– ಸಿಎಂ ಎಚ್‍ಡಿಕೆ ವಿರುದ್ಧ ವಾಗ್ದಾಳಿ
– ಪ್ರಣಾಳಿಕೆಯಲ್ಲಿ ಮಹಾದಾಯಿ ವಿಚಾರ ಸೇರಿಸ್ತೀವಿ
ಬೆಂಗಳೂರು: ಪ್ರಧಾನಿಯವರ ಸಾಧನೆಯೇ ರಾಜ್ಯದಲ್ಲಿ ನನಗೆ ರಕ್ಷಾ ಕವಚವಾಗಿದೆ. ಅವರ ನಾಯಕತ್ವ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಬೇರೆ ಬೇರೆ ದೇಶಗಳಿಂದ ಮೋದಿಯವರಿಗೆ ಪ್ರಶಸ್ತಿಗಳು ಬಂದಿವೆ. ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಭಾರತದ ಆರ್ಥಿಕ ನೀತಿ ಎಲ್ಲರನ್ನು ಬೆಚ್ಚಿ ಬೆರಗಾಗುವಂತೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡ ಯೋಜನೆಗಳು ಹಾಗೂ ವ್ಯಕ್ತಿತ್ವವನ್ನು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಡಿ ಹೊಗಳಿದ್ದಾರೆ.
Advertisement
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾರ್ಚ್ 15 ರಂದು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಇದೆ. ಮರುದಿನ ಅಂದ್ರೆ ಮಾರ್ಚ್ 16ಕ್ಕೆ ದೆಹಲಿಗೆ ಹೋಗ್ತೀನಿ. ಅಂದು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡ್ತೀವಿ. 20 ರಿಂದ 22 ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡುತ್ತೇವೆ. ಬಹುತೇಕ ಎಲ್ಲ 16 ಹಾಲಿ ಸಂಸದರಿಗೂ ಟಿಕೆಟ್ ಸಿಗುತ್ತದೆ. ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲರಿಗೆ ಟಿಕೆಟ್ ಕೊಡಲಾಗುತ್ತಿದೆ. ಉಳಿದ ಕಡೆಗಳಲ್ಲಿ ಬಿಜೆಪಿ ಅಭ್ಯರ್ಥಿ ಪಟ್ಟಿ ಸಿದ್ಧಪಡಿಸ್ತಾ ಇದ್ದೀವಿ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ತೇಜಸ್ವಿನಿ ಅನಂತಕುಮಾರ್ ಸ್ಪರ್ಧೆ ಮಾಡ್ತಾರೆ. ಇನ್ನಷ್ಟು ಅನ್ಯ ಪಕ್ಷದ ಮುಖಂಡರು ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಇನ್ನೆರಡು ದಿನ ಕಾಯಿರಿ ಎಂದು ಹೇಳಿದ್ರು.
Advertisement
Advertisement
ಭಾರತ ಬದಲಾಗಲು ಮೋದಿ ಕಾರಣ:
5 ವರ್ಷದ ಹಿಂದೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರ ಜನರಿಗೆ ಕೊಟ್ಟ ಭರವಸೆಗಳನ್ನ ಈಡೇರಿಸುವತ್ತ ದಾಪುಗಾಲು ಇಟ್ಟಿದೆ. ಕಳೆದ ಚುನಾವಣೆಯ ವೇಳೆ ನಾಲ್ಕು ಯೋಜನೆಗಳನ್ನ ರೂಪಿಸಲಾಗಿತ್ತು. ಅವುಗಳೆಂದರೆ ಭ್ರಷ್ಟಾಚಾರ ನಿರ್ಮೂಲನೆ, ಜನ ಸಾಮಾನ್ಯರಿಗೆ ಯೋಜನೆಗಳನ್ನ ತಲುಪಿಸೋದು, ಗಡಿಗಳ ರಕ್ಷಣೆ, ವಿದೇಶಗಳಲ್ಲಿ ಭಾರತದ ಸಂಬಂಧ ಗಟ್ಟಿಗೊಳಿಸುವುದಾಗಿತ್ತು. ಈ ನಾಲ್ಕು ಮುಕ್ಕಾಲು ವರ್ಷದಲ್ಲಿ ಮೋದಿಯವರು ಭ್ರಷ್ಟಾಚಾರ ಮುಕ್ತವಾದ ಸರ್ಕಾರವನ್ನು ಕೊಟ್ಟಿದ್ದಾರೆ. ಇಂದಿನ ಭಾರತ ಬೆನ್ನು ಬಾಗಿಸುವ ಭಾರತವಾಗಿಲ್ಲ. ಬದಲಾಗಿ ಸೆಟೆದು ನಿಂತು ಹೋರಾಡುವ ಭಾರತವಾಗಿ ಬದಲಾಗಿದೆ ಎಂದು ಹೇಳಿದ್ರು.
Advertisement
ಪುಲ್ವಾಮಾ ಘಟನೆ ಬಳಿಕ ಭಾರತವನ್ನು ಜಗತ್ತಿನ ಹಲವು ರಾಷ್ಟ್ರಗಳು ಬೆಂಬಲಿಸಿವೆ. ಪಾಕಿಸ್ತಾನವನ್ನು ಎಲ್ಲಾ ದೇಶಗಳು ಖಂಡಿಸಿವೆ. ಅಲ್ಲದೇ ಭಾರತದ ನಿಲುವಿಗೆ ಬೆಂಬಲ ಕೊಟ್ಟಿವೆ. ಇದು ಒಂದು ರೀತಿಯಲ್ಲಿ ಮೋದಿಜೀಯವರಿಗೆ ರಾಜತಾಂತ್ರಿಕ ಗೆಲುವಾಗಿದೆ. ಇಂದಿನ ಭಾರತ ಬೆನ್ನು ಬಾಗಿಸುವ ಭಾರತವಲ್ಲ, ಸೆಟೆದು ನಿಂತು ಪ್ರತ್ಯುತ್ತರ ಕೊಡುವ ಭಾರತವಾಗಿ ನಿರ್ಮಾಣವಾಗಿದೆ. ಭಾರತ ಬದಲಾಗಿದೆ. ಇದಕ್ಕೆ ಕಾರಣ ಮೋದಿಯವರ ದಿಟ್ಟ ನಿಲುವು ಎಂದು ಅವರು ಹೇಳಿದ್ರು.
ಆರ್ಥಿಕ ವಿಚಾರದಲ್ಲಿ ಮುಂದಿದ್ದೇವೆ:
ಮಂತ್ರಿ ಮಂಡಲದ ಯಾವುದೇ ಒಬ್ಬ ಸದಸ್ಯನ ಮೇಲೆ ಭ್ರಷ್ಟಾಚಾರದ ಆರೋಪವಿಲ್ಲ. ಅಭಿವೃದ್ಧಿಯತ್ತ ಹೆಜ್ಜೆ ಇಡುತ್ತಿದ್ದೇವೆ. ಮುಂದುವರಿದ ದೇಶಗಳಿಗೆ ಸವಾಲು ಹಾಕುವ ಹಂತಕ್ಕೆ ನಾವು ಬೆಳೆದಿದ್ದೇವೆ. ಆರ್ಥಿಕ ಸದೃಢತೆ ಮತ್ತು ಬೆಳೆಯುತ್ತಿರುವ ದೇಶವಾದ ಫ್ರಾನ್ಸ್ ಹಿಂದೆ ಹಾಕಿ ಅದೇ ಜಾಗಕ್ಕೆ ನಾವು ಬಂದಿದ್ದೇವೆ. ಆರ್ಥಿಕ ಪ್ರಗತಿಯಲ್ಲಿ ನಾವು ಅಮೆರಿಕ ಹಾಗೂ ಫ್ರಾನ್ಸ್ ಗೆ ಸಮವಾಗಿದ್ದೇವೆ ಅಂದ್ರು.
ಸಿಎಂ ವಿರುದ್ಧ ವಾಗ್ದಾಳಿ:
ರೈತರ ಸಾಲಮನ್ನಾ ಮಾಡ್ತೀವಿ ಎಂದು ಹೇಳಿ 9 ತಿಂಗಳಾಯ್ತು. ನೀವು ಸಾಲಮನ್ನಾ ಮಾಡಿರೋದು ಬರೀ 4500 ಕೋಟಿ ಮಾತ್ರ. ಈ ಸುಳ್ಳು ಭರವಸೆಯನ್ನು ಕೊಡದಿದ್ದರೆ 37 ಸೀಟು ಅಲ್ಲ, 20 ಸೀಟು ಗೆಲ್ತಿರಲಿಲ್ಲ. 37 ಸೀಟು ಇಟ್ಕೊಂಡು ಅಧಿಕಾರ ನಡೆಸ್ತಿದ್ದಾರೆ. ಹೋಗ್ಲಿ ಅವರ ನಡುವೆ ಹೊಂದಾಣಿಕೆ ಇದೆಯಾ..? ಅಭಿವೃದ್ಧಿ ಬಗ್ಗೆ ಏನ್ ಕಾರ್ಯಕ್ರಮ ರೂಪಿಸಿದ್ದಾರೆ ಎಂದು ಪ್ರಶ್ನೆಗಳ ಮೂಲಕ ನೇರವಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ರು.
ಕುಮಾರಸ್ವಾಮಿ ಅವರ ಮೇಲೆ ಕಾಂಗ್ರೆಸ್ ನ 20 ಶಾಸಕರು ಅಸಮಾಧಾನ ಹೊಂದಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಏನಾಗುತ್ತೆ ಕಾದುನೋಡಿ. ಸರ್ಕಾರ ರಚನೆ ಬಗ್ಗೆ ಈಗ ಮಾತನಾಡುವುದಿಲ್ಲ. ಈಗ ಲೋಕಸಭಾ ಚುನಾವಣೆ ಕಡೆ ಮಾತ್ರ ನಮ್ಮ ಗಮನವಿದೆ. ಉಮೇಶ್ ಜಾಧವ್ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ನಿಶ್ಚಿತವಾಗಿದೆ. ಕಾನೂನು ತಜ್ಞರ ಜೊತೆ ಚರ್ಚೆ ಮಾಡಿಯೇ ಜಾಧವ್ ರಾಜೀನಾಮೆ ಕೊಟ್ಟಿದ್ದಾರೆ ಎಂದು ಹೇಳಿದ್ರು.
ಅಂಬರೀಶ್ ಬಗ್ಗೆ ಹಗುರ ಮಾತು:
ಸುಮಲತಾ ಅಂಬರೀಶ್ ಅವರ ನಡೆ ಏನು ಅನ್ನೋದನ್ನ ಕಾದು ನೋಡುತ್ತೇವೆ. ಆ ಬಳಿಕ ನಮ್ಮ ಅಭ್ಯರ್ಥಿ ಹಾಕಬೇಕೇ? ಬೇಡವೇ? ಅನ್ನೋದ್ರ ಬಗ್ಗೆ ತೀರ್ಮಾನ ಮಾಡುತ್ತೇವೆ. ನಾನು ಮಾಧ್ಯಮದ ಮುಂದೆ ಎಲ್ಲವನ್ನೂ ಹೇಳಲಾಗುವುದಿಲ್ಲ. ಅಂಬರೀಶ್ ಬದುಕಿದ್ದಾಗ ಹಾಡಿಹೊಗಳಿ ಅವರು ತೀರಿಕೊಂಡ ಬಳಿಕ ಅವರ ಬಗ್ಗೆ ಕುಮಾರಸ್ವಾಮಿ ಹಗುರವಾಗಿ ಮಾತನಾಡುತ್ತಿದ್ದಾರೆ. ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗಿದ್ದರು. ಈಗ ಅವರ ಸಾಧನೆ ಏನು ಎಂದು ಕೇಳುತ್ತಾರೆ. ಇದು ಕುಮಾರಸ್ವಾಮಿ, ರೇವಣ್ಣ ಅವರಿಗೆ ಶೋಭೆ ತರುವಂತದ್ದಲ್ಲ ಎಂದು ಗರಂ ಆದ್ರು.
ಪ್ರಣಾಳಿಕೆಯಲ್ಲಿ ಮಹಾದಾಯಿ ವಿಚಾರ ಸೇರಿಸ್ತೀವಿ:
ಮಹಾದಾಯಿ ವಿಚಾರವನ್ನ ನಮ್ಮ ಪ್ರಣಾಳಿಕೆಯಲ್ಲಿ ಸೇರಿಕೊಳ್ಳುತ್ತೇವೆ. ಆ ವಿಚಾರವನ್ನು ನಿರಾಕರಿಸುವಂತಿಲ್ಲ. ರಾಜ್ಯ ಸರ್ಕಾರದ ಜವಾಬ್ದಾರಿ ಬಹಳ ಮುಖ್ಯವಾಗಿತ್ತು. ಆದ್ರೆ ಮಹಾದಾಯಿ ಕುಡಿಯುವ ನೀರಿನ ವಿಚಾರವನ್ನ ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಹೀಗಾಗಿ ನಿಶ್ಚಿತವಾಗಿ ಈ ಬಾರಿ ಮಹಾದಾಯಿ ವಿಚಾರವನ್ನು ಪ್ರಣಾಳಿಕೆಯಲ್ಲಿ ಸೇರಿಸ್ತೀವಿ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv