ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ನಾಗೇಶ್ ಅವರು ಮತ್ತೆ ಬೆಂಬಲ ನೀಡಿದ್ದಾರೆ.
ಮೈತ್ರಿ ಸರ್ಕಾರ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಶಾಸಕ ನಾಗೇಶ್ ಅವರು ಕೆಲಹೊತ್ತು ಮಾತುಕತೆ ನಡೆಸಿ, ಬೆಂಬಲ ಪತ್ರವನ್ನು ನೀಡಿದ್ದಾರೆ. ಈ ವೇಳೆ ಜಲಸಂಪನ್ಮೂಲ ಹಾಗೂ ಬೃಹತ್ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಕೂಡ ಇದ್ದರು.
Advertisement
Advertisement
ಶಾಸಕ ನಾಗೇಶ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಗೂ ಮುನ್ನ ಸಿಎಂ ಕುಮಾರಸ್ವಾಮಿ ಅವರೊಂದಿಗೆ ವಿಧಾನಸಭೆಯಲ್ಲಿ ಮಾತುಕತೆ ನಡೆಸಿದ್ದರು. ಈ ನಿಟ್ಟಿನಲ್ಲಿ ಕಲಾಪ ಮುಗಿದ ಬಳಿಕ ತಮ್ಮ ಬೆಂಬಲ ಪತ್ರವನ್ನು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
Advertisement
ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿದರೆ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗುತ್ತದೆ ಎನ್ನುವ ಉದ್ದೇಶದಿಂದ ನಾಗೇಶ್ ಮತ್ತೆ ಬೆಂಬಲ ನೀಡಿದ್ದಾರೆ. ಆದರೆ ಅವರಿಗೆ ಸಚಿವ ಸ್ಥಾನ ನೀಡುವ ಕುರಿತು ಯಾವುದೇ ಚರ್ಚೆಯಾಗಿಲ್ಲ. ಸಚಿವ ಡಿ.ಕೆ.ಶಿವಕುಮಾರ್ ಅವರ ಜೊತೆಗೆ ಉತ್ತಮ ಸಂಬಂಧ ಇರುವುದರಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
Advertisement
ಶಾಸಕ ನಾಗೇಶ್ ಹಾಗೂ ರಾಣೇಬೆನ್ನೂರು ಶಾಸಕ ಆರ್.ಶಂಕರ್ ಅವರು ಕಳೆದ ತಿಂಗಳು ಮುಂಬೈನ ರೆಸಾರ್ಟಿನಲ್ಲಿ ಉಳಿದುಕೊಂಡಿದ್ದರು. ಈ ವೇಳೆ ನಾನು ನಮ್ಮ ನಿರ್ಧಾರವನ್ನು ಬದಲಾಯಿಸಿದ್ದು, ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆಯುತ್ತೇವೆ ಎಂದು ಮಾಧ್ಯಮಗಳ ಮುಂದೆ ಹೇಳಿದ್ದರು. ಅಷ್ಟೇ ಅಲ್ಲದೆ ರಾಜ್ಯಪಾಲ ವಜುಬಾಯ್ ವಾಲಾ ಅವರಿಗೆ ಬಿಜೆಪಿ ಬೆಂಬಲ ನೀಡುವುದಾಗಿ ಪತ್ರ ನೀಡಿದ್ದರು. ಇದರಿಂದಾಗಿ 104 ಸ್ಥಾನದಿಂದ 106 ಶಾಸಕರ ಬೆಂಬಲ ಬಿಜೆಪಿಗೆ ಸಿಕ್ಕಿತ್ತು.
ಈ ಹಿಂದೆ ಬೆಂಬಲ ಹಿಂಪಡೆಯಲು ಕಾರಣ ತಿಳಿಸಿದ್ದ ಶಾಸಕ ನಾಗೇಶ್ ಅವರು, ರಾಜ್ಯ ಹಾಗೂ ನಮ್ಮ ಕ್ಷೇತ್ರದ ಅಭಿವೃದ್ಧಿಯಾಗುತ್ತಿಲ್ಲ. ನಾನು ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆಯುತ್ತೇನೆ ಎಂದು ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv