ರಾಹುಲ್ ಸಿಕ್ಸರ್ ಮಳೆ, ಅಯ್ಯರ್ ಶತಕ, ಕೊಹ್ಲಿ ಅರ್ಧಶತಕ- ಕಿವೀಸ್‍ಗೆ 348 ರನ್ ಗುರಿ

Public TV
2 Min Read
shreyas iyer kl rahul

ಹ್ಯಾಮಿಲ್ಟನ್: ಶ್ರೇಯಸ್ ಅಯ್ಯರ್ ಅಬ್ಬರದ ಶತಕ, ಕೆ.ಎಲ್.ರಾಹುಲ್ ಸಿಕ್ಸರ್ ಸುರಿಮಳೆ ಅರ್ಧಶತಕ ಹಾಗೂ ವಿರಾಟ್ ಕೊಹ್ಲಿ ತಾಳ್ಮೆಯ ಅರ್ಧಶತಕದಿಂದ ಟೀಂ ಇಂಡಿಯಾ ನ್ಯೂಜಿಲೆಂಡ್‍ಗೆ 348 ರನ್ ಗಳ ಗುರಿಯನ್ನು ನೀಡಿದೆ.

ಹ್ಯಾಮಿಲ್ಟನ್‍ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಶ್ರೇಯಸ್ ಅಯ್ಯರ್  103 ರನ್ (107 ಎಸೆತ, 11 ಬೌಂಡರಿ, 1 ಸಿಕ್ಸ್), ಕೆ.ಎಲ್.ರಾಹುಲ್ ಔಟಾಗದೆ 88 ರನ್ (64 ಎಸೆತ, 3 ಬೌಂಡರಿ, 6 ಸಿಕ್ಸರ್), ವಿರಾಟ್ ಕೊಹ್ಲಿ 51 ರನ್ (63 ಎಸೆತ, 6 ಬೌಂಡರಿ) ಹಾಗೂ ಕೇದಾರ್ ಜಾದವ್ ಔಟಾಗದೆ 26 ರನ್ (15 ಎಸೆತ, 3 ಬೌಂಡರಿ, 1 ಸಿಕ್ಸ್) ಸೇರಿ 4 ವಿಕೆಟ್‍ಗೆ 347 ರನ್ ಪೇರಿಸಿದೆ.

kl rahul 2

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ಆರಂಭದಲ್ಲಿ ಭಾರತವನ್ನು ಕಟ್ಟಿಹಾಕಲು ಶಕ್ತವಾಯಿತು. ಆರಂಭಿಕರಾಗಿ ಮೈದಾಕ್ಕಿಳಿದ ಪೃಥ್ವಿ ಶಾ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ ಮೊದಲ ವಿಕೆಟ್ 50 ರನ್‍ಗಳ ಜೊತೆಯಾಟದ ಕೊಡುಗೆ ನೀಡಿತು. ಇನ್ನಿಂಗ್ಸ್ ನ 8ನೇ ಓವರಿನಲ್ಲಿ ಪೃಥ್ವಿ ಶಾ ಹಾಗೂ 9ನೇ ಓವರಿನಲ್ಲಿ ಮಯಾಂಕ್ ಅಗರ್ವಾಲ್ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು.

2ನೇ ವಿಕೆಟ್‍ಗೆ ಟೀಂ ಇಂಡಿಯಾ 54 ರನ್ ಗಳಿಸಿತ್ತು. ಬಳಿಕ ವಿರಾಟ್ ಕೊಹ್ಲಿಗೆ ಸಾಥ್ ನೀಡಿದ ಶ್ರೇಯಸ್ ಅಯ್ಯರ್ ಉತ್ತಮ ಜೊತೆಯಾಟದ ಕೊಡುಗೆ ನೀಡಿದರು. ಈ ಜೋಡಿಯು 3ನೇ ವಿಕೆಟ್‍ಗೆ 102 ರನ್ ಜೊತೆಯಾಟವಾಡಿ ತಂಡದ ಮೊತ್ತವನ್ನು ಏರಿಸಿತು. 51 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಟಿಮ್ ವಿಕೆಟ್ ಒಪ್ಪಿಸಿದರು.

ಅಯ್ಯರ್-ರಾಹುಲ್ ಅಬ್ಬರ:
ಶ್ರೇಯಸ್ ಅಯ್ಯರ್ ಜೊತೆಗೂಡಿದ ಕೆ.ಎಲ್.ರಾಹುಲ್ ಟೀ ಇಂಡಿಯಾದ ಸಿಕ್ಸರ್ ಖಾತೆ ತೆರೆದರು. ರಾಹುಲ್‍ಗೂ ಮುನ್ನ ಯಾವುದೇ ಬ್ಯಾಟ್ಸ್‍ಮನ್‍ಗಳು ಸಿಕ್ಸ್ ಸಿಡಿಸಿರಲಿಲ್ಲ. ಇನ್ನಿಂಗ್ಸ್ ನ 35 ಹಾಗೂ 38ನೇ ಓವರಿನಲ್ಲಿ ನಿರಂತರವಾಗಿ ತಲಾ ಎರಡು ಸಿಕ್ಸರ್ ಸಿಡಿಸಿ ತಂಡದ ಮೊತ್ತವನ್ನು ಏರಿಸಿದರು. ಈ ಮಧ್ಯೆ ಅರ್ಧಶತಕ ದಾಖಲಿಸಿದ್ದ ಅಯ್ಯರ್ ಬೌಂಡರಿಗಳ ಸುರಿಮಳೆ ಸುರಿಸಿದರು.

ಕೆ.ಎಲ್.ರಾಹುಲ್ 42 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದರು. ಈ ಬೆನ್ನಲ್ಲೇ ಅಯ್ಯರ್ 101 ಎಸೆತಗಳಲ್ಲಿ ಶತಕ ಪೂರೈಸಿ ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾಗಿ ವಿಕೆಟ್ ಒಪ್ಪಿಸಿರು. ರಾಹುಲ್ ಹಾಗೂ ಅಯ್ಯರ್ ಜೋಡಿಯು 4ನೇ ವಿಕೆಟ್‍ಗೆ 136 ರನ್‍ಗಳ ಅದ್ಭುತ ಜೊತೆಯಾಟ ನೀಡಿತು. ಬಳಿಕ ಮೈದಾಕ್ಕಿಳಿದ ಕೇದಾರ್ ಜಾದವ್ ರಾಹುಲ್‍ಗೆ ಸಾಥ್ ನೀಡಿದರು.

ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದ ಕೆ.ಎಲ್.ರಾಹುಲ್ ಹಾಗೂ ಕೇದಾರ್ ಜಾದವ್ ಇನ್ನಿಂಗ್ಸ್ ನ 48ನೇ ಓವರಿನಲ್ಲಿ ಮೂರು ಬೌಂಡರಿ ಹಾಗೂ ಸಿಕ್ಸ್ ಸಿಡಿದರು. ಕೊನೆಯ 27 ಎಸೆತಗಳಲ್ಲಿ ಮುರಿಯದ 5ನೇ ವಿಕೆಟಿಗೆ 55 ರನ್ ಚಚ್ಚುವ ಮೂಲಕ ರಾಹುಲ್ ಮತ್ತು ಜಾಧವ್ ಭಾರತದ ಮೊತ್ತವನ್ನು 300 ರನ್ ಗಳ ಗಡಿ ದಾಟಿಸಿದರು.

ರನ್ ಏರಿದ್ದು ಹೇಗೆ?:
50 ರನ್- 47 ಎಸೆತ
100 ರನ್- 116 ಎಸೆತ
150 ರನ್- 165 ಎಸೆತ
200 ರನ್- 213 ಎಸೆತ
250 ರನ್- 239 ಎಸೆತ
300 ರನ್- 279 ಎಸೆತ
347 ರನ್- 300 ಎಸೆತ

shreyas iyer

Share This Article
Leave a Comment

Leave a Reply

Your email address will not be published. Required fields are marked *