ನವದೆಹಲಿ: ನಿರ್ಬಂಧದ ಬಳಿಕವೂ ಭಾರತ ಸೇರಿದಂತೆ ಒಟ್ಟು 8 ರಾಷ್ಟ್ರಗಳು ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳಲು ಅಮೆರಿಕ ಒಪ್ಪಿಗೆ ನೀಡಿದೆ.
ಇರಾನ್ ಮೇಲೆ ನಿರ್ಬಂಧ ಜಾರಿಯಾದ ಬಳಿಕವೂ ಭಾರತ ಸೇರಿದಂತೆ ಜಪಾನ್, ಚೀನಾ ಹಾಗೂ ದಕ್ಷಿಣ ಕೊರಿಯಾ ಒಳಗೊಂಡ 8 ರಾಷ್ಟ್ರಗಳಿಗೆ ಇರಾನ್ ನೊಂದಿಗೆ ತೈಲ ಖರೀದಿಗೆ ಅನುವು ಮಾಡಿಕೊಡಲಾಗಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ನವೆಂಬರ್ 4ರಿಂದ ಅಮೆರಿಕ ವಿಧಿಸಿರುವ ನಿರ್ಬಂಧಗಳು ಜಾರಿಗೆ ಬರಲಿದ್ದು, ನಿರ್ಬಂಧದ ನಂತರವೂ ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಭಾರತ ಸೇರಿದಂತೆ ಎಂಟು ರಾಷ್ಟ್ರಗಳು ಅಮೆರಿಕಕ್ಕೆ ಒತ್ತಾಯಿಸಿತ್ತು.
Advertisement
Advertisement
ಅಮೆರಿಕ ನಿರ್ಬಂಧ ಏಕೆ?
2015ರಲ್ಲಿ ಇರಾನ್ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಿದ್ದ ಅಮೆರಿಕ, ಈಗ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿ ಈ ವರ್ಷದ ಆರಂಭದಲ್ಲಿ ಮತ್ತೆ ನಿರ್ಬಂಧ ವಿಧಿಸಿತ್ತು. ನಿರ್ಬಂಧದ ಮೊದಲ ಹಂತ ಈಗಾಗಲೇ ಜಾರಿಯಲ್ಲಿದ್ದು, ಅದು ನವೆಂಬರ್ 4ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲಿದೆ. ಇರಾನ್‍ನಿಂದ ತೈಲ ಆಮದನ್ನು ಅಮೆರಿಕ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಅಲ್ಲದೇ ತನ್ನ ಮಿತ್ರ ರಾಷ್ಟ್ರಗಳು ಸಹ ಇರಾನ್ ನೊಂದಿಗೆ ಖರೀದಿಯನ್ನು ಸ್ಥಗಿತಗೊಳಿಸಲಿವೆ ಎನ್ನುವ ನಿರೀಕ್ಷೆಹೊಂದಿದ್ದೇವೆ. ಇರಾನ್ ಜೊತೆ ಯಾವುದೇ ರೀತಿಯ ವ್ಯವಹಾರವನ್ನು ಮುಂದುವರಿಸುವ ಯಾವುದೇ ದೇಶದೊಂದಿಗೆ ಅಮೆರಿಕಾದ ಬ್ಯಾಂಕಿಂಗ್ ಹಾಗೂ ಹಣಕಾಸು ವ್ಯವಸ್ಥೆಯೊಳಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗುತ್ತದೆ ಎಂದು ಹೇಳಿತ್ತು.
Advertisement
ಇರಾನ್ ಜೊತೆ ತೈಲ ಖರೀದಿಯಲ್ಲಿ ಭಾರತ ಎರಡನೇ ಸ್ಥಾನವನ್ನು ಪಡೆದುಕೊಂಡರೆ, ಮೊದಲನೇ ಸ್ಥಾನದಲ್ಲಿ ಚೀನಾ ಇದೆ. ಅಮೆರಿಕದ ಇರಾನ್ ನಿರ್ಬಂಧ ವಿಶ್ವದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಅಷ್ಟು ಪ್ರಮಾಣದ ತೈಲವನ್ನು ಇರಾನ್ ಹೊರತು ಪಡಿಸಿ, ಎಲ್ಲಿಂದ ಸಂಗ್ರಹಿಸುವುದು ಎನ್ನುವುದರ ಬಗ್ಗೆ ವಿವಿಧ ದೇಶಗಳು ಆತಂಕವನ್ನು ವ್ಯಕ್ತಪಡಿಸಿದ್ದವು.
ಈಗ ತೈಲ ದರ ಕಡಿಮೆಯಾಗುತ್ತಿದ್ದರೂ, ಕೆಲ ದಿನಗಳ ಹಿಂದೆ ಭಾರೀ ಏರಿಕೆಯಾಗಿತ್ತು. ತೈಲ ಖರೀದಿಗೆ ನಿರ್ಬಂಧ ಹೇರಿದ ಸುದ್ದಿಯಿಂದಾಗಿ ಷೇರು ಮಾರುಕಟ್ಟೆಗೂ ಭಾರೀ ಹೊಡೆತ ಬಿದ್ದಿತ್ತು. ಅಷ್ಟೇ ಅಲ್ಲದೇ ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿಯುತಿತ್ತು. ಈಗ ಈ ನಿರ್ಬಂಧದಿಂದ ಭಾರತವನ್ನು ಹೊರಗೆ ಇಟ್ಟ ಹಿನ್ನೆಲೆಯಲ್ಲಿ ತೈಲ ದರ ಏರಿಕೆಯ ಭೀತಿಯಿಂದ ಭಾರತೀಯರು ಪಾರಾಗಿದ್ದಾರೆ.
ಎಲ್ಲ ದೇಶಗಳನ್ನು ತನ್ನ ಹಿಡಿತದಲ್ಲಿಡಲು ಅಮೆರಿಕ ಮುಂದಾಗುತ್ತಿದ್ದು, ಈ ಹಿಂದೆ ಭಾರತ ರಷ್ಯಾ ಜೊತೆಗಿನ ಎಸ್-400 ಟ್ರಯಂಫ್ ಖರೀದಿ ಸಮಯದಲ್ಲೂ ಹಸ್ತಕ್ಷೇಪ ನಡೆಸಿತ್ತು. ರಷ್ಯಾ, ಇರಾನ್ ಆರ್ಥಿಕ ವ್ಯವಹಾರ ನಡೆಸುವ ಕುರಿತು ದಿಗ್ಬಂಧನ ವಿಧಿಸಿರುವ ಅಮೆರಿಕ ವಿಶ್ವದ ಇತರೆ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿತ್ತು. ಒಂದೊಮ್ಮೆ ಇದನ್ನು ಮೀರಿ ಇತರ ದೇಶಗಳು ಈ ರಾಷ್ಟ್ರಗಳೊಂದಿಗೆ ಹೆಚ್ಚಿನ ಆರ್ಥಿಕ ಒಪ್ಪಂದ ಮಾಡಿಕೊಂಡರೆ ಆ ದೇಶಗಳ ಮೇಲೂ ದಿಗ್ಬಂಧನ ವಿಧಿಸುವ ಅವಕಾಶವನ್ನು `ಕಾಟ್ಸಾ’ ಒಪ್ಪಂದ ಮೂಲಕ ಅಮೆರಿಕ ಹೊಂದಿದೆ. ಭಾರತ ಅಮೆರಿಕದಿಂದ ಸಾಕಷ್ಟು ಪ್ರಮಾಣದಲ್ಲಿ ರಕ್ಷಣಾ ಸಾಮಾಗ್ರಿಗಳನ್ನು ಖರೀದಿಸುತ್ತಿರುವ ಕಾರಣ ಭಾರತದ ಮೇಲೆ ನಿರ್ಬಂಧ ಹೇರಲಿಕ್ಕಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಏನಿದು ಕಾಟ್ಸಾ?
ರಕ್ಷಣಾ ಹಾಗೂ ಆರ್ಥಿಕ ಒಪ್ಪಂದಗಳನ್ನು ಭದ್ರಪಡಿಸಲು ಅಮೆರಿಕ ಕಾಟ್ಸಾ(ಕೌಂಟರಿಂಗ್ ಅಮೆರಿಕಾಸ್ ಅಡ್ವರ್ಸರೀಸ್ ಥ್ರೂ ಸ್ಯಾಂಕ್ಷನ್ಸ್ ಆಕ್ಟ್) ಕಾಯ್ದೆಯನ್ನು ತಂದಿದೆ. ವಿಶ್ವದ ದೊಡ್ಡಣ್ಣನಾಗಿರುವ ಅಮೆರಿಕ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಜೊತೆ ಉತ್ತಮ ಬಾಂಧವ್ಯಕ್ಕಾಗಿ ದ್ವಿಪಕ್ಷೀಯ ಮಾತುಕತೆ ನಡೆಸುತ್ತದೆ. ದ್ವಿಪಕ್ಷೀಯ ಸಂಬಂಧ ಹೊಂದಿರುವ ದೇಶಗಳು ಅಮೆರಿಕ ನಿರ್ಬಂಧ ಹೇರಿದ ದೇಶಗಳೊಂದಿಗೆ ರಕ್ಷಣಾ ವ್ಯವಹಾರ ನಡೆಸಿದರೆ ಆ ದೇಶಗಳ ಮೇಲೆ ನಿರ್ಬಂಧ ಹೇರುವ ಅಧಿಕಾರ ಈ ಕಾಯ್ದೆಯಲ್ಲಿದೆ.
ವಿಶ್ವಸಂಸ್ಥೆಯ ಕಾಯ್ದೆಯಲ್ಲ:
ರಷ್ಯಾದಿಂದ ಟ್ರಯಂಫ್ ಖರೀದಿಗೆ ಅಮೆರಿಕದಿಂದ ವಿರೋಧ ವ್ಯಕ್ತವಾಗುತ್ತಿದ್ದ ಬೆನ್ನಲ್ಲೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿ, ಕಾಟ್ಸಾ ಕಾಯ್ದೆ ಅಮೆರಿಕದ್ದು ಹೊರತು ವಿಶ್ವಸಂಸ್ಥೆಯದ್ದಲ್ಲ. ಇದು ಭಾರತ ಮತ್ತು ರಷ್ಯಾದ ಆಂತರಿಕ ವಿಚಾರ ಎಂದು ಹೇಳಿ ತಿರುಗೇಟು ನೀಡಿದ್ದರು.
ಇದನ್ನೂ ಓದಿ: ಏನಿದು ಎಸ್-400 ಟ್ರಯಂಫ್? ಹೇಗೆ ಕೆಲಸ ಮಾಡುತ್ತೆ? ಅಮೆರಿಕ, ಚೀನಾ, ಪಾಕಿಸ್ತಾನಕ್ಕೆ ಆತಂಕ ಯಾಕೆ?
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv