ದೇಶದ ಅಭಿವೃದ್ಧಿಗೆ ಕುಟುಂಬ ರಾಜಕಾರಣದಿಂದ ಲಾಭ ಇಲ್ಲ: ಮೋದಿ

Public TV
4 Min Read
narendra modi 1

– ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಹೇಳಿದ್ದೇನು..?
– ಭಾಷೆಯ ಕಾರಣದಿಂದ ಎಷ್ಟೋ ಪ್ರತಿಭೆಗಳು ಹಿಂದೆ ಉಳಿದಿವೆ

ನವದೆಹಲಿ: ರಾಜಕೀಯದಲ್ಲಿ ಕುಟುಂಬ ರಾಜಕೀಯ ಸರಿಯಲ್ಲ. ಇದರಿಂದ ಕುಟುಂಬದ ಅಭಿವೃದ್ಧಿಯಾಗುತ್ತದೆ. ದೇಶದ ಅಭಿವೃದ್ಧಿಗೆ ಕುಟುಂಬ ರಾಜಕಾರಣದಿಂದ ಲಾಭ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

narendra modi 3

ಕೆಂಪುಕೋಟೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ಹರ್ ಘರ್ ತಿರಂಗ ಅಭಿಯಾನಕ್ಕೆ ಬೆಂಬಲ ಸಿಕ್ಕಿದೆ. ಜನತಾ ಕರ್ಫ್ಯೂ ನಲ್ಲಿ ಮನೆಯಲ್ಲಿ ಕೂರುತ್ತಾರೆ, ದೀಪ ಹಚ್ಚಿ ಬೆಂಬಲ ಕೊಡುತ್ತಾರೆ, ಚಪ್ಪಾಳೆ ತಟ್ಟಿ ಕೊರೊನಾ ವಾರಿಯರ್ಸ್ ಗೆ ಬೆಂಬಲ ನೀಡಿದ್ದಾರೆ. ಸಮಯ ಬಂದಾಗ ಹೊರಗಡೆ ಬಂದು ತಿರಂಗ ಹಿಡಿದು ದೇಶದ ತಾಕತ್ತು ತೋರಿಸಿದ್ದಾರೆ ಎಂದು ಕೊಂಡಾಡಿದರು.

narendra modi 4

ವಿಶ್ವ ಭಾರತವನ್ನು ಭಿನ್ನವಾಗಿ ನೋಡುತ್ತಿದೆ. 75 ವರ್ಷದ ಪ್ರಯಾಣದ ಫಲವಾಗಿ ಇಂದು ಭಿನ್ನವಾಗಿ ನೋಡುತ್ತೇವೆ. ಭಾರತದ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಅವುಗಳನ್ನು ಪೂರ್ತಿ ಮಾಡಲು ಕೆಲಸ ಮಾಡಬೇಕು. ಭಾರತ ಈಗ ಅಮೃತ್ ಕಾಲಕ್ಕೆ ಪ್ರವೇಶ ಮಾಡುತ್ತಿದೆ. ಮುಂದಿನ 25 ವರ್ಷ ಮಹತ್ವದ್ದಾಗಿದೆ. 130 ಕೋಟಿ ಜನರ ಕನಸನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದರು.

ದೇಶದ ಅಭಿವೃದ್ದಿಗೆ ಸಂಕಲ್ಪ, ಗುಲಾಮಿತನ ಸಂಪೂರ್ಣ ತೊಡೆದು ಹಾಕುವುದು, ನಮ್ಮ ಬಗ್ಗೆ ಹೆಮ್ಮೆ ನಾವು ಪಡುವಂತಾಗಬೇಕು, ಏಕತಾ ಒಂದುಗೂಡುವಿಕೆ ಹಾಗೂ ನಾಗರೀಕರ ಕರ್ತವ್ಯ ಈ ಐದು ವಿಚಾರಗಳಲ್ಲಿ ನಮ್ಮ ಸಂಕಲ್ಪ ಕೇಂದ್ರಿಕರಿಸಬೇಕಿದೆ. ಸ್ವಾತಂತ್ರ್ಯ ಭಾರತದ 100 ವರ್ಷಕ್ಕೆ ಈ ಎಲ್ಲ ಕನಸು ಈಡೇರಬೇಕು ಎಂದರು. ಇದನ್ನೂ ಓದಿ: ದೇಶ ವಿಭಜನೆ ಒಪ್ಪಿಕೊಳ್ಳದಿದ್ರೆ ಭಾರತ ಛಿದ್ರವಾಗ್ತಿತ್ತು- ಪಟೇಲ್ ಹೇಳಿಕೆ ಪುನರುಚ್ಚರಿಸಿದ ಸೋನಿಯಾ

NARENDRA MODI

ಯಾವಾಗ ಕನಸು ದೊಡ್ಡದಾಗುತ್ತೊ, ಸಂಕಲ್ಪ ದೊಡ್ಡದಾಗುತ್ತೊ ಅದರ ಫಲವೂ ದೊಡ್ಡದಾಗಿರುತ್ತೆ. ಎಲ್ಲರ ಕನಸು ಸ್ವತಂತ್ರ ಪಡೆಯುವ ದೊಡ್ಡ ಸಂಕಲ್ಪ ಮಾಡಲಾಗಿತ್ತು. ಈಗಲೂ ಅಂತಹದೇ ದೊಡ್ಡ ಸಂಕಲ್ಪ ಮಾಡಬೇಕು. ದೇಶದ ಜನರು ಹೊಸ ಸಂಕಲ್ಪದೊಂದಿಗೆ ಹೊರಡಬೇಕು. ಭಾರತ ಪ್ರಗತಿಪರ ದೇಶವಾಗಬೇಕಿದೆ. ಈ ದೇಶಕ್ಕೆ ಎಲ್ಲವೂ ಸಾಧ್ಯವಿದೆ. ಈ ಹಿಂದೆ ಸ್ವಚ್ಛ ಭಾರತ ಘೋಷಣೆ ಮಾಡಿದೆ. ಜನರು ಮಾಡಿ ತೋರಿಸಿದರೂ ವ್ಯಾಕ್ಸಿನ್ ವಿಚಾರದಲ್ಲಿ ಎಲ್ಲ ರಾಕಾರ್ಡ್ ಗಳನ್ನು ಹೊಡೆದು ಹಾಕಲಾಯ್ತು. ಮನೆ ಮನೆಗೆ ವಿದ್ಯುತ್, ನೀರು ಕೊಡುವುದು ಸಣ್ಣ ಕೆಲಸವಾಗಿರಲಿಲ್ಲ. ಇದನ್ನೆಲ್ಲ ಮಾಡಿ ತೋರಿಸಿದೆ. ಈಗಲೂ ನಾವು ಹೊಸ ಸಂಕಲ್ಪದೊಂದಿಗೆ ಹೊರಡಬೇಕು. ಮುಂದಿನ 25 ವರ್ಷ ಅದೇ ನಮ್ಮ ಮೂಲ ಉದ್ದೇಶ ಆಗಬೇಕು ಎಂದು ಹೇಳಿದರು.

ಎಷ್ಟೋ ಪ್ರತಿಭೆಗಳು ಭಾಷೆಯ ಕಾರಣದಿಂದ ಹಿಂದೆ ಉಳಿದಿವೆ. ಇಂತಹ ಮಾನಸಿಕತೆ ಹೋಗಬೇಕು. ಪ್ರತಿ ಭಾಷೆಯ ಬಗ್ಗೆ ಗರ್ವ ಪಡಬೇಕಿದೆ. ಗುಲಾಮಿತನ ಮಾನಸಿಕತೆ ಸಂಪೂರ್ಣ ಹೋಗಲಾಡಿಸಬೇಕು. ನಾವು ನಮ್ಮ ಭೂಮಿಯೊಂದಿಗೆ ನಿಂತರೇ ಎತ್ತರಕ್ಕೆ ಹಾರುತ್ತೇವೆ. ಆಗಲೇ ವಿಶ್ವಕ್ಕೆ ನಾವು ಉತ್ತರ ನೀಡಬಹುದು. ನಾವು ನದಿಯನ್ನು ತಾಯಿ ಅಂತಾ ಭಾವಿಸಿದವರು. ನಾವು ಮರದಲ್ಲಿ ದೇವರನ್ನು ಕಂಡವರು. ಭಾರತ ಪ್ರಕೃತಿಯನ್ನು ಪ್ರೀತಿಸುತ್ತದೆ. ನಾವು ವಿಶ್ವಕ್ಕೆ ‘ವಸುದೇವ ಕುಟುಂಬಕ್ಕಂ’ ಕಲಿಸಿಕೊಟ್ಟವರು. ಭಾರತದ ಕಡೆಯಿಂದ ಎಲ್ಲವೂ ಸಾಧ್ಯ ಎಂದು ಪ್ರಧಾನಿ ಬಣ್ಣಿಸಿದರು.

narendra modi 5

ಮಗ-ಮಗಳು ಒಂದೇ ಎಂದು ಭಾವಿಸಬೇಕು. ಒಂದೇ ಅಲ್ಲ ಅಂತಾ ಭಾವಿಸದಿದ್ದರೆ ಏಕತೆ ಹೇಗೆ ಸಾಧ್ಯ. ಹೀಗಾಗಿ ಲಿಂಗ ಸಮಾನತೆಯೂ ಮುಖ್ಯ. ಸಮಾಜದಲ್ಲಿ ಮೇಲು-ಕೀಳು ಹೋಗಬೇಕು. ಮಹಿಳೆಯನ್ನು ಗೌರವಿಸುವುದು ದೇಶದ ಕನಸು ಪೂರ್ತಿ ಮಾಡುವಲ್ಲಿ ಪ್ರಮುಖವಾಗಿದೆ. ಯಾವ ದೇಶಗಳು ಅಭಿವೃದ್ಧಿ ಕಂಡಿವೆ, ಅಲ್ಲಿ ಜನರು ಕರ್ತವ್ಯ ಪಾಲಿಸುತ್ತಿದ್ದಾರೆ. ನಾಗರಿಕರ ಕರ್ತವ್ಯ ಬಹಳ ಮುಖ್ಯ. ಪ್ರತಿ ಮನೆಗೆ ವಿದ್ಯುತ್ ನೀಡುವುದು ಸರ್ಕಾರದ ಕೆಲಸ. ಅದನ್ನು ಅಗತ್ಯಕ್ಕೆ ತಕ್ಕಂತೆ ಬಳಸುವುದು ಜನರ ಕರ್ತವ್ಯ. ಪ್ರತಿ ವಲಯದಲ್ಲೂ ಆಯಾ ನಾಗರಿಕರೂ ತಮ್ಮ ಕರ್ತವ್ಯ ಪಾಲಿಸಬೇಕಿದೆ ಎಂದು ತಿಳಿಸಿದರು.

ಆತ್ಮ ನಿರ್ಭರ್ ಭಾರತ್ ಸರ್ಕಾರದ ಕಾರ್ಯಕ್ರಮ ಅಲ್ಲ. ಇದು ಜನರ ಅಭಿಯಾನ ಇದರಲ್ಲಿ ಎಲ್ಲರೂ ಭಾಗಿಯಾಗಬೇಕು. 300 ಕ್ಕೂ ಅಧಿಕ ಸೇನಾ ವಸ್ತುಗಳು ಭಾರತದಲ್ಲಿ ಉತ್ಪಾದನೆಯಾಗುತ್ತಿದೆ. ವಿದೇಶಿ ವಸ್ತುಗಳ ಬಳಕೆ ಮಾಡಲ್ಲ ಅಂತಾ ಸೇನಾಧಿಕಾರಿಗಳು ಸಂಕಲ್ಪ ಮಾಡಿದ್ದಾರೆ. ಹೀಗಾಗಿ ನಾನು ಅವರಿಗೆ ಸಲಾಂ ಮಾಡುತ್ತೇನೆ. ಆತ್ಮ ನಿರ್ಭರ್ ಭಾರತ್ ಅಭಿಯಾನದಿಂದ ಭಾರತ ಉತ್ಪಾದಕ ದೇಶವಾಗುತ್ತಿದೆ. ಉದ್ಯೋಗ ಸೃಷ್ಟಿಯಾಗುತ್ತಿದೆ, ರಪ್ತು ಹೆಚ್ಚುತ್ತಿದೆ. ಇಂಧನ ವಿಭಾಗದಲ್ಲೂ ನಾವು ಆತ್ಮ ನಿರ್ಭರ್ ಆಗಬೇಕಿದೆ ಎಂದರು. ಇದನ್ನೂ ಓದಿ: ಗಮನ ಸೆಳೆದ ಮೋದಿಯ ರಾಷ್ಟ್ರ ಧ್ವಜ ವಿನ್ಯಾಸದ ಟರ್ಬನ್, ಸಾಂಪ್ರದಾಯಿಕ ಉಡುಗೆ

RED FORT MODI

ಸಂಶೋಧನೆಯೂ ದೇಶದ ಅಭಿವೃದ್ಧಿಗೆ ಮುಖ್ಯವಾಗಿದೆ. 40% ಹಣಕಾಸು ವ್ಯವಹಾರ ಡಿಜಿಟಲ್ ನಲ್ಲಿ ಆಗುತ್ತಿದೆ. 5ಜಿ ಇಂಟರ್ನೆಟ್ ಕೂಡಾ ಶೀಘ್ರದಲ್ಲಿ ಬರಲಿದೆ. ಹಳ್ಳಿ ಹಳ್ಳಿಗೂ ಆಪ್ಟಿಕಲ್ ಫೈಬರ್ ಇಂಟರ್ನೆಟ್ ಸೇವೆ ನೀಡಲಿದ್ದೇವೆ. ಸೆಮಿ ಕಂಟಕ್ಟರ್ ಉತ್ಪಾದನೆಯೂ ನಡೆಯುತ್ತಿದೆ. ಭಾರತ ಟೆಕ್ನಾಲಜಿ ಹಬ್ ಆಗುತ್ತಿದೆ. ಪ್ರತಿರಂಗದಲ್ಲೂ ನಾರಿ ಶಕ್ತಿ ಹೊಸ ವಿಶ್ವಾಸ ಮೂಡಿಸಿದೆ. ಸೇನೆ, ಪೊಲೀಸ್, ಕ್ರೀಡೆ ಎಲ್ಲ ವಲಯಗಳಲ್ಲೂ ನಾರಿ ಶಕ್ತಿ ಇದೆ. ಭಾರತದ ಹೊಸ ಸಂಕಲ್ಪಕ್ಕೆ ನಾರಿ ಶಕ್ತಿ ಸೇರಿದರೇ ವೇಗವಾಗಿ ಗುರಿ ಮುಟ್ಟಬಹುದು. ನಾನು ಸಂವಿಧಾನ ರಚನಾಕಾರರಿಗೂ ಧನ್ಯವಾದ ಹೇಳುತ್ತೇನೆ ಎಂದರು.

ದೇಶದಲ್ಲಿ ಬಹಳಷ್ಟು ರಾಜ್ಯಗಳಿದೆ. ಭಾರತದ ಅಭಿವೃದ್ಧಿಗೆ ಅವುಗಳ ಕೊಡುಗೆ ಇದೆ. ಇದು ಒಕ್ಕೂಟ ವ್ಯವಸ್ಥೆಯ ಶಕ್ತಿ. ಇದು ಸ್ಪರ್ಧೆಯ ಒಕ್ಕೂಟದ ವ್ಯವಸ್ಥೆಯಾಗಬೇಕು. ಇದರಿಂದ ಅಭಿವೃದ್ಧಿಗೆ ವೇಗ ಸಿಗಲಿದೆ. ಭ್ರಷ್ಟಾಚಾರ ವಿರುದ್ಧ ಪೂರ್ಣ ಶಕ್ತಿಯೊಂದಿಗೆ ಹೋರಾಡಬೇಕು. ಆಧುನಿಕ ವ್ಯವಸ್ಥೆ ಮೂಲಕ ಭ್ರಷ್ಟಾಚಾರ ತಡೆಯಲಾಗುತ್ತಿದೆ. ಹಿಂದಿನ ಸರ್ಕಾರದಲ್ಲಿ ಬ್ಯಾಂಕ್ ಲೂಟಿ ಮಾಡಿ ಓಡಿ ಹೋದರು. ಅವರ ಆಸ್ತಿಯನ್ನು ನಮ್ಮ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ವೇಗ ನೀಡಬೇಕಿದೆ. ಅದಕ್ಕೆ ಜನರ ಸಹಕಾರ ಬೇಕಿದೆ, ನನಗೆ ಸಹಕಾರ ನೀಡಿ ಎಂದು ಇದೇ ವೇಳೆ ಮೋದಿ ಮನವಿ ಮಾಡಿಕೊಂಡರು. ಇದನ್ನೂ ಓದಿ: ಕೇಂದ್ರ, ರಾಜ್ಯ ಸರ್ಕಾರ ಯಾವುದೇ ಆಡಳಿತವಾಗಲಿ ಕಾಲಕ್ಕೆ ತಕ್ಕಂತೆ ಕೆಲಸ ಮಾಡಬೇಕು: ಮೋದಿ

ಭ್ರಷ್ಟಾಚಾರ ಮಾಡಿದ ವ್ಯಕ್ತಿಯನ್ನು ಸನ್ಮಾನಿಸಲಾಗುತ್ತಿದೆ, ಆಧರಿಸಲಾಗುತ್ತಿದೆ. ಭ್ರಷ್ಟಾಚಾರವನ್ನು ಕೊಳಕು ಎಂದು ಭಾವಿಸುವ ತನಕ ಸ್ವಚ್ಛತೆ ಬರುವುದಿಲ್ಲ. ಹೀಗಾಗಿ ಸಮಾಜದಲ್ಲಿ ಭ್ರಷ್ಟಾಚಾರ ವಿರುದ್ಧ ಜನರು ದಿಟ್ಟ ನಿರ್ಧಾರ ಪ್ರದರ್ಶಿಸಬೇಕು. ಟೀಂ ಇಂಡಿಯಾದಿಂದ ಭಾರತದ ಅಭಿವೃದ್ಧಿ ಸಾಧ್ಯ. 130 ಕೋಟಿ ಜನರು ಒಟ್ಟಾದರೇ ಎಲ್ಲ ಕನಸುಗಳನ್ನು ಈಡೇರಿಸಲು ಸಾಧ್ಯ. ಅಮೃತ ಕಾಲ ಶುರುವಾಗಿದೆ, ಒಟ್ಟಾಗಿ ಒಂದು ಹೆಜ್ಜೆ ಮುಂದೆ ಇಡೋಣ ಎಂದು ನರೇಂದ್ರ ಮೋದಿ ಹೇಳಿದರು.

Live Tv

Share This Article