– ಏರ್‌ಪೋರ್ಟ್ ಟ್ಯಾಕ್ಸಿ, ಗೂಡ್ಸ್ ವಾಹನಗಳೂ ಬಂದ್
ಬೆಂಗಳೂರು: ಡೀಸೆಲ್ ದರ ಏರಿಕೆ (Diesel Price Hike) ಖಂಡಿಸಿ ಇದೇ ಏಪ್ರಿಲ್ 15 ರಿಂದ ಲಾರಿ ಮಾಲೀಕರ ಸಂಘ (Lorry Owners Association) ಮುಷ್ಕರಕ್ಕೆ ಕರೆ ನೀಡಿದ್ದಾರೆ. ಅಂದು ರಾಜ್ಯಾದ್ಯಂತ ಎಲ್ಲಾ ಲಾರಿಗಳ ಸಂಚಾರ ಸ್ಥಗಿತಗೊಳ್ಳಲಿದ್ದು, ಗೂಡ್ಸ್ ವಾಹನಗಳು, ಏರ್‌ಪೋರ್ಟ್ ಟ್ಯಾಕ್ಸಿಗಳೂ (Airport Taxi) ಸಹ ಸಂಪೂರ್ಣ ಬಂದ್ ಆಗಲಿದೆ.
ಬಸ್ ಟಿಕೆಟ್, ಮೆಟ್ರೋ, ಹಾಲು, ವಿದ್ಯುತ್ ಬಳಿಕ ಡಿಸೇಲ್ ದರ ಏರಿಕೆ ಮಾಡಿ ಕರ್ನಾಟಕ ಸರ್ಕಾರ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬೆನ್ನಲ್ಲೇ ಲಾರಿ ಮಾಲೀಕರ ಸಂಘ ಡೀಸೆಲ್ ಬೆಲೆ ಏರಿಕೆ ವಿರುದ್ಧ ಹೋರಾಟಕ್ಕೆ ಕರೆ ನೀಡಿದೆ. ಈ ಸಂಬಂಧ ಚಾಮರಾಜಪೇಟೆಯ ಖಾಸಗಿ ಹೋಟೆಲ್‌ನಲ್ಲಿಂದು (Private Hotel) ವಾಣಿಜ್ಯ ವಾಹನಗಳ ಮಾಲೀಕರ ಸಂಘ ಸಭೆ ನಡೆಸಿದ್ದು, ಸಭೆಯ ಬಳಿಕ ಹೋರಾಟಕ್ಕೆ ಕರೆ ನೀಡಿದೆ. ಇದೇ ಏಪ್ರಿಲ್ 15ರ ಬೆಳಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.
ಈ ಕುರಿತು ಮಾತನಾಡಿರುವ ಲಾರಿ ಅಸೋಸಿಯೇಷನ್ ಅಧ್ಯಕ್ಷ ಷಣ್ಮುಗಪ್ಪ, ಡಿಸೇಲ್ ಬೆಲೆ 7 ತಿಂಗಳಲ್ಲಿ 5 ರೂ ಏರಿಕೆಯಾಗಿದೆ. ಇದು ಲಾರಿ ಸೇರಿದಂತೆ ವಾಣಿಜ್ಯ ವಾಹನಗಳ ಮಾಲೀಕರು ನೇಣು ಹಾಕಿಕೊಳ್ಳುವ ಸ್ಥಿತಿ ಬಂದಿದೆ. ಏನಾದರೂ ಫ್ರೀ ಕೊಡಲಿ, ಆದರೆ ಹೊಟ್ಟೆ ಮೇಲೆ ಹೊಡೆದು ದರ ಏರಿಕೆ ಮಾಡೋದು ಸರಿಯಲ್ಲ. ಫಿಟ್ನೆಸ್ ಫೀಸ್, ಬಾರ್ಡರ್ ಚೆಕ್ ಪೋಸ್ಟ್, ಡಿಸೇಲ್ ದರ ಸೇರಿದಂತೆ ಪ್ರಮುಖ ಬೇಡಿಕೆಗಳನ್ನ ಈಡೇರಿಕೆಗೆ ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ. 14ನೇ ತಾರೀಖು ಅಂಬೇಡ್ಕರ್ ಜಯಂತಿ ರಾತ್ರಿಯಿಂದಲೇ ಹೋರಾಟ ಶುರು ಮಾಡಲಿದ್ದೇವೆ. ಬೇಡಿಕೆ ಈಡೇರುವವರೆಗೆ ಕರ್ನಾಟಕದ ಒಳಗೆ ಯಾರೂ ಬರಲ್ಲ. ಇದಕ್ಕೆ ಪೆಟ್ರೋಲ್ ಮಾಲೀಕರು ಬೆಂಬಲಕೊಟ್ಟಿದ್ದಾರೆ, ಏರ್ಪೋಟ್ ಟ್ಯಾಕ್ಸಿ, ಜಲ್ಲಿ ಮರಳು, ಸೇರಿದಂತೆ ಗೂಡ್ಸ್ ವಾಹನಗಳು ಬಂದ್ ಆಗಲಿವೆ. ಎಲ್ಲಾ ಬಗೆಯ ವಾಣಿಜ್ಯ ವಾಹನಗಳ 9 ಲಕ್ಷ ವಾಹನಗಳು ಸ್ಥಗಿತವಾಗಲಿವೆ ಎಂದು ತಿಳಿಸಿದ್ದಾರೆ.
ಏಪ್ರಿಲ್ 14ರ ವರೆಗೆ ಸರ್ಕಾರಕ್ಕೆ ಗಡುವು ನೀಡುತ್ತೇವೆ. ಸರ್ಕಾರ ನಮ್ಮ ಬೇಡಿಕೆಗಳಿಗೆ ಮಣಿಯದಿದ್ದರೆ, 14ರ ರಾತ್ರಿಯಿಂದಲೇ ಹೋರಾಟ ಶುರು ಮಾಡಲಿದ್ದೇವೆ. ಹೋರಾಟ ಶುರುವಾದ ಬಳಿಕ ಯಾವುದೇ ರಾಜ್ಯದಿಂದ ಕರ್ನಾಟಕ ಒಳಗೆ ವಾಣಿಜ್ಯ ವಾಹನ ಸಂಚಾರ ಮಾಡಲ್ಲ. ಚೆಕ್ ಪೋಸ್ಟ್‌ಗಳಲ್ಲಿ ಖುದ್ದು ನಾವುಗಳೇ ನಿಲ್ಲುತ್ತೇವೆ. ಯಾವುದೇ ವಾಣಿಜ್ಯ ವಾಹನಗಳನ್ನ ಒಳಗಡೆ ಬಿಡದಂತೆ ನೋಡಿಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.
ಯಾವೆಲ್ಲಾ ವಾಹನಗಳು ಬಂದ್?
ಏಪ್ರಿಲ್ 15ರಿಂದ ಏರ್ ಪೋರ್ಟ್ ಟ್ಯಾಕ್ಸಿ, ಜಲ್ಲಿ ಕಲ್ಲು, ಮರಳು ಲಾರಿ, ಗೂಡ್ಸ್ ವಾಹನಗಳು ಸೇರಿದಂತೆ 6 ಲಕ್ಷ ಲಾರಿಗಳ ಸಂಚಾರ ಬಂದ್ ಆಗಲಿದೆ. ಜೊತೆಗೆ ಅಕ್ಕಿ ಲೊಡ್, ಗೂಡ್ಸ್, ಪೆಟ್ರೋಲ್ ಡಿಸೇಲ್ ಲಾರಿಗಳನ್ನೂ ಬಂದ್ ಮಾಡಲಾಗುತ್ತದೆ. ಇದಕ್ಕೆ ಚಾಲಕರ ಸಂಘದಿಂದಲೂ ಬೆಂಬಲ ವ್ಯಕ್ತವಾಗಿದೆ. ಎಲ್ಲಾ ಬಗೆಯ ವಾಣಿಜ್ಯ ವಾಹನಗಳ 9 ಲಕ್ಷ ವಾಹನಗಳ ಸಂಚಾರ ಸ್ಥಗಿತವಾಗಲಿವೆ ಎಂದು ತಿಳಿಸಿದ್ದಾರೆ.