ಧವನ್, ರೋಹಿತ್ ಅರ್ಭಟಕ್ಕೆ ಬೆಚ್ಚಿದ ಪಾಕಿಸ್ತಾನ – ಟೀಂ ಇಂಡಿಯಾಗೆ ಭರ್ಜರಿ ಗೆಲುವು

Public TV
3 Min Read
Rohit Shikhar New

ದುಬೈ: ಇಲ್ಲಿನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಇಂಡೊ ಪಾಕ್ ವಿರುದ್ಧ ಕದನದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಧವನ್‍ರ ಅಬ್ಬರದ ಶತಕಗಳ ನೆರವಿನಿಂದ  9 ವಿಕೆಟ್ ಗಳ ಭರ್ಜರಿ ಜಯ ಪಡೆಯಿತು.

ಪಾಕ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಆರಂಭಿಕರಾದ ಧವನ್ ಹಾಗೂ ರೋಹಿತ್ ಶರ್ಮಾ ಅತ್ಯುತ್ತಮ ಆರಂಭ ನೀಡಿದರು. ಪಂದ್ಯದ 5ನೇ ಓವರ್ ಶಹೇನ್ ಬೌಲಿಂಗ್ ನಲ್ಲಿ ಇಮಾಮ್ ರಿಂದ ಜೀವದಾನ ಪಡೆದ ರೋಹಿತ್ ಶರ್ಮಾ ವೃತ್ತಿ ಜೀವನದ 19ನೇ ಶತಕ ಪೂರೈಸಿದರು. ಪಾಕ್ ಬೌಲರ್ ಗಳನ್ನು ಹಿಗ್ಗಾಮುಗ್ಗಾ ದಂಡಿಸಿದ ಈ ಜೋಡಿ ಟೀಂ ಇಂಡಿಯಾ ಪರ 210 ದಾಖಲೆ ರನ್ ಜೊತೆಯ ನೀಡಿತು. ಅಲ್ಲದೇ ಕೇವಲ 39.3 ಓವರ್ ಗಳಲ್ಲಿ 238 ರನ್ ಸಿಡಿಸಿ ಗೆಲುವಿನ ಸಿಹಿ ಪಡೆಯಿತು.

ಧವನ್ ವೃತ್ತಿ ಜೀವನದ 15ನೇ ಏಕದಿನ ಶತಕ (114 ರನ್, 100 ಎಸೆತ, 16 ಬೌಂಡರಿ, 2 ಸಿಕ್ಸರ್) ಸಿಡಿಸಿ ಮಿಂಚಿದರು. ಈ ಮೂಲಕ ಏಷ್ಯಾಕಪ್, ಚಾಂಪಿಯನ್ಸ್ ಟ್ರೋಫಿ, ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಕನಿಷ್ಠ 2 ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್ ಮನ್ ಎಂಬ ದಾಖಲೆ ಬರೆದರು. ನಾಯಕ ರೋಹಿತ್ ಶರ್ಮಾ 181 ಇನ್ನಿಂಗ್ಸ್ ಗಳಲ್ಲಿ 19ನೇ ಏಕದಿನ ಶತಕ (111* ರನ್, 119 ಎಸೆತ, 7 ಬೌಂಡರಿ, 4 ಸಿಕ್ಸರ್) ಪೂರೈಸಿದರು. ಇದರೊಂದಿಗೆ ಬ್ರಿಯಾನ್ ಲಾರಾ, ಮಹೇಲಾ ಜಯವರ್ದನೆ, ರಾಸ್ ಟೇಲರ್ ದಾಖಲೆಯನ್ನು ಸರಿಗಟ್ಟಿದ್ದರು.

ಸಚಿನ್, ಗಂಗೂಲಿ ದಾಖಲೆ ಉಡೀಸ್: ಪಂದ್ಯದಲ್ಲಿ 210 ರನ್ (201 ಎಸೆತ) ಜೊತೆಯಾಟ ನೀಡಿದ ಈ ಜೋಡಿ ಪಾಕ್ ವಿರುದ್ಧ ಅತಿ ಹೆಚ್ಚು ರನ್ ಜೊತೆಯಾಟ ನೀಡಿದ ದಾಖಲೆ ಪಡೆಯಿತು. ಈ ಹಿಂದೆ 1998ರಲ್ಲಿ ಗಂಗೂಲಿ ಹಾಗೂ ತೆಂಡೂಲ್ಕರ್ ಜೋಡಿ 159 ರನ್ ಜೊತೆಯಾಟ ನೀಡಿತ್ತು.

13ನೇ ಜೊತೆಯಾಟ: ಧವನ್, ರೋಹಿತ್ ಜೋಡಿ 82 ಇನ್ನಿಂಗ್ಸ್ ಗಳಲ್ಲಿ 13ನೇ ಬಾರಿಗೆ 100 ಪ್ಲಸ್ ರನ್ ಜೊತೆಯಾಟ ನೀಡಿತು. ಈ ಹಿಂದೆ ಗಂಗೂಲಿ-ಸಚಿನ್ (21), ಗಿಲ್‍ಕ್ರಿಸ್ಟ್ (16), ಗ್ರೀನಿಡ್ಜ್ – ಹೇಯ್ನ್ಸ್ ಜೋಡಿ (15) ಬಾರಿ 100 ಪ್ಲಸ್ ಜೊತೆಯಾಟ ನೀಡಿದ್ದಾರೆ.

ಯಜುವೇಂದ್ರ ಚಹಲ್ 50 ವಿಕೆಟ್ : ಟೀಂ ಇಂಡಿಯಾ ಪರ ಯಜುವೇಂದ್ರ ಚಹಲ್ 30 ಪಂದ್ಯಗಳಿಂದ 50 ವಿಕೆಟ್ ಪಡೆದ ಸಾಧನೆ ಮಾಡಿದರು. ಈ ಮೂಲಕ ಭಾರತ ಪರ ವೇಗವಾಗಿ 50 ವಿಕೆಟ್ ಪಡೆದ 2ನೇ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಕುಲ್ ದೀಪ್ ಯಾದವ್ 24 ಪಂದ್ಯಗಳಲ್ಲಿ 50 ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ.

ವಿಕೆಟ್ ಪಡೆಯಲು ವಿಫಲ: ವಿಶ್ವದ ಕ್ರಿಕೆಟ್‍ನಲ್ಲಿ ಬಲಿಷ್ಠ ಬೌಲಿಂಗ್ ಲೈನ್ ಆಪ್ ಹೊಂದಿದ್ದರು. ಇಂದಿನ ಪಂದ್ಯದಲ್ಲಿ ಪಾಕ್ ನ ಯಾವೊಬ್ಬ ಬೌಲರ್ ಕೂಡ ವಿಕೆಟ್ ಪಡೆಯುವಲ್ಲಿ ವಿಫಲರಾದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕ್ ಶೋಯಿಬ್ ಮಲಿಕ್ 78 ರನ್ ಹಾಗೂ ಫಾಖರ್ ಜಮಾನ್ 44 ರನ್ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ಪಾಕಿಸ್ತಾನ ಏಳು ವಿಕೆಟ್ ಕಳೆದುಕೊಂಡು 237 ರನ್ ಗಳಿಸಲು ಅಷ್ಟೇ ಶಕ್ತವಾಯಿತು. ಟೀಂ ಇಂಡಿಯಾ ಪರ ಕುಲ್‍ದೀಪ್ ಯಾದವ್, ಚಹಲ್, ಬುಮ್ರಾ ತಲಾ 2 ವಿಕೆಟ್ ಪಡೆದರು. ಬಾಂಗ್ಲಾ ವಿರುದ್ಧ ಕಮ್ ಬ್ಯಾಂಕ್ ಪಂದ್ಯದಲ್ಲಿ ಮಿಂಚಿದ್ದ ಜಡೇಜಾ 9 ಓವರ್ ಎಸೆದು 50 ರನ್ ನೀಡಿ ವಿಕೆಟ್ ಪಡೆಯದೆ ದುಬಾರಿಯಾದರು.

ಕಾಲಿಗೆ ಬುದ್ಧಿ ಹೇಳಿದ ಮುಷರಫ್: ಇಂಡೊ ಪಾಕ್ ಕದನವನ್ನು ವೀಕ್ಷಿಸಲು ಬಂದ ಪಾಕಿಸ್ತಾನ ಮಾಜಿ ಅಧ್ಯಕ್ಷ ಫರವೇಜ್ ಮುಷರಫ್ ತಂಡದ ಸೋಲು ಖಚಿತವಾಗುತ್ತಿದಂತೆ ಕ್ರೀಡಾಂಗಣದಿಂದ ಕಾಲ್ಕಿತ್ತರು.

Share This Article
Leave a Comment

Leave a Reply

Your email address will not be published. Required fields are marked *