ನವದೆಹಲಿ: ಪೂರ್ವ ಲಡಾಖ್ ಗಡಿ ಬಿಕ್ಕಟ್ಟು ಶಮನಗೊಳಿಸಲು ಭಾರತ – ಚೀನಾ (India – China) ಒಪ್ಪಂದಕ್ಕೆ ಬಂದ ಬೆನ್ನಲ್ಲೇ ಉಭಯ ದೇಶಗಳಿಂದ ಸೇನಾ ವಾಪಸಾತಿ ಪ್ರಕ್ರಿಯೆ ಶುರುವಾಗಿದೆ.
ಹೌದು. ಕಳೆದ 4 ವರ್ಷಗಳಿಂದ ಇದ್ದ ಗಡಿ ಉದ್ವಿಗ್ನತೆಗೆ ಕೊನೆ ಹಾಡುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಒಪ್ಪಂದದ ಭಾಗವಾಗಿ ಪೂರ್ವ ಲಡಾಖ್ ಪ್ರಾಂತ್ಯದ ಗಡಿಗಳಿಂದ ಭಾರತ, ಚೀನಾ ಪಡೆಗಳ ವಾಪಸಾತಿ ಪ್ರಕ್ರಿಯೆ ಶುರುವಾಗಿದೆ. ಪೂರ್ವ ಲಡಾಖ್‌ನ ಎರಡು ಪ್ರಮುಖ ಪ್ರದೇಶಗಳಾದ ಡೆಮ್‌ಚಾಕ್- ಡೆಪ್‌ಸಾಂಗ್‌ನಿಂದ ಎರಡೂ ದೇಶಗಳ ಸೈನಿಕರು ವಾಪಸ್ ಆಗ್ತಿದ್ದಾರೆ.
ಇಲ್ಲಿ ಏರ್ಪಾಟು ಮಾಡಿದ್ದ ತಾತ್ಕಾಲಿಕ ನಿರ್ಮಾಣ, ಟೆಂಟ್‌ಗಳನ್ನು ಉಭಯ ದೇಶಗಳ ಸೇನೆಗಳು ತೆರವು ಮಾಡ್ತಿವೆ. ಮುಂದಿನ ಒಂದು ವಾರದಲ್ಲಿ ಗಡಿ ಗಸ್ತು ಶುರುವಾಗುವ ಸಂಭವ ಇದೆ. ಇದನ್ನೂ ಓದಿ: 5 ವರ್ಷಗಳ ಬಳಿಕ ಮುಖಾಮುಖಿ; ರಷ್ಯಾದಲ್ಲಿ ಮೋದಿ-ಜಿನ್‌ಪಿಂಗ್ ನಡ್ವೆ ದ್ವಿಪಕ್ಷೀಯ ಮಾತುಕತೆ
ಲಡಾಕ್‌ನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿನ (LAC) ಪರಿಸ್ಥಿತಿಯು 2020ರ ಏಪ್ರಿಲ್‌ನಲ್ಲಿ ಇದ್ದ ಪೂರ್ವಸ್ಥಿತಿಗೆ ಮರಳಿದ ಬಳಿಕವಷ್ಟೇ ಅಲ್ಲಿಂದ ಭಾರತೀಯ ಪಡೆಗಳನ್ನು ವಾಪಸ್ ಕರೆಸಿಕೊಳ್ಳಲಾಗುವುದು ಎಂದು ಕೆಲ ದಿನಗಳ ಹಿಂದಷ್ಟೇ ಭೂಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದರು. ಶುಕ್ರವಾರ ಇದಕ್ಕೆ ಚಾಲನೆ ದೊರೆತಿದೆ. ಇದನ್ನೂ ಓದಿ: ಯುದ್ಧಕ್ಕೆ ನಮ್ಮ ಬೆಂಬಲ ಇಲ್ಲ: BRICS ಶೃಂಗಸಭೆಯಲ್ಲಿ ಮೋದಿ ಸ್ಪಷ್ಟನೆ
ಮ್ಚೊಕ್ ಪ್ರದೇಶದಲ್ಲಿ ಭಾರತ – ಚೀನಾ ಸೇನೆಯ ತಲಾ ಐದು ಟೆಂಟ್‌ಗಳನ್ನು ಹಾಗೂ ದೆಸ್ಪಾಂಗ್ ಪಾಯಿಂಟ್‌ನಲ್ಲಿ ನಿರ್ಮಿಸಲಾಗಿದ್ದ 10 – 12 ತಾತ್ಕಾಲಿಕ ಶಿಬಿರಗಳನ್ನು ಹಿಂಪಡೆಯಲಾಗುತ್ತಿದೆ. ಎರಡೂ ಕಡೆ ಪೂರ್ಣ ಪ್ರಮಾಣದಲ್ಲಿ ವಾಪಸಾತಿ ಪ್ರಕ್ರಿಯೆ ಕೈಗೊಳ್ಳಲಾಗಿದೆಯೇ ಎಂಬುದನ್ನು ಜಂಟಿ ವೈಮಾನಿಕ ಸಮೀಕ್ಷೆ ಮೂಲಕ ಖಾತ್ರಿಪಡಿಸಿಕೊಳ್ಳಲಾಗುತ್ತದೆ. ಇದಾದ ಮುಂದಿನ 4-5 ದಿನಗಳಲ್ಲಿ ಗಸ್ತು ಶುರುವಾಗಲಿದೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ಸಂಘರ್ಷಗಳಿಗೆ ಶಾಂತಿಯುತ ಪರಿಹಾರಕ್ಕೆ ನಾವಿದ್ದೇವೆ: ಯುದ್ಧ ಕುರಿತು ಪುಟಿನ್ ಜೊತೆ ಮೋದಿ ಮಾತು
5 ವರ್ಷಗಳ ಬಳಿಕ ಮೋದಿ-ಜಿನ್‌ಪಿಂಗ್ ಮುಖಾಮುಖಿ:
2020ರಲ್ಲಿ ನಡೆದ ಗಲ್ವಾನ್ ಘರ್ಷಣೆಯ ಬಳಿಕ ಭಾರತ ಹಾಗೂ ಚೀನಾ ಮಧ್ಯೆ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸತತ 4 ವರ್ಷಗಳಿಂದ ಭಾರತ ಮತ್ತು ಚೀನಾ ಜೊತೆಗಿನ ಮಾತುಕತೆ ಯಶಸ್ವಿಯಾಗಿದೆ. ಶಾಂತಿ ನೆಲೆಸದಿದ್ದರೆ ಚೀನಾ ಜೊತೆಗೆ ಶಾಂತಿ ಮಾತುಕತೆ ಸಾಧ್ಯವಿಲ್ಲ ಎಂದು ಭಾರತ ಹೇಳಿತ್ತು. ಅಕ್ಟೋಬರ್ 2019 ರಲ್ಲಿ ತಮಿಳುನಾಡಿನ ಮಹಾಬಲಿಪುರಂನಲ್ಲಿ ಪ್ರಧಾನಿ ಮೋದಿ ಮತ್ತು ಕ್ಷಿ ಜಿನ್‌ಪಿಂಗ್ ನಡುವೆ ಕೊನೆಯ ಬಾರಿ ಔಪಚಾರಿಕ ಸಭೆ ನಡೆದಿತ್ತು.
ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಜಿನ್‍ಪಿಂಗ್ ಅವರನ್ನು ತಮಿಳುನಾಡಿನ ಸರ್ಕಾರವು ಅದ್ಧೂರಿಯಾಗಿ ಸ್ವಾಗತಿಸಿತ್ತು. ತಮಿಳುನಾಡಿನ ಸಾಂಪ್ರದಾಯಿಕ ಧಿರಿಸು ಬಿಳಿ ಪಂಚೆ, ಬಿಳಿ ಅಂಗಿ, ಶಲ್ಯ ಧರಿಸಿದ್ದ ಮೋದಿ, ಜಿನ್‍ಪಿಂಗ್ ಅವರಿಗೆ ಆತ್ಮೀಯ ಸ್ವಾಗತ ಕೋರಿದ್ದರು. ಆರಾಮಾಗಿ ಸುತ್ತಾಡುತ್ತಾ ಪಲ್ಲವರ ಕಾಲದ ದೇಗುಲಗಳ ಪರಿಚಯ ಮಾಡಿಕೊಟ್ಟಿದ್ದರು. ಮಹಾಭಾರತದ ಅರ್ಜುನ ತಪಸ್ಸು ಮಾಡಿದ್ದ ಸ್ಥಳ, ಒಂದೆಕಲ್ಲಿನಲ್ಲಿ ಕೆತ್ತಿದ ಪಂಚ ರಥ, ಹೀಗೆ ಹಲವು ಸ್ಥಳಗಳ ಮಹಿಮೆಯನ್ನು ವಿವರಿಸಿದ್ದರು.
ಮೋದಿ ಮತ್ತು ಜಿನ್‍ಪಿಂಗ್ ಸಮುದ್ರ ತೀರದಲ್ಲಿ ವಿಹರಿಸಿದ್ದರು. ಕೋವಲಂನ ಕೋವ್ ಹೋಟೆಲ್‍ನಲ್ಲಿ ಇರಿಸಲಾಗಿದ್ದ ಕಲಾಕೃತಿಗಳು ಮತ್ತು ಕೈಮಗ್ಗ ಪ್ರದರ್ಶನವನ್ನು ವೀಕ್ಷಿಸಿದ್ದರು. ಈ ವೇಳೆ ಕೈಯಿಂದ ನೇಯ್ದ ಕ್ಸಿ ಜಿಂಗ್‍ಪಿಂಗ್ ಭಾವಚಿತ್ರವನ್ನು ಪ್ರಧಾನಿ ಮೋದಿ ಚೀನಾ ಅಧ್ಯಕ್ಷರಿಗೆ ನೀಡಿದ್ದರು.