– ಸರಣಿಯ ಕೊನೇ ಪಂದ್ಯದಲ್ಲಿ 150 ರನ್‌ಗಳ ಭರ್ಜರಿ ಗೆಲುವು
ಮುಂಬೈ: ಸೂಪರ್ ಸಂಡೆ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ (England) ವಿರುದ್ಧ ನಡೆದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ (Team India) 150 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಟಿ20 ಸರಣಿಯನ್ನು 4-1 ಅಂತರದಲ್ಲಿ ಗೆದ್ದುಕೊಂಡಿದೆ. ಅಲ್ಲದೇ 2019ರ ಬಳಿಕ ಒಂದೇ ಒಂದು ಟಿ20 ಸರಣಿಯನ್ನೂ ಸೋಲದ ಭಾರತ ಗೆಲುವಿನ ಪರಂಪರೆಯನ್ನು ಮುಂದುವರಿಸಿದೆ.
ಗೆಲುವಿಗೆ 248 ರನ್‌ಗಳ ಬೃಹತ್ ಗುರಿ ಪಡೆದ ಇಂಗ್ಲೆಂಡ್ 10.3 ಓವರ್‌ಗಳಲ್ಲೇ 97 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಸೋಲೊಪ್ಪಿಕೊಂಡಿತು.
Advertisement
Advertisement
ಬೃಹತ್ ಮೊತ್ತದ ಚೇಸಿಂಗ್ ಆರಂಭಿಸಿದ ಇಂಗ್ಲೆಂಡ್ ಮೊದಲ ಓವರ್‌ನಿಂದಲೇ ಪ್ರತಿದಾಳಿ ನಡೆಸಲು ಶುರು ಮಾಡಿತು. ಆರಂಭಿಕ ಆಟಗಾರ ಫಿಲ್ ಸಾಲ್ಟ್ 2 ಬೌಂಡರಿ, 1 ಸಿಕ್ಸರ್‌ನೊಂದಿಗೆ 17 ರನ್ ಚಚ್ಚಿದರು. ಇದರಿಂದ ಇಂಗ್ಲೆಂಡ್ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದ್ರೆ 4ನೇ ಓವರ್‌ನಲ್ಲಿ ಮೊದಲ ಎಸೆತದಲ್ಲೇ ಬೆನ್ ಡಕೆಟ್ ವಿಕೆಟ್ ಬೀಳುತ್ತಿದ್ದಂತೆ ಇಂಗ್ಲೆಂಡ್ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು.
Advertisement
ಇಂಗ್ಲೆಂಡ್ ಪರ ಏಕಾಂಗಿ ಹೋರಾಟ ನಡೆಸಿದ ಫಿಲ್ ಸಾಲ್ಟ್ 23 ಎಸೆತಗಳಲ್ಲಿ 53 ರನ್ (3 ಸಿಕ್ಸರ್, 7 ಬೌಂಡರಿ) ಗಳಿಸಿದ್ರೆ ಉಳಿದೆಲ್ಲ ಆಟಗಾರರು ಅಲ್ಪ ಮೊತ್ತಕ್ಕೆ ನೆಲ ಕಚ್ಚಿದರು. ಇನ್ನೂ ಇಂಗ್ಲೆಂಡ್ ವಿರುದ್ಧ ಸಂಘಟಿತ ಬೌಲಿಂಗ್ ದಾಳಿ ನಡೆಸಿದ ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ 3 ವಿಕೆಟ್ ಕಿತ್ತರೆ, ವರುಣ್ ಚಕ್ರವರ್ತಿ, ಶಿವಂ ದುಬೆ, ಅಭಿಷೇಕ್ ಶರ್ಮಾ (Abhishek Sharma), ತಲಾ 2 ವಿಕೆಟ್ ಹಾಗೂ ರವಿ ಬಿಷ್ಣೋಯಿ ಒಂದು ವಿಕೆಟ್ ಪಡೆದು ಮಿಂಚಿದರು.
Advertisement
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ಬೃಹತ್ ಮೊತ್ತವನ್ನೇ ಕಲೆ ಹಾಕಿತು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿದೆ. ಒಂದರ ಮೇಲೆ ಒಂದರಂತೆ ಲೀಲಾಜಾಲವಾಗಿ ಸಿಕ್ಸರ್ ಸಿಡಿಸಿದ ಅಭಿಷೇಕ್ ಶರ್ಮಾ, ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿದರು.
ಇದರೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಅತೀ ವೇಗವಾಗಿ ಶತಕ ಸಿಡಿಸಿದ ಭಾರತ ತಂಡದ ಎರಡನೇ ಆಟಗಾರ ಎಂಬ ದಾಖಲೆ ತಮ್ಮದಾಗಿಸಿಕೊಂಡರು. ಜೊತೆಗೆ ಟಿ20 ಕ್ರಿಕೆಟ್‌ನಲ್ಲಿ ತಮ್ಮ 2ನೇ ಶತಕ ದಾಖಲಿಸಿದರು. ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್ ಕಂಡು ವಾಖೆಂಡೆ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ಸಂಭ್ರಮಿಸಿದರು. ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟುವ ಮೂಲಕ ಸಂಜು ಸ್ಯಾಮ್ಸನ್ ಇಂಗ್ಲೆಂಡ್ ಬೌಲರ್‌ಗಳ ಮೇಲೆ ಪ್ರಹಾರ ನಡೆಸಿದರು.
ಅಂತಿಮವಾಗಿ ಭಾರತ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 247 ರನ್ ಕಲೆಹಾಕಿತು. ಭಾರತದ ಪರ ಅಭಿಷೇಕ್ ಶರ್ಮಾ 135 ರನ್ (54 ಎಸೆತ, 13 ಸಿಕ್ಸರ್, 7 ಬೌಂಡರಿ), ಶಿವಂ ದುಬೆ 30 ರನ್, ತಿಲಕ್ ವರ್ಮಾ 24 ರನ್, ಸಂಜು ಸ್ಯಾಮ್ಸನ್ 16 ರನ್, ಅಕ್ಷರ್ ಪಟೇಲ್ 15 ರನ್, ಸೂರ್ಯಕುಮಾರ್ ಯಾದವ್ 2 ರನ್, ಹಾರ್ದಿಕ್ ಪಾಂಡ್ಯ ಮತ್ತು ರಿಂಕು ಸಿಂಗ್ ತಲಾ 9 ರನ್ ಗಳಿಸಿದ್ರು.
ಇಂಗ್ಲೆಂಡ್ ಪರ ಬ್ರೇಯ್ಸನ್ ಕರ್ಸ್ ಮೂರು ವಿಕೆಟ್ ಹಾಗೂ ಮಾರ್ಕ್ ವುಡ್ ಎರಡು ವಿಕೆಟ್ ಕಿತ್ತರು. ಜೋಪ್ರಾ ಆರ್ಚರ್, ಜೇಮೀ ಓವರ್ಟನ್ ಮತ್ತು ಆದಿಲ್ ರಶೀದ್ ಒಂದೊಂದು ವಿಕೆಟ್ ಪಡೆದರು.