನೆರವನ್ನು ನೀಡಿದೆ. ಮುಂದಿನ ವಾರಗಳಲ್ಲಿ ಅಲ್ಲಿನ ಜನರಿಗೆ ಔಷಧ ಹಾಗೂ ಆಹಾರ ಧಾನ್ಯಗಳ ರೂಪದಲ್ಲಿ ಇನ್ನಷ್ಟು ಸಹಾಯ ಮಾಡಲಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ಶನಿವಾರ ತಿಳಿಸಿದೆ. ಇದನ್ನೂ ಓದಿ: ಆಕಾಶ ಬೆಳಗಿದವು 1,000 ಮೇಡ್ ಇನ್ ಇಂಡಿಯಾ ಡ್ರೋನ್ಗಳು
ಅಫ್ಘಾನಿಸ್ತಾನ ಜನರೊಂದಿಗೆ ವಿಶೇಷ ಸಂಬಂಧವನ್ನು ಮುಂದುವರಿಸಲು ಹಾಗೂ ಮಾನವೀಯ ನೆರವನ್ನು ನೀಡಲು ಭಾರತ ಬದ್ಧವಾಗಿದೆ. ಮಾನವೀಯ ನೆರವಿನ ಭಾಗವಾಗಿ ಭಾರತ ಅಫ್ಘಾನಿಸ್ತಾನಕ್ಕೆ 3 ಟನ್ಗಳಷ್ಟು ಔಷಧಿಗಳನ್ನು ಒಳಗೊಂಡಿರುವ ನಾಲ್ಕನೇ ಬ್ಯಾಚ್ ವೈದ್ಯಕೀಯ ನೆರವನ್ನು ಪೂರೈಸಿದೆ. ಅದನ್ನು ಕಾಬೂಲ್ನ ಇಂದಿರಾ ಗಾಂಧಿ ಆಸ್ಪತ್ರೆಗೆ ಹಸ್ತಾಂತರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಇದಕ್ಕೂ ಮೊದಲು ಭಾರತ ಅಫ್ಘಾನಿಸ್ತಾನಕ್ಕೆ ಕೋವಿಡ್-19 ಲಸಿಕೆಯ 5 ಲಕ್ಷ ಡೋಸ್ಗಳನ್ನು ಸರಬರಾಜು ಮಾಡಿತ್ತು. ಇದರೊಂದಿಗೆ 2 ಬಾರಿ ಇತರ ಅಗತ್ಯ ಔಷಧಗಳ ಸರಬರಾಜನ್ನೂ ಭಾರತ ಮಾಡಿತ್ತು. ಅದನ್ನು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕಾಬೂಲ್ನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ಹಸ್ತಾಂತರಿಸಲಾಗಿತ್ತು. ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಭಾರತದ ನೆರವು – ಇರಾನ್ ಸಹಾಯ
ಭಾರತ, ಪಾಕಿಸ್ತಾನದ ಮೂಲಕ ರಸ್ತೆಯ ಮಾರ್ಗವಾಗಿ ಅಫ್ಘಾನಿಸ್ತಾನಕ್ಕೆ 50 ಸಾವಿರ ಟನ್ ಗೋಧಿ ಹಾಗೂ ಔಷಧಿಗಳನ್ನು ಕಳುಹಿಸುವುದಾಗಿ ಘೋಷಿಸಿದೆ. ಇದಕ್ಕೆ ಇರಾನ್ ಸಹಾಯ ಮಾಡಿವುದಾಗಿಯೂ ತಿಳಿಸಿತ್ತು.