Connect with us

13 ವರ್ಷಗಳ ಹಿಂದೆ ದ್ರಾವಿಡ್ ನಿರ್ಮಿಸಿದ್ದ ದಾಖಲೆ ಮುರಿದ ಪೂಜಾರ

13 ವರ್ಷಗಳ ಹಿಂದೆ ದ್ರಾವಿಡ್ ನಿರ್ಮಿಸಿದ್ದ ದಾಖಲೆ ಮುರಿದ ಪೂಜಾರ

ರಾಂಚಿ: ಮೂರನೇ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಅವರು 502 ಬಾಲ್‍ಗಳನ್ನು ಎದುರಿಸಿ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಮರಿಯುವ ಮೂಲಕ ಟೀಂ ಇಂಡಿಯಾ ಪರ ಅತ್ಯಧಿಕ ಬಾಲನ್ನು ಎದುರಿಸಿದ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಚೇತೇಶ್ವರ ಪೂಜಾರ 4ನೇ ದಿನದಾಟದಲ್ಲಿ 502 ಎಸೆತಗಳನ್ನು ಎದುರಿಸಿ 202 ರನ್(21 ಬೌಂಡರಿ) ಬಾರಿಸುವ ಮೂಲಕ ಪಾಕ್ ವಿರುದ್ಧ ದ್ರಾವಿಡ್ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.

2004ರ ಏಪ್ರಿಲ್‍ನಲ್ಲಿ ರಾಹುಲ್ ದ್ರಾವಿಡ್ ಪಾಕಿಸ್ತಾನ ವಿರುದ್ಧ ರಾವಲ್ಪಿಂಡಿಯಲ್ಲಿ ನಡೆದ ಮೂರನೇ ಟೆಸ್ಟ್ ನ ಮೊದಲನೇ ಇನ್ನಿಂಗ್ಸ್ ನಲ್ಲಿ 270 ರನ್(495 ಎಸೆತ, 34 ಬೌಂಡರಿ, 1 ಸಿಕ್ಸರ್) ಬಾರಿಸಿದ್ದರು. ಈಗ ಪೂಜಾರ 502 ಬಾಲ್‍ಗಳನ್ನು ಫೇಸ್ ಮಾಡುವ ಮೂಲಕ 13 ವರ್ಷದ ಹಿಂದೆ ದ್ರಾವಿಡ್ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ. ದ್ರಾವಿಡ್ ದ್ವಿಶತಕ ಸಾಧನೆಯಿಂದಾಗಿ ಭಾರತ ಈ ಪಂದ್ಯವನ್ನು ಇನ್ನಿಂಗ್ಸ್ ಮತ್ತು 131 ರನ್‍ಗಳಿಂದ ಗೆದ್ದುಕೊಂಡಿತ್ತು. ವಿಶೇಷ ಏನೆಂದರೆ ಇವರಿಬ್ಬರು ಆರಂಭಿಕ ಆಟಗಾರು ಔಟಾದ ಬಳಿಕ ಬಂದು ಈ ಸಾಧನೆ ಮಾಡಿದ್ದಾರೆ.

ಇಂಗ್ಲೆಂಡಿನ ಆಟಗಾರನಿಗೆ ವಿಶ್ವದಾಖಲೆಯ ಪಟ್ಟ:
ಅತಿ ಹೆಚ್ಚು ಬಾಲನ್ನು ಎದುರಿಸಿದ ವಿಶ್ವ ದಾಖಲೆ ಇಂಗ್ಲೆಂಡಿನ ಸರ್ ಲಿನೋನಾರ್ಡ್ ಹಟ್ಟನ್ ಹೆಸರಿನಲ್ಲಿದೆ. 1938ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 847 ಬಾಲಿಗೆ ಹಟ್ಟನ್ 364 ರನ್ ಹೊಡೆದಿದ್ದರು.

ಮೂರನೇ ಅತ್ಯಧಿಕ ಸ್ಕೋರ್: ಚೇತೇಶ್ವರ ಪೂಜಾರ ಅವು ಈ ಸಾಧನೆಯ ಜೊತೆಗೆ ಆಸ್ಟ್ರೇಲಿಯಾ ವಿರುದ್ಧ ಎರಡು ದ್ವಿಶತಕ ಹೊಡೆದ ಸಚಿನ್, ಲಕ್ಷ್ಮಣ್ ಅವರ ಕ್ಲಬ್ ಸೇರಿದ್ದಾರೆ. ಪೂಜಾರ ಈ ಹಿಂದೆ 2013ರಲ್ಲಿ ಹೈದರಬಾದ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ನಲ್ಲಿ 202 ರನ್ ಗಳಿಸಿದ್ದರು. ಪೂಜಾರ ಇಂಗ್ಲೆಂಡ್ ವಿರುದ್ಧದ ಅಹಮದಾಬಾದ್‍ನಲ್ಲಿ ನಡೆದ ಟೆಸ್ಟ್ ನಲ್ಲಿ ವೈಯಕ್ತಿಕ ಗರಿಷ್ಠ 206 ರನ್ ಬಾರಿಸಿದ್ದರು.

ಭಾರತದ ಭಾರೀ ಮೊತ್ತ: ಮೂರನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 360 ರನ್‍ಗಳಿಸಿದ್ದ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 210 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 603 ರನ್‍ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿದೆ. ನಿನ್ನೆ 130 ರನ್‍ಗಳಿಸಿದ್ದ ಪೂಜಾರ ಇಂದು ದ್ವಿಶತಕ ಹೊಡೆದರೆ, 18 ರನ್‍ಗಳಿಸಿದ್ದ ವೃದ್ಧಿಮಾನ್ ಸಹಾ ಇಂದು 117 ರನ್(233 ಎಸೆತ, 8 ಬೌಂಡರಿ, 1 ಸಿಕ್ಸರ್) ಬಾರಿಸಿ ಔಟಾದರು.

ಇವರಿಬ್ಬರು ಏಳನೇ ವಿಕೆಟ್‍ಗೆ 466 ಎಸೆತಗಳಲ್ಲಿ 199 ರನ್ ಜೊತೆಯಾಟವಾಡುವ ಮೂಲಕ ಭಾರತ ಭಾರೀ ಮೊತ್ತವನ್ನು ಪೇರಿಸಿದೆ. ಜಡೇಜಾ ಔಟಾಗದೇ 54 ರನ್(55 ಎಸೆತ, 5 ಬೌಂಡರಿ, 2 ಸಿಕ್ಸರ್) ಬಾರಿಸಿದರೆ, ಉಮೇಶ್ ಯಾದವ್ 16 ರನ್ ಹೊಡೆದರು.

ಬೈ 14, ಲೆಗ್ ಬೈ 5 ರನ್ ನೀಡಿ ಇತರೇ ರೂಪದಲ್ಲಿ 19 ರನ್ ಬಿಟ್ಟುಕೊಟ್ಟ ಕಾರಣ ಭಾರತ 600 ರನ್‍ಗಳ ಗಡಿಯನ್ನು ದಾಟಿತ್ತು.

ಕುತೂಹಲ ಘಟ್ಟದಲ್ಲಿ ಟೆಸ್ಟ್: ನಾಲ್ಕನೇಯ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 7.2 ಓವರ್‍ಗಳಲ್ಲಿ 2 ವಿಕೆಟ್ ಕಳೆದುಕೊಂಡು 23 ರನ್ ಗಳಿಸಿದೆ. ಡೇವಿಡ್ ವಾರ್ನರ್ ಮತ್ತು ನಥನ್ ಲಿಯಾನ್ ಔಟಾಗಿದ್ದು, ಕ್ರೀಸ್‍ನಲ್ಲಿ ಮ್ಯಾಟ್ ರೇನ್ ಷಾ ಇದ್ದಾರೆ. ಎರಡು ವಿಕೆಟ್‍ಗಳನ್ನು ಜಡೇಜಾ ಕಬಳಿಸಿದ್ದಾರೆ. ನಾಳೆ ಕೊನೆಯ ದಿನವಾಗಿದ್ದು ಪಂದ್ಯ ಏನಾಗಲಿದೆ ಎನ್ನುವ ಕುತೂಹಲ ಹೆಚ್ಚಾಗಲಿದೆ.

77 ಓವರ್ ಎಸೆದ ಕೀಫ್: ಸ್ಪಿನ್ನರ್ ಸ್ಟೀವ್ ಓ ಕೀಫ್ ಮೊದಲ ಇನ್ನಿಂಗ್ಸ್ ನಲ್ಲಿ 77 ಓವರ್ ಎಸೆಯುವ ಮೂಲಕ ಆಸ್ಟ್ರೇಲಿಯಾ ಪರವಾಗಿ ಭಾರತದ ವಿರುದ್ಧ ಅತಿ ಹೆಚ್ಚು ಓವರ್ ಎಸೆದ ಬೌಲರ್ ಆಗಿದ್ದಾರೆ. ಕೀಫ್ 77 ಓವರ್‍ನಲ್ಲಿ 17 ಓವರ್ ಮೇಡನ್ ಮಾಡಿ 199 ರನ್ 3 ವಿಕೆಟ್ ಕಿತ್ತಿದ್ದಾರೆ.

Advertisement
Advertisement