ವಿಜಯಪುರ: ಗರ್ಭಿಣಿಯನ್ನು ಮರ್ಯಾದೆಗೇಡು ಹತ್ಯೆ (Indecent Killing) ಮಾಡಿದ್ದ ಇಬ್ಬರು ಆರೋಪಿಗಳಿಗೆ ವಿಜಯಪುರ (Vijayapura) ಜಿಲ್ಲೆಯ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಇಬ್ರಾಹಿಂಸಾಬ್ ಅತ್ತಾರ, ಅಕ್ಬರಸಾಬ್ ಅತ್ತಾರ ಗಲ್ಲು ಶಿಕ್ಷೆಗೆ ಒಳಗಾದವರು. ಇತರ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ. ರಮಜಾನಭೀ ಅತ್ತಾರ, ದಾವಲಭೀ ಜಮಾದಾರ್, ಅಜಮಾ ದಖನಿ, ಜಿಲಾನಿ ದಖನಿ, ಅಬ್ದುಲ್ ಖಾದರ್ ದಖನಿ, ದಾವಲಭಿ ಧನ್ನೂರಗೆ ಜೀವಾವಧಿ ಶಿಕ್ಷೆಗೆ ಒಳಗಾದವರು. ಇವರಿಗೆ 4.19 ಲಕ್ಷ ರೂ. ದಂಡ ವಿಧಿಸಿ ನ್ಯಾಯಾದೀಶರು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಹೆಚ್.ಡಿ.ರೇವಣ್ಣ ಮನೆ ದೇವರು ಈಶ್ವರನ ಪ್ರಸಾದ ತಂದ ಅರ್ಚಕ
ಕಳೆದ 2017 ರಲ್ಲಿ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹಾಳಾಗುಂಡಕನಾಳ ಗ್ರಾಮದಲ್ಲಿ ಗರ್ಭಿಣಿಯ ಮರ್ಯಾದೆಗೇಡು ಹತ್ಯೆ ನಡೆದಿತ್ತು. ಈ ಸುದ್ದಿಯನ್ನು ‘ಪಬ್ಲಿಕ್ ಟಿವಿ’ ಎಳೆ ಎಳೆಯಾಗಿ ಬಿತ್ತರಿಸಿತ್ತು. ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಬೆನ್ನತ್ತಿದ ತಾಳಿಕೋಟೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದರು.
ಏನಿದು ಪ್ರಕರಣ?
ಹಾಳಗುಂಡಕನಾಳ ಗ್ರಾಮದ ಬಾನು ಬೇಗಂ ಅತ್ತಾರ್ ಹಾಗೂ ಸಾಹೇಬಣ್ಣ ಕೊಣ್ಣೂರ ಎಂಬವರು 2017 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಇದು ಬಾನುಬೇಗಂ ಮನೆಯವರ ಕೆಂಗಣ್ಣಿಗೆ ಗುರಿಯಾಗಿತ್ತು. ಮದುವೆಯಾದ ಬಳಿಕ ಬೇರೆ ನಗರದಲ್ಲಿ ಬಾನುಬೇಗಂ ಹಾಗೂ ಸಾಹೇಬಣ್ಣ ವಾಸವಿದ್ದರು. ಈ ವೇಳೆ ಬಾನುಬೇಗಂ ಗರ್ಭಿಣಿಯಾದ ಕಾರಣ ಹೆರಿಗೆಗಾಗಿ ಗಂಡನ ಮನೆಗೆ ಬಂದಿದ್ದಳು. ಇದನ್ನೇ ಕಾಯುತ್ತಿದ್ದ ಆಕೆಯ ಪೋಷಕರು ಬಾನುಬೇಗಂ ಹಾಗೂ ಸಾಹೇಬಣ್ಣರನ್ನ ಕೊಲೆ ಮಾಡಲು ಮುಂದಾಗಿದ್ದರು. ಇದನ್ನೂ ಓದಿ: ನಿಜ್ಜರ್ ಹತ್ಯೆ ಕೇಸ್ – ಬಂಧಿತ ಮೂವರು ಆರೋಪಿಗಳು ಭಾರತ ಮೂಲದವರು; ಫೋಟೋ ರಿಲೀಸ್
ಪತಿ ಮತ್ತು ಪತ್ನಿ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆಗೊಳಗಾಗಿ ಬಾನುಬೇಗಂ ಮೂರ್ಚೆ ಹೋಗಿದ್ದಳು. ಮೂರ್ಚೆ ಹೋದ ಗರ್ಭಿಣಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲಾಗಿತ್ತು. ಈ ವೇಳೆ ಹಲ್ಲೆಕೋರರಿಂದ ಸಾಹೇಬಣ್ಣನನ್ನು ರಕ್ಷಣೆ ಮಾಡಲಾಗಿತ್ತು. ಬಾನುಬೇಗಂ ತಂದೆ-ತಾಯಿ ಹಾಗೂ ಅವರ ಸಂಬಂಧಿಕರು ಈ ಕೃತ್ಯ ಎಸಗಿದ್ದರು. ಈ ಪ್ರಕರಣ ಕುರಿತು ತನಿಖೆ ನಡೆಸಿ ತಾಳಿಕೋಟೆ ಪೊಲೀಸರು ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ್ದರು. ಸುದೀರ್ಘವಾದ ವಿವಾದ ಆಲಿಸಿದ ನ್ಯಾಯಾಧೀಶ ಸತೀಶ್ ಎಲ್.ಪಿ ಅವರಿಂದ ಆದೇಶ ಹೊರಬಿದ್ದಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಸ್.ಎಸ್ ಲೋಕೂರ ವಾದ ಮಂಡಿಸಿದ್ದರು.