ಬೆಂಗಳೂರು: ಚುನಾವಣಾ ಪ್ರಚಾರಕ್ಕೆ ಹೋದಾಗ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನಡುವೆ ಗಲಾಟೆ ನಡೆದು ಓರ್ವ ಕಾರ್ಯಕರ್ತನಿಗೆ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನ ಹೊರವಲಯದ ಮಹದೇವಪುರದಲ್ಲಿ ನಡೆದಿದೆ.
ಶನಿವಾರ ರಾತ್ರಿ ಪೊಲೀಸರ ಸಮ್ಮುಖದಲ್ಲಿ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನಡುವೆ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದ್ದು, ಸ್ಥಳೀಯರ ಗುಂಪಿನಿಂದ ಪಕ್ಷೇತರ ಅಭ್ಯರ್ಥಿ ನಲ್ಲೂರಹಳ್ಳಿ ನಾಗೇಶ್ ಬೆಂಬಲಿಗರ ಮೇಲೆ ಹಲ್ಲೆ ಮಾಡಿದ್ದಾರೆ.
ತಮ್ಮ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಮಹದೇವಪುರ ಪಕ್ಷೇತರ ಅಭ್ಯರ್ಥಿ ನಲ್ಲೂರಹಳ್ಳಿ ನಾಗೇಶ್ ಶನಿವಾರ ರಾತ್ರಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ರಾತ್ರಿ 10.30ರ ಸುಮಾರಿಗೆ ಮಹದೇವಪುರದ ಭೈರತಿ ಬಳಿ ಪ್ರಚಾರದ ವೇಳೆ ಗಲಾಟೆ ನಡೆದಿದ್ದು, ತಮ್ಮ ಬೆಂಬಲಿಗ ಮಾರುತೇಶ್‍ಗೆ ಕಾಂಗ್ರೆಸ್ ಕಾರ್ಯಕರ್ತರು ಚೂರಿ ಇರಿದಿದ್ದಾರೆ ಅಂತ ನಾಗೇಶ್ ಆರೋಪಿಸಿದ್ದಾರೆ.
ನನ್ನ ಏಳಿಗೆ ಸಹಿಸದ ಈ ರೀತಿ ಮಾಡಿದ್ದು, ಕೂಡಲೇ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಪೊಲೀಸರಿಗೆ ದೂರು ನೀಡಿ ಪ್ರತಿಭಟನೆ ನಡೆಸಿದ್ದಾರೆ. ಗಾಯಾಳುಗಳನ್ನ ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಕೊತ್ತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.