ಟೀಂ ಮ್ಯಾನೇಜ್‍ಮೆಂಟ್ ವಿರುದ್ಧ ಕೆಎಲ್ ರಾಹುಲ್ ಕಿಡಿ

Public TV
1 Min Read
VRP2291 1

ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧದ ನಡೆದ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾ ಆಟಗಾರ ಕೆ.ಎಲ್.ರಾಹುಲ್, ತಮ್ಮ ವಿರುದ್ಧದ ಟೀಕೆಗಳಿಗೆ ಉತ್ತರ ನೀಡಿದ್ದಾರೆ. ಅಲ್ಲದೇ ಅಂತರಾಷ್ಟ್ರೀಯ ಮಾದರಿಯಲ್ಲಿ ತಮ್ಮ ಆಯ್ಕೆ ಹಾಗೂ ಡ್ರಾಪ್ ಮಾಡುತ್ತಿದ್ದ ಬಗ್ಗೆಯೂ ಕಿಡಿಕಾರಿದ್ದಾರೆ.

ವೆಸ್ಟ್ ಇಂಡೀಸ್ ಸರಣಿಗೂ ಮುನ್ನ ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ ಗಾಯದ ಸಮಸ್ಯೆಯಿಂದ ಹೊರಗುಳಿದ ಕಾರಣದಿಂದ ಕೆ.ಎಲ್.ರಾಹುಲ್ ಅವರು ಅವಕಾಶ ಪಡೆದರು. ಸರಣಿಯಲ್ಲಿ 163 ರನ್ ಸಿಡಿಸಿದ ರಾಹುಲ್, ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ನಿರ್ಣಾಯಕ 3ನೇ ಪಂದ್ಯದಲ್ಲಿ 56 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ ನೆರವಿನಿಂದ 91 ರನ್ ಗಳಿಸಿದ ಕೆಎಲ್ ರಾಹುಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಮೊದಲ ಪಂದ್ಯದಲ್ಲಿ 40 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ನೆರವಿನಂದ 62 ರನ್ ಗಳಿಸಿ ಗಮನ ಸೆಳೆದಿದ್ದರು.

kl rahul shikhar dhawan

ಮುಂಬೈ ಪಂದ್ಯದ ಬಳಿಕ ಮಾತನಾಡಿದ ರಾಹುಲ್, ಯಾವುದೇ ಆಟಗಾರನಿಗೆ ತಂಡದ ಒಳಗೆ ಮತ್ತು ಹೊರಗೆ ಹೋಗುವುದು ಅಷ್ಟು ಸುಲಭವಲ್ಲ. ಯಾವುದೇ ಆಟಗಾರನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದರ ಒತ್ತಡವನ್ನು ಎದುರಿಸಲು ಸಮಯಬೇಕಾಗುತ್ತದೆ. ಆದರೆ ತಂಡದ ಪರ ರನ್ ಗಳಿಸುತ್ತಿದ್ದರೆ ಯಾವುದೇ ಒತ್ತಡ ಮೇಲೆ ಇರುವುದಿಲ್ಲ. ಪಂದ್ಯದಲ್ಲಿ ಆತ್ಮವಿಶ್ವಾಸದಿಂದ ಹಾಗೂ ಉತ್ತಮ ಲಯದೊಂದಿಗೆ ಬ್ಯಾಟಿಂಗ್ ನಡೆಸಿದ್ದೇ ತಮ್ಮ ಯಶಸ್ಸಿಗೆ ಕಾರಣ. ಈ ಬಾರಿ ನಾನು ಮತ್ತೆ ತಂಡದಿಂದ ಹೊರಗೆ ಕುಳಿತುಕೊಳ್ಳಲು ಇಷ್ಟಪಡುವುದಿಲ್ಲ. ಈಗಾಗಲೇ ಸಾಕಷ್ಟು ಫಸ್ಟ್ ಕ್ಲಾಸ್ ಕ್ರಿಕೆಟ್ ಆಡಿರುವುದರಿಂದ ಯಾವುದೇ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದರು.

ರಾಹುಲ್ ತಮ್ಮ ಈ ಪ್ರದರ್ಶನದೊಂದಿಗೆ ಧವನ್ ಅವರ ಟಿ20 ಅವಕಾಶ ಬಾಗಿಲನ್ನು ಮುಚ್ಚಿದ್ದಾರೆ ಎಂದು ಆಸೀಸ್ ಮಾಜಿ ಆಟಗಾರ ಬ್ರಾಡ್ ಹಾಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ತೋರಿದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ರಾಹುಲ್ ಈ ಪ್ರದರ್ಶನದಿಂದ ಧವನ್ ಆರಂಭಿಕರಾಗಿರುವ ಅವಕಾಶವನ್ನು ಕೊನೆಗೊಳಿಸಿದಂತೆ ಕಾಣುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *