ಡಾಕಾ: ಬಾಂಗ್ಲಾದೇಶದ (Bangladesh)) ಸಾರ್ವತ್ರಿಕ ಚುನಾವಣೆಯಲ್ಲಿ (General Election) ಇಂದು ಮತದಾನ ನಡೆಯುತ್ತಿದ್ದು, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರು ಅಧಿಕಾರವನ್ನು ಉಳಿಸಿಕೊಳ್ಳಲು ಸಜ್ಜಾಗಿದ್ದಾರೆ. ಈ ನಡುವೆ ಹಸೀನಾ ಅವರು ಭಾರತವನ್ನು ಶ್ಲಾಘಿಸಿದರು.
ಚುನಾವಣಾ ದಿನದಂದು ಭಾರತಕ್ಕೆ ನೀಡಿದ ಸಂದೇಶದ ಬಗ್ಗೆ ಮಾಧ್ಯಮದವರು ಕೇಳಿದಾಗ, ನಾವು ತುಂಬಾ ಅದೃಷ್ಟವಂತರು. ಭಾರತ ನಮ್ಮ ವಿಶ್ವಾಸಾರ್ಹ ಸ್ನೇಹಿತ. ನಮ್ಮ ವಿಮೋಚನಾ ಯುದ್ಧದ (Liberation War in 1971) ಸಮಯದಲ್ಲಿ ಅವರು ನಮ್ಮ ಬೆಂಬಲಕ್ಕೆ ನಿಂತರು. 1975ರ ನಂತರ ನಾವು ನಮ್ಮ ಇಡೀ ಕುಟುಂಬವನ್ನು ಕಳೆದುಕೊಂಡಾಗ ಅವರು ನಮಗೆ ಆಶ್ರಯ ನೀಡಿದರು. ಭಾರತದ ಜನತೆಗೆ ನಮ್ಮ ಶುಭಹಾರೈಕೆಗಳು ಎಂದರು.
ಭಾರತ ಮತ್ತು ಬಾಂಗ್ಲಾದೇಶದ ಸಂಬಂಧ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಲಗೊಂಡಿದೆ. ಹಸೀನಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಆಗಾಗ್ಗೆ ವೈಯಕ್ತಿಕ ಸಂವಾದಗಳು ಮತ್ತು ಸಂಪರ್ಕ ಯೋಜನೆಗಳು, ವ್ಯಾಪಾರ ಉದಾರೀಕರಣ ಮತ್ತು ಗಡಿ ನಿರ್ವಹಣೆ ಸೇರಿದಂತೆ ಪ್ರಮುಖ ದ್ವಿಪಕ್ಷೀಯ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿರುತ್ತಾರೆ.
ಸದ್ಯ ಆಡಳಿತಾರೂಢ ಅವಾಮಿ ಲೀಗ್‌ನ ನಾಯಕಿ ಹಸೀನಾ ಅವರು ಪ್ರಧಾನ ಮಂತ್ರಿಯಾಗಿ ನಾಲ್ಕನೇ ಬಾರಿಗೆ ಗೆಲ್ಲಲು ಸಿದ್ಧರಾಗಿದ್ದಾರೆ. ದೇಶದ ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ಚುನಾವಣೆಯನ್ನು ಬಹಿಷ್ಕರಿಸುತ್ತಿದೆ. ಇದನ್ನೂ ಓದಿ: ಜೀವನದಲ್ಲಿ ಭರವಸೆಯಿಲ್ಲ, ಜೈಲಿನಲ್ಲೇ ಸಾಯೋದು ಉತ್ತಮ: ಜೆಟ್ ಏರ್‌ವೇಸ್ ಸಂಸ್ಥಾಪಕ ಗೋಯಲ್
ಬಾಂಗ್ಲಾದೇಶ ಸಂಸತ್‌ಗೆ ಭಾನುವಾರ ಮತದಾನ ನಡೆಯುತ್ತಿದ್ದು, ಚುನಾವಣಾ ಆಯೋಗ ಹಾಗೂ ಭದ್ರತಾ ಪಡೆಗಳು ಭಾರೀ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿವೆ. ಈ ನಡುವೆ ಮತದಾನದ ಹೊತ್ತಲ್ಲಿ ಅಲ್ಲಲ್ಲಿ ಗಲಭೆಗಳು ನಡೆದಿರುವ ಮಾಹಿತಿ ಕೇಳಿ ಬಂದಿದೆ.
ಪ್ರಮುಖ ವಿರೋಧ ಪಕ್ಷವಾದ ಬಿಎನ್ಪಿ ಇಲ್ಲದ ಕಾರಣ ಶೇಖ್ ಹಸೀನಾ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆ ಇದೆ. 2009ರಿಂದ ಬಾಂಗ್ಲಾದೇಶದಲ್ಲಿ ಹಸೀನಾ ಪ್ರಧಾನಿಯಾಗಿ ಅಧಿಕಾರ ನಿರ್ವಹಿಸುತ್ತಿದ್ದಾರೆ. ಅವರು ಇದೀಗ ಸತತ ನಾಲ್ಕನೇ ಬಾರಿಗೆ ಪ್ರಧಾನಿಯಾಗುವುದು ಖಚಿತ ಎನ್ನಲಾಗಿದೆ.