ವೆಲ್ಟಿಂಗ್ಟನ್: 18 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಮಧ್ಯಮ ಕ್ರಮಾಂಕದಲ್ಲಿನ ಆಟಗಾರರರ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡಿಗೆ 253 ರನ್ ಗಳ ಗುರಿಯನ್ನು ನೀಡಿದೆ.
ಅಂಬಾಟಿ ರಾಯುಡು ಅರ್ಧಶತಕ, ವಿಜಯ್ ಶಂಕರ್, ಕೇದಾರ್ ಜಾಧವ್ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಬಿರುಸಿನ ಬ್ಯಾಟಿಂಗ್ ನಿಂದಾಗಿ ಭಾರತ 252 ರನ್ ಗಳಿಸಿತು.
18 ರನ್ ಗಳಿಸುವಷ್ಟರಲ್ಲಿ ರೋಹಿತ್ ಶರ್ಮಾ, ಶಿಖರ್ ಧವನ್, ಶುಭಮನ್ ಗಿಲ್, ಧೋನಿ ಔಟಾದಾಗ ಭಾರತ ಈ ಬಾರಿಯೂ 100 ರನ್ ಒಳಗಡೆ ಆಲೌಟ್ ಆಗುತ್ತಾ ಎನ್ನುವ ಪ್ರಶ್ನೆ ಎದ್ದಿತ್ತು. ಆದರೆ ಅಂಬಾಟಿ ರಾಯುಡು ಮತ್ತು ವಿಜಯ್ ಶಂಕರ್ 5ನೇ ವಿಕೆಟಿಗೆ 98 ರನ್‍ಗಳ ಜೊತೆಯಾಟವಾಡಿ ಭಾರತವನ್ನು ಕುಸಿತದಿಂದ ಮೇಲಕ್ಕೆ ಎತ್ತಿದರು. 45 ರನ್(64 ಎಸೆತ, 4 ಬೌಂಡರಿ) ಗಳಿಸಿದ್ದಾಗ ವಿಜಯ್ ಶಂಕರ್ ರನೌಟ್ ಆದರು.
5ನೇ ವಿಕೆಟ್ ಅಂಬಾಟಿ ರಾಯುಡು ಮತ್ತು ಜಾಧವ್ 74 ರನ್ ಜೊತೆಯಾಟವಾಡಿದರು. ಮೂರನೇ ಕ್ರಮಾಂಕದಲ್ಲಿ ಬಂದು ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಪಿಚ್ ನಲ್ಲಿ ನಿಂತು ಆಡುತ್ತಿದ್ದ ರಾಯುಡು 90 ರನ್(113 ಎಸೆತ, 8 ಬೌಂಡರಿ, 4 ಸಿಕ್ಸರ್) ಸಿಡಿಸಿ ಕ್ಯಾಚ್ ನೀಡಿ ಔಟಾದರು.
ಉತ್ತಮವಾಗಿ ಆಡುತ್ತಿದ್ದ ಜಾಧವ್ 34 ರನ್ (45 ಎಸೆತ, 5 ಬೌಂಡರಿ) ಗಳಿಸಿದ್ದಾಗ ಹೆನ್ರಿ ಎಸೆತಕ್ಕೆ ಬೌಲ್ಡ್ ಆದರು. ಜಾಧವ್ ಔಟಾದಾಗ ಭಾರತ 45.2 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತ್ತು.
ಹಾರ್ದಿಕ್ ಪಾಂಡ್ಯ ಕ್ರೀಸ್ ಗೆ ಆಗಮಿಸಿದ ಮೇಲೆ ಮೇಲಿಂದ ಮೇಲೆ ಸಿಕ್ಸರ್ ಸಿಡಿಸಿದರು. 47ನೇ ಓವರ್ ನಲ್ಲಿ ಪಾಂಡ್ಯ 3 ಸಿಕ್ಸರ್ ಸಿಡಿಸಿದರು. ಅಂತಿಮವಾಗಿ ಪಾಂಡ್ಯ 45 ರನ್(22 ಎಸೆತ, 2 ಬೌಂಡರಿ, 5 ಸಿಕ್ಸರ್) ಔಟಾದರು. ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ 8ನೇ ವಿಕೆಟ್ ಗೆ 45 ರನ್ ಜೊತೆಯಾಟವಾಡಿದ್ದು ಇದರಲ್ಲಿ 42 ರನ್ ಪಾಂಡ್ಯ ಹೊಡೆದಿದ್ದರು. ಅಂತಿಮವಾಗಿ ಭಾರತ 49.5 ಓವರ್ ಗಳಲ್ಲಿ 252 ರನ್ ಗಳಿಗೆ ಸರ್ವಪತನ ಕಂಡಿತು. ಹೆನ್ರಿ 4 ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್ 3 ವಿಕೆಟ್ ಪಡೆದು ಮಿಂಚಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv