ನವದೆಹಲಿ: ಭಾರತದ ಮೊದಲ ಹಗಲು ಮತ್ತು ರಾತ್ರಿಯ ಟೆಸ್ಟ್ ಪಂದ್ಯಕ್ಕೆ ಎಂಎಸ್ ಧೋನಿ ಸೇರಿದಂತೆ ಭಾರತದ ಮಾಜಿ ನಾಯಕರೆಲ್ಲರು ಕ್ರಿಕೆಟ್ ಕಾಮೆಂಟ್ರಿ ಮಾಡುವ ಸಾಧ್ಯತೆಯಿದೆ.
ಭಾರತದಲ್ಲಿ ಇದೇ ಮೊದಲ ಬಾರಿಗೆ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ನ ನೂತನ ಅಧ್ಯಕ್ಷರಾದ ಸೌರವ್ ಗಂಗೂಲಿಯವರು ಒಪ್ಪಿಗೆ ನೀಡಿದ್ದಾರೆ. ಈ ಪಂದ್ಯಗಳ ಪ್ರಸಾರದ ಹಕ್ಕನ್ನು ತೆಗೆದುಕೊಂಡಿರುವ ಸ್ಟಾರ್ ವಾಹಿನಿ, ಈ ಪಂದ್ಯಗಳ ಕ್ರಿಕೆಟ್ ಕಾಮೆಂಟ್ರಿಯನ್ನು ಧೋನಿ ಸೇರಿದಂತೆ ಮಾಜಿ ನಾಯಕರ ಕೈಲಿ ಮಾಡಿಸಲು ಮುಂದಾಗಿದೆ.
2019 ರ ವಿಶ್ವಕಪ್ ಬಳಿಕ ಕ್ರಿಕೆಟ್ನಿಂದ ದೂರ ಇರುವ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಬಾಂಗ್ಲಾ ದೇಶದ ವಿರುದ್ಧ ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ನವೆಂಬರ್ 22 ರಂದು ನಡೆಯುವ ಮೊದಲ ಡೇ-ನೈಟ್ ಟೆಸ್ಟ್ ಪಂದ್ಯದ ಮೊದಲ ದಿನ ಧೋನಿ ಅವರು ಕ್ರಿಕೆಟ್ ಕಾಮೆಂಟ್ರಿ ಬಾಕ್ಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಸೌರವ್ ಗಂಗೂಲಿ ಅವರು ಡೇ-ನೈಟ್ ಪಂದ್ಯಕ್ಕೆ ಒಪ್ಪಿಗೆ ನೀಡಿದ ನಂತರ ಭಾರತದ ಮಾಜಿ ನಾಯಕರೆಲ್ಲರಿಗೂ ಸ್ಟಾರ್ ವಾಹಿನಿ ಕಾಮೆಂಟ್ರಿ ಮಾಡಲು ಆಹ್ವಾನ ನೀಡಿದೆ. ಈ ಮೂಲಕ ಪಂದ್ಯದ ಮೊದಲ ಎರಡು ದಿನ ಭಾರತದ ಮಾಜಿ ನಾಯಕರೆಲ್ಲ ಕಾಮೆಂಟ್ರಿ ಬಾಕ್ಸ್ ನಲ್ಲಿ ಕುಳಿತು ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನಡೆದ ತಮ್ಮ ನೆಚ್ಚಿನ ಕ್ಷಣಗಳನ್ನು ಹಂಚಿಕೊಳ್ಳಲಿದ್ದಾರೆ.
ಇದರ ಜೊತೆಗೆ ಈ ಪಂದ್ಯದ ಮೊದಲ ದಿನ ಮತ್ತು ಎರಡನೇ ದಿನ ಕೊಹ್ಲಿಯೂ ಸೇರಿದಂತೆ ಭಾರತ ತಂಡದ ಈ ಹಿಂದಿನ ಎಲ್ಲಾ ನಾಯಕರನ್ನು ಆಹ್ವಾನ ಮಾಡಿ. ಪಂದ್ಯ ಆರಂಭಕ್ಕೂ ಮುನ್ನಾ ರಾಷ್ಟ್ರಗೀತೆ ಹಾಡಿಸಲು ಸ್ಟಾರ್ ವಾಹಿನಿ ಪ್ಲಾನ್ ಮಾಡಿದೆ. ನಂತರ ಕಾಮೆಂಟ್ರಿ ಬಾಕ್ಸ್ ನಲ್ಲಿ ಕುಳಿತು ಮಾಜಿ ನಾಯಕರು ಅವರ ನೆಚ್ಚಿನ ಟೆಸ್ಟ್ ಕ್ರಿಕೆಟ್ ಕ್ಷಣಗಳನ್ನು ಹಂಚಿಕೊಂಡು ಜನರನ್ನು ರಂಜಿಸಲಿದ್ದಾರೆ.
ಭಾರತದ ಕ್ರಿಕೆಟ್ ಇತಿಹಾಸದಲ್ಲೇ ಮೊದಲು ಪಿಂಕ್ ಬಾಲ್ನಲ್ಲಿ ಭಾರತ ತಂಡವು ಅಭ್ಯಾಸ ಮಾಡುವ ತರಬೇತಿ ಅವಧಿಯನ್ನು ಪ್ರಸಾರ ಮಾಡಲು ಸ್ಟಾರ್ ವಾಹಿನಿ ತೀರ್ಮಾನ ಮಾಡಿದೆ. ಈ ಅಭ್ಯಾಸವನ್ನು ವೀಕ್ಷಿಸಲು ಜನರಿಗೆ ಉಚಿತ ಪ್ರವೇಶವನ್ನು ನೀಡಲಾಗಿದೆ. ಈ ಸಮಯದಲ್ಲಿ ಕ್ರಿಕೆಟ್ ದಿಗ್ಗಜರು ಜನರೊಂದಿಗೆ ಸಂವಹನ ಮಾಡಲಿದ್ದಾರೆ ಎನ್ನಲಾಗಿದೆ.