ನವದೆಹಲಿ: ಇರಾನ್-ಇಸ್ರೇಲ್, ಅಮೆರಿಕ ನಡುವಣ ಯುದ್ಧದಿಂದ (Iran Israel War) ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ (Jai Shankar) ರಾಜ್ಯಸಭೆಯಲ್ಲಿ ಹೇಳಿದರು.
ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಕುರಿತು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದರು. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಎಲ್ಲರಿಗೂ ಆತಂಕದ ವಿಷಯವಾಗಿದೆ. ಸಮಸ್ಯೆಗಳನ್ನು ಬಗೆಹರಿಸಲು ಸಂವಾದ ಮತ್ತು ಚರ್ಚೆಯೇ ಸರಿಯಾದ ಮಾರ್ಗ. ಫೆಬ್ರವರಿ 20ರಂದು ಪತ್ರ ಬರೆದು ಸಹನಶೀಲತೆ ತೋರಿಸಿ ಉದ್ವಿಗ್ನತೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿತ್ತು. ಪ್ರಧಾನಿ ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: US-Israel-Iran War: ಕಚ್ಚಾತೈಲ ಬೆಲೆ ಏರಿಕೆ – ಬ್ಯಾರಲ್‌ಗೆ 100 ಡಾಲರ್ ಗಡಿ ದಾಟಿದ ಬೆಲೆ
ಭಾರತೀಯ ನಾಗರಿಕರ ಸುರಕ್ಷತೆ ಮತ್ತು ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆ. ಭಾರತ ಶಾಂತಿ ಮತ್ತು ಸ್ಥಿರತೆಯನ್ನು ಪುನಃಸ್ಥಾಪಿಸುವ ಪ್ರಯತ್ನಗಳನ್ನು ಬೆಂಬಲಿಸುತ್ತದೆ. ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕರೆ ನೀಡಿದರು.
ಇರಾನ್ ನೌಕೆಯ ಡಾಕಿಂಗ್ ಕುರಿತು ಮಾತನಾಡಿದ ಅವರು, ಆ ಪ್ರದೇಶದಲ್ಲಿದ್ದ ಮೂರು ಹಡಗುಗಳಿಗೆ ನಮ್ಮ ಬಂದರಿಗೆ ಬರಲು ಇರಾನ್ ಅನುಮತಿ ಕೇಳಲಾಗಿತ್ತು. ಈ ಅನುಮತಿಯನ್ನು ಮಾರ್ಚ್ 3ರಂದು ನೀಡಲಾಯಿತು. ಐರಿಸ್ ಲಾವನ್ ಮಾರ್ಚ್ 4ರಂದು ಕೊಚ್ಚಿ ಬಂದರಿಗೆ ತಲುಪಿತು. ಹಡಗಿನ ಸಿಬ್ಬಂದಿ ಈಗ ಭಾರತೀಯ ನೌಕಾಪಡೆಯ ಸೌಲಭ್ಯಗಳಲ್ಲಿ ಇದ್ದಾರೆ. ಇದು ಮಾನವೀಯ ದೃಷ್ಟಿಯಿಂದ ಸರಿಯಾದ ಕ್ರಮವಾಗಿದೆ. ಈ ಮಾನವೀಯ ಸಹಾಯಕ್ಕಾಗಿ ಇರಾನ್ ವಿದೇಶಾಂಗ ಸಚಿವರು ತಮ್ಮ ದೇಶದ ಪರವಾಗಿ ಧನ್ಯವಾದ ತಿಳಿಸಿದ್ದಾರೆ.
ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹೆಚ್ಚಾಗುತ್ತಿರುವ ಸೂಚನೆಗಳ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಇರಾನ್‍ನಲ್ಲಿದ್ದ ಭಾರತೀಯರಿಗೆ ಎಚ್ಚರಿಕೆ ನೀಡಿತ್ತು. ಜನವರಿಯಲ್ಲಿ ಇರಾನ್‍ಗೆ ಅಗತ್ಯವಲ್ಲದ ಪ್ರಯಾಣವನ್ನು ತಪ್ಪಿಸಲು ಸೂಚಿಸಲಾಗಿತ್ತು. ಭಾರತೀಯರು ತಮ್ಮ ವಿವರಗಳನ್ನು ಟೆಹ್ರಾನ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು ಹಾಗೂ ರಾಯಭಾರಿ ಕಚೇರಿಯ ವೆಬ್‍ಸೈಟ್ ಮತ್ತು ಸಾಮಾಜಿಕ ಜಾಲತಾಣಗಳನ್ನು ಗಮನಿಸಬೇಕು ಎಂದು ಸಲಹೆ ನೀಡಲಾಗಿತ್ತು. ಫೆಬ್ರವರಿ 14ರಂದು ರಾಯಭಾರಿ ಕಚೇರಿ ಮತ್ತೊಂದು ಸೂಚನೆ ನೀಡಿ, ಸಾಧ್ಯವಾದ ಎಲ್ಲ ಸಾರಿಗೆ ಮಾರ್ಗಗಳ ಮೂಲಕ ಇರಾನ್ ತೊರೆಯುವಂತೆ ಭಾರತೀಯರಿಗೆ ಮನವಿ ಮಾಡಿತ್ತು. ಫೆಬ್ರವರಿ 23ರಂದು ಮತ್ತೊಮ್ಮೆ ಇದೇ ಸಲಹೆಯನ್ನು ನೀಡಲಾಯಿತು ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ ಗಲ್ಫ್ ಪ್ರದೇಶದಲ್ಲಿರುವ ಭಾರತೀಯರೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಟೆಹ್ರಾನ್ ನ ಭಾರತೀಯ ರಾಯಭಾರಿ ಕಚೇರಿ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಘರ್ಷದ ನಡುವೆ ಸಿಲುಕಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದೆ. ಕೆಲ ವಿದ್ಯಾರ್ಥಿಗಳನ್ನು ಈಗಾಗಲೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಕತಾರ್ ಮತ್ತು ಜೋರ್ಡನ್ ಸೇರಿದಂತೆ ಕೆಲವು ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಮರಳಿ ತರಲು ಕೂಡ ಕ್ರಮಗಳು ನಡೆಯುತ್ತಿವೆ ಎಂದು ಅವರು ಹೇಳಿದರು. ಇದನ್ನೂ ಓದಿ: ಮಧ್ಯಪ್ರಾಚ್ಯ ಸಂಘರ್ಷ; ಡಾಲರ್ ಎದುರು ದಾಖಲೆಯ 92.52 ಕ್ಕೆ ಕುಸಿದ ರೂಪಾಯಿ ಮೌಲ್ಯ

