ಯುಕೆ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ – ಭಾರತಕ್ಕೆ ಏನು ಲಾಭ?

Public TV
2 Min Read
Keir Starmer Narendra Modi

ಲಂಡನ್‌: ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ (Free Trade Agreement) ಭಾರತ ಮತ್ತು ಯುನೈಟೆಟ್‌ ಕಿಂಗ್‌ಡಮ್‌ (UK) ಸಹಿ ಹಾಕಿದೆ. ಈ ಒಪ್ಪಂದದಿಂದ ಎರಡು ದೇಶಗಳ ಮಧ್ಯೆ ವಾರ್ಷಿಕವಾಗಿ ಸುಮಾರು 34 ಶತಕೋಟಿ ಡಾಲರ್‌ ದ್ವಿಪಕ್ಷೀಯ ವ್ಯಾಪಾರ ಹೆಚ್ಚಾಗಲಿದೆ.

ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ (Keir Starmer) ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ (India) ಮಾರುಕಟ್ಟೆ ಪ್ರವೇಶಿಸಲು ಅಮೆರಿಕ (USA) ಸುಂಕದ ಬೆದರಿಕೆ ಹಾಕುತ್ತಿರುವ ಸಮಯದಲ್ಲೇ ಯುಕೆ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿರುವುದು ಮಹತ್ವ ಪಡೆದಿದೆ.

ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಜವಳಿ, ಜೆನೆರಿಕ್ ಔಷಧಗಳು ಮತ್ತು ವೈದ್ಯಕೀಯ ಸಾಧನಗಳು, ಚರ್ಮದ ಸರಕುಗಳು ಮತ್ತು ಕೃಷಿ ಮತ್ತು ರಾಸಾಯನಿಕ ಉತ್ಪನ್ನಗಳು ಸೇರಿದಂತೆ ಯುಕೆಗೆ ಹೋಗುವ ಭಾರತದ 99% ವಸ್ತುಗಳ ಮೇಲಿನ ಸುಂಕವನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ ಎಂದು ವರದಿಯಾಗಿದೆ. ಇದನ್ನೂ ಓದಿ: ತಾಂತ್ರಿಕ ದೋಷದಿಂದ ರಷ್ಯಾ ವಿಮಾನ ಪತನ 48 ಮಂದಿ ಸಾವು


ಒಪ್ಪಂದದ ಭಾಗವಾಗಿ, ಭಾರತವು ತನ್ನ ಸುಂಕದ 90% ರಷ್ಟು ಕಡಿತಗೊಳಿಸಲಿದೆ ಮತ್ತು ಯುಕೆ ಉತ್ಪನ್ನಗಳ ಮೇಲಿನ ಸರಾಸರಿ ಸುಂಕವು 15% ರಿಂದ 3% ಕ್ಕೆ ಇಳಿಯಲಿದೆ. ಬ್ರಿಟನ್‌ ಸ್ಕಾಚ್ ವಿಸ್ಕಿ, ಕಾರು ಮತ್ತು ಕೆಲ ಆಹಾರ ಪದಾರ್ಥಗಳ ಮೇಲಿನ ಆಮದು ಸುಂಕವನ್ನು ಭಾರತ ಕಡಿತಗೊಳಿಸಲಿದೆ. ವಿಸ್ಕಿಯ ಮೇಲಿನ ಸುಂಕವನ್ನುಅರ್ಧದಷ್ಟು ಅಂದರೆ 75% ಕ್ಕೆ ಇಳಿಕೆಯಾಗಲಿದೆ. ಎಲೆಕ್ಟ್ರಿಕ್ ವಾಹನಗಳ ಮೇಲೂ ಪರಿಣಾಮ ಬೀರಲಿದ್ದು 110% ರಿಂದ 10% ಕ್ಕೆ ಸುಂಕ ಇಳಿಯಲಿದೆ.

ಮುಂದಿನ ಎರಡು ವರ್ಷಗಳಲ್ಲಿ ಭಾರತದ ಚರ್ಮ ವಲಯವು ಯುಕೆಯಲ್ಲಿ 5% ಹೆಚ್ಚುವರಿ ಮಾರುಕಟ್ಟೆ ಪಾಲನ್ನು ಪಡೆಯುವ ನಿರೀಕ್ಷೆಯಿದೆ. ಅದೇ ರೀತಿ 2030 ರ ವೇಳೆಗೆ ಎಲೆಕ್ಟ್ರಾನಿಕ್ಸ್ ಮತ್ತು ಎಂಜಿನಿಯರಿಂಗ್ ರಫ್ತುಗಳು ದ್ವಿಗುಣಗೊಳ್ಳುವ ಸಾಧ್ಯತೆಯಿದೆ.

 

ಮುಂದಿನ ಹಣಕಾಸು ವರ್ಷದಲ್ಲಿ ರಾಸಾಯನಿಕಗಳ ರಫ್ತು 30%-40% ರಷ್ಟು ಹೆಚ್ಚಾಗಬಹುದು. ರತ್ನಗಳು ಮತ್ತು ಆಭರಣ ರಫ್ತಿನ ಮೌಲ್ಯ ಪ್ರಸ್ತುತ 941 ಮಿಲಿಯನ್‌ ಡಾಲರ್‌ ಇದ್ದು ಮುಂದಿನ ಮೂರು ವರ್ಷಗಳಲ್ಲಿ ಇದು ದ್ವಿಗುಣಗೊಳ್ಳುವ ನಿರೀಕ್ಷೆಯಿದೆ.

ವ್ಯಾಪಾರ ಒಪ್ಪಂದ ಜಾರಿಗೆ ಬಂದ ನಂತರ ಸಾಫ್ಟ್‌ವೇರ್ ಸೇವೆಗಳ ರಫ್ತು ವಾರ್ಷಿಕವಾಗಿ ಸುಮಾರು 20% ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಈ ಒಪ್ಪಂದವು ಗ್ರಾಹಕರಿಗೆ ಬೆಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಬ್ರಿಟಿಷ್ ಅಧಿಕಾರಿಗಳು ಹೇಳಿದ್ದಾರೆ.

Share This Article