ನವದೆಹಲಿ: 2024ರ ಬಜೆಟ್‌ನಲ್ಲಿ (Union Budget 2024) ‘ತಾರತಮ್ಯ’ ಮಾಡಲಾಗಿದೆ. ಎಲ್ಲಾ ರಾಜ್ಯಗಳಿಗೂ ಬಜೆಟ್‌ನಲ್ಲಿ ಸಮಾನ ಆದ್ಯತೆ ನೀಡಿಲ್ಲ ಎಂದು ಟೀಕಿಸಿ ಕೇಂದ್ರದ ವಿರುದ್ಧ ವಿಪಕ್ಷಗಳ ಇಂಡಿಯಾ ಒಕ್ಕೂಟ (INDIA Bloc) ಸಂಸತ್ (Parliament) ಆವರಣದಲ್ಲಿ ಪ್ರತಿಭಟನೆ ನಡೆಸಿತು.
ಎನ್‌ಡಿಎ ಕೂಟದ ಮಿತ್ರ ಪಕ್ಷಗಳ ಆಡಳಿತವಿರುವ ಬಿಹಾರ ಮತ್ತು ಆಂಧ್ರಪ್ರದೇಶದ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಆದ್ಯತೆ ನೀಡಿದೆ. ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಬಜೆಟ್ ಮಂಡಿಸಿದಂತೆ ತೋರುತ್ತಿದೆ ಎಂದು ವಿಪಕ್ಷಗಳ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರಾಯಚೂರಿಗೆ ಘೋಷಣೆಯಾಗದ ಏಮ್ಸ್ – ಹೋರಾಟಗಾರರಿಂದ ಅಸಮಾಧಾನ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಬಜೆಟ್‌ನಲ್ಲಿ ಬಿಹಾರಕ್ಕೆ ಒಟ್ಟು 59,000 ಕೋಟಿಯ ಯೋಜನೆಗಳು ಮತ್ತು ಪ್ಯಾಕೇಜ್‌ಗಳನ್ನು ಘೋಷಿಸಿದ್ದಾರೆ. ಆಂಧ್ರಪ್ರದೇಶ ರಾಜಧಾನಿ ಅಮರಾವತಿ ನಿರ್ಮಾಣಕ್ಕೆ 15,000 ಕೋಟಿ, ಅಗತ್ಯವಿದ್ದರೆ ಹೆಚ್ಚುವರಿ ಹಣ, ಪೋಲಾವರಂ ಅಣೆಕಟ್ಟು ಯೋಜನೆ ಮತ್ತು ಎರಡು ಕೈಗಾರಿಕಾ ನೋಡ್‌ಗಳನ್ನು ಪೂರ್ಣಗೊಳಿಸುವುದಾಗಿ ಘೋಷಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬಜೆಟ್‌ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೇಂದ್ರ ಬಜೆಟ್‌ನಲ್ಲಿ ಹಲವರಿಗೆ ನ್ಯಾಯ ಸಿಕ್ಕಿಲ್ಲ, ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯಾವ ರಾಜ್ಯವನ್ನೂ ಕಡೆಗಣಿಸಿಲ್ಲ, ಪ್ರತಿಪಕ್ಷಗಳ ಪ್ರತಿಭಟನೆ ದುರುದ್ದೇಶಪೂರ್ವಕ: ನಿರ್ಮಲಾ ಸೀತಾರಾಮನ್
ಇದು ತಾರತಮ್ಯದ ಬಜೆಟ್. ತಮಿಳುನಾಡು, ತೆಲಂಗಾಣ, ಹಿಮಾಚಲ ಪ್ರದೇಶದಂತಹ ರಾಜ್ಯಗಳನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ. ಈಚೆಗೆ ಈ ರಾಜ್ಯಗಳಲ್ಲಿ ಸಾಕಷ್ಟು ವಿಪತ್ತುಗಳಾದರೂ ಯಾವುದೇ ಪ್ರವಾಹ ಪರಿಹಾರ ನೀಡಿಲ್ಲ ಎಂದು ಕಾಂಗ್ರೆಸ್ ನಾಯಕ ಮಾಣಿಕ್ಕಂ ಟ್ಯಾಗೋರ್ ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ಸಂಸದ ಶಶಿ ತರೂರ್, ಆರೋಗ್ಯ ಕ್ಷೇತ್ರದಲ್ಲಿ ಕೇರಳ ರಾಜ್ಯವನ್ನು ನಿರ್ಲಕ್ಷಿಸಲಾಗಿದೆ. ರಾಜ್ಯಕ್ಕೆ ಆರೋಗ್ಯ ಕ್ಷೇತ್ರದಲ್ಲಿ ಒಂದಷ್ಟು ನಿರೀಕ್ಷೆಗಳಿದ್ದವು. ಅವ್ಯಾವುವೂ ಈಡೇರಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.