ದುಬೈ: ಥ್ರಿಲ್ಲಿಂಗ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 3 ವಿಕೆಟ್ ಗಳ ಜಯವನ್ನು ಗಳಿಸಿ ಟೀಂ ಇಂಡಿಯಾ 7ನೇ ಬಾರಿ ಏಷ್ಯಾ ಕಪ್ ಮುಡಿಗೇರಿಸಿಕೊಂಡಿದೆ.
223 ರನ್ ಗಳ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾಗೆ ಕೊನೆಯ 28 ಎಸೆತದಲ್ಲಿ 26 ರನ್ ಗಳಿಸಬೇಕಿತ್ತು. ಈ ಸಂದರ್ಭದಲ್ಲಿ ಭುವನೇಶ್ವರ್ ಕುಮಾರ್ ಸಿಕ್ಸರ್ ಅಟ್ಟಿ ರನ್ ಅಂತರವನ್ನು ಸ್ವಲ್ಪ ಕಡಿಮೆ ಮಾಡಿದರು. 47ನೇ ಓವರ್ ನಲ್ಲಿ 5 ರನ್ ಬಂದಿದ್ದರೆ, 48ನೇ ಓವರ್ ನ ಎರಡನೇ ಎಸೆತದಲ್ಲಿ ಜಡೇಜಾ ಔಟಾದರು. ಈ ವೇಳೆ ಮತ್ತೆ ಕ್ರೀಸಿಗೆ ಗಾಯಗೊಂಡು ಹೊರ ನಡೆದಿದ್ದ ಕೇದಾರ್ ಜಾದವ್ ಆಗಮಿಸಿದರು. ಈ ಓವರ್ ನಲ್ಲಿ ಕೇವಲ 4 ರನ್ ಬಂತು.
Advertisement
ಕೊನೆಯ 12 ಎಸೆತದಲ್ಲಿ 9 ರನ್ ಗಳಿಸಬೇಕಾದ ಅನಿವಾರ್ಯತೆ. ಮುಸ್ತಫೀಜುರ್ ಎಸೆದ ಮೊದಲ ಎಸೆತದಲ್ಲಿ ಭುವನೇಶ್ವರ್ ಔಟ್ ಆದರು. ಈ ಓವರ್ ನ ಮೂರು ಎಸೆತದಲ್ಲಿ ರನ್ ಗಳಿಸುವ ಅವಕಾಶವಿದ್ದರೂ ಕೇದಾರ್ ಜಾದವ್ ಯಾವುದೇ ರನ್ ಗಳಿಸಲಿಲ್ಲ. ಕೊನೆಯ ಬಾಲಿನಲ್ಲಿ 2 ರನ್ ಓಡಿದ ಪರಿಣಾಮ ಕೊನೆಯ ಓವರ್ ನಲ್ಲಿ 6 ರನ್ ಬೇಕಿತ್ತು.
Advertisement
Advertisement
ಕೊನೆಯ ಓವರ್ ಎಸೆಯಲು ಬಂದವರು ಮಹಮದುಲ್ಲಾ. ಮೊದಲ ಎಸೆತದಲ್ಲಿ 1 ರನ್ ಬಂದರೆ, ಎರಡನೇ ಎಸೆತದಲ್ಲಿ ಕೇದಾರ್ ಜಾದವ್ 1 ರನ್ ಹೊಡೆದರು. ಮೂರನೇ ಎಸೆತದಲ್ಲಿ ಕುಲದೀಪ್ ಯಾದವ್ 2 ರನ್ ಹೊಡೆದರು. ಕೊನೆಗೆ ಮೂರು ಎಸೆತದಲ್ಲಿ 2 ರನ್ ಗಳಿಸಬೇಕಾದ ಒತ್ತಡ. ನಾಲ್ಕನೇಯ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 5ನೇ ಎಸೆತದ ವೇಳೆ ಕುಲದೀಪ್ ಯಾದವ್ ಒಂದು ರನ್ ಓಡಿದರು. ಈ ವೇಳೆ ರನ್ ಔಟ್ ಆಗುವ ಅವಕಾಶ ಇತ್ತು. ಕೊನೆಯ ಒಂದು ಎಸೆತದಲ್ಲಿ 1 ರನ್ ಗಳಿಸಬೇಕಿತ್ತು. ಈ ವೇಳೆ ಕೇದಾರ್ ಜಾದವ್ ಕೊನೆಯ ಎಸೆತವನ್ನು ಫೈನ್ ಲೆಗ್ ಕಡೆಗೆ ತಿರುಗಿಸಿ ಒಂದು ರನ್ ಗಳಿಸುವ ಮೂಲಕ ಭಾರತಕ್ಕೆ ಜಯವನ್ನು ತಂದುಕೊಟ್ಟರು.
Advertisement
36.5 ಓವರ್ ವೇಳೆ 160 ರನ್ ಗಳಿಸಿದ್ದಾಗ ಧೋನಿ ಓಟಾದಾಗ ಭಾರತ ಸೋಲುತ್ತಾ ಎನ್ನುವ ಪ್ರಶ್ನೆ ಮೂಡಿತ್ತು. ಆದರೆ ರವಿಂದ್ರ ಜಡೇಜಾ ಮತ್ತು ಭುವನೇಶ್ವರ್ ಕುಮಾರ್ 6ನೇ ವಿಕೆಟ್ ಗೆ 45 ರನ್ ಗಳ ಜೊತೆಯಾಟವಾಡಿ ತಂಡವನ್ನು ಗೆಲುವಿನ ಸಮೀಪ ತಂದಿಟ್ಟಿದ್ದರು.
ಯಾರು ಎಷ್ಟು ರನ್?
ರೋಹಿತ್ ಶರ್ಮಾ 48, ಶಿಖರ್ ಧವನ್ 15, ದಿನೇಶ್ ಕಾರ್ತಿಕ್ 37, ಧೋನಿ 36, ಕೇದಾರ್ ಜಾಧವ್ ಔಟಾಗದೇ 23, ರವೀಂದ್ರ ಜಡೇಜಾ 23, ಭುವನೇಶ್ವರ್ ಕುಮಾರ್ 21 ರನ್ ಗಳಿಸಿದರು.
ಸಾಧಾರಣ ಮೊತ್ತ:
ಆರಂಭದಲ್ಲಿ ಉತ್ತಮ ಆರಂಭ ಪಡೆದರೂ ನಂತರ ಭಾರತೀಯ ಬೌಲರ್ ಗಳ ಉತ್ತಮ ಪ್ರದರ್ಶನದಿಂದ ಬಾಂಗ್ಲಾದೇಶ 48.3 ಓವರ್ ಗಳಲ್ಲಿ 222 ರನ್ ಗಳಿಗೆ ಆಲೌಟ್ ಆಗಿತ್ತು. ಒಂದು ಹಂತದಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ 120 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಬಾಂಗ್ಲಾ 31 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡ ಪರಿಣಾಮ ಸಾಧಾರಣ ಮೊತ್ತ ಪೇರಿಸಿತ್ತು. ಧೋನಿ ಈ ಪಂದ್ಯದಲ್ಲಿ 2 ಸ್ಟಂಪ್ ಮಾಡಿ ಬಾಂಗ್ಲಾ ರನ್ ಗೆ ಕಡಿವಾಣ ಹಾಕಿದ್ದರು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾ ತಂಡಕ್ಕೆ ಮೊದಲ ವಿಕೆಟ್ ಗೆ ಲಿಟನ್ ದಾಸ್ ಮತ್ತು ಮೆಹಿದಿ ಹಸನ್ ಮಿರಜ್ 20.5 ಓವರ್ ಗಳಲ್ಲಿ 120 ರನ್ ಜೊತೆಯಾಟವಾಡಿ ಉತ್ತಮ ಅಡಿಪಾಯ ಹಾಕಿದರು. ಮೆಹಿದಿ 32 ರನ್(59 ಎಸೆತ, 3 ಬೌಂಡರಿ) ಗಳಿಸಿದ್ದಾಗ ಕ್ಯಾಚ್ ನೀಡಿ ಔಟಾಗಿದ್ದೆ ತಡ ಬಾಂಗ್ಲಾದ ಕುಸಿತ ಆರಂಭವಾಯಿತು. ನಂತರ ಬಂದ ಇಮ್ರಾಲ್ 2 ರನ್, ಮುಷ್ಫಿಕರ್ ರಹೀಂ 5 ರನ್, ಮೊಹಮ್ಮದ್ ಮಿಥುನ್ 2 ರನ್, ಮೊಹಮ್ಮದುಲ್ಲ 4 ರನ್ ಗಳಿಸಿ ಔಟಾದರು.
ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ 107 ಎಸೆತದಲ್ಲಿ ಮೊದಲ ಶತಕ ಸಿಡಿಸಿದ ಲಿಟನ್ ದಾಸ್ ಅಂತಿಮವಾಗಿ 121 ರನ್(117 ಎಸೆತ, 12 ಬೌಂಡರಿ, 2 ಸಿಕ್ಸರ್) ಸಿಡಿಸಿ ಔಟಾದರು. ಕುಲ್ದೀಪ್ ಯಾದವ್ ಬೌಲಿಂಗ್ ನಲ್ಲಿ ಧೋನಿ ಸ್ಟಂಪ್ ಮಾಡಿ ಲಿಟನ್ ದಾಸ್ ಅವರನ್ನು ಔಟ್ ಮಾಡಿದರು.
ಮಧ್ಯಮ ಕ್ರಮಾಂಕದಲ್ಲಿ ಸೌಮ್ಯಾ ಸರ್ಕಾರ್ ಸ್ವಲ್ಪ ಪ್ರತಿರೋಧ ತೋರಿದ ಕಾರಣ ಬಾಂಗ್ಲಾ ಮೊತ್ತ 200ರ ಗಡಿ ದಾಟಿತು. ಸೌಮ್ಯಾ ಸರ್ಕಾರ್ 33 ರನ್(45 ಎಸೆತ, 1 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟಾದರು. ಕುಲ್ದೀಪ್ ಯಾದವ್ 3 ಪಡೆದು ಮಿಂಚಿದರೆ ಕೇದಾರ್ ಜಾದವ್ 2, ಜಸ್ ಪ್ರೀತ್ ಬುಮ್ರಾ ಮತ್ತು ಚಹಲ್ 1 ವಿಕೆಟ್ ಕಿತ್ತರು.
ಶತಕ ಹೊಡೆದ ಲಿಟನ್ ದಾಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿದರೆ, ಶಿಖರ್ ಧವನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.