ಬೆಂಗಳೂರು: ಯಜುವೇಂದ್ರ ಚಹಲ್ ಅವರ ಮಾರಕ ಬೌಲಿಂಗ್‍ನಿಂದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 75 ರನ್‍ಗಳ ಭರ್ಜರಿ ಜಯ ಸಾಧಿಸಿದೆ. ಟೆಸ್ಟ್, ಏಕದಿನ ಸರಣಿಯನ್ನು ಗೆದ್ದುಕೊಂಡಿದ್ದ ಭಾರತ ಈಗ ಟಿ20 ಸರಣಿಯನ್ನು ಗೆದ್ದುಕೊಂಡಿದೆ.
ಗೆಲ್ಲಲು 203 ರನ್‍ಗಳ ಕಠಿಣ ಗುರಿಯನ್ನು ಪಡೆದ ಇಂಗ್ಲೆಂಡ್ 13.3 ಓವರ್ ಗಳಲ್ಲಿ 119 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಚಹಲ್ ಸ್ಪಿನ್ ದಾಳಿಗೆ ತತ್ತರಿಸಿದ ಆಂಗ್ಲರು 8 ರನ್ ಅಂತರದಲ್ಲಿ 8 ವಿಕೆಟ್ ಕಳೆದುಕೊಳ್ಳುವ ಮೂಲಕ 16.3 ಓವರ್‍ಗಳಲ್ಲಿ 127 ರನ್ ಗಳಿಗೆ ಆಲೌಟ್ ಆಯ್ತು.
Advertisement
ಚಹಲ್ ಕಮಾಲ್: ಬಿಲ್ಲಿಂಗ್ಸ್, ಮಾರ್ಗನ್ ರನ್ನು ಔಟ್ ಮಾಡಿದ ಚಹಲ್ ರೂಟ್ ಅವರನ್ನು ಎಲ್‍ಬಿ ಬಲೆಗೆ ಕೆಡವಿದರು. ಇಲ್ಲಿಂದ ಆಂಗ್ಲರ ಪತನ ಆರಂಭವಾಯಿತು. ನಂತರ ಬಂದ ಬಟ್ಲರ್ ಕೊಹ್ಲಿ ಗೆ ಕ್ಯಾಚ್ ನೀಡಿ ಹೊರ ನಡೆದರು. ಚಹಲ್ ಎಸೆತವನ್ನು ಸಿಕ್ಸರ್‍ಗೆ ಬೆನ್ ಸ್ಟೋಕ್ ಅಟ್ಟಿದ್ದರೂ ಸುರೇಶ್ ರೈನಾ ಬೌಂಡರಿ ಗೆರೆಯ ಬಳಿ ಹಿಡಿದ ಅತ್ಯುತ್ತಮ ಕ್ಯಾಚ್‍ಗೆ ಔಟಾದರು. ಇದಾದ ಬಳಿಕ ಮೊಯಿನ್ ಅಲಿ ಕೊಹ್ಲಿ ಕ್ಯಾಚ್ ನೀಡಿದರೆ ಕ್ರಿಸ್ ಜೊರ್ಡನ್ ಅವರನ್ನು ಧೋನಿ ಸ್ಟಂಪ್ ಔಟ್ ಮಾಡಿದರು. ಅಂತಿಮವಾಗಿ 4 ಓವರ್ ಕೋಟಾ ಮುಗಿದಾಗ ಚಹಲ್ 25 ರನ್ ನೀಡಿ 6 ವಿಕೆಟ್ ಪಡೆದಿದ್ದರು.
Advertisement
ಇಂಗ್ಲೆಂಡ್ ಪರ ಜೇಸನ್ ರೋ 32 ರನ್, ಜೋ ರೂಟ್ 42 ರನ್, ನಾಯಕ ಇಯಾನ್ ಮಾರ್ಗನ್ 40 ರನ್ ಹೊಡೆದರು. ಬುಮ್ರಾ ಮೂರು ವಿಕೆಟ್ ಪಡೆದರೆ ಅಮಿತ್ ಮಿಶ್ರಾ 1 ವಿಕೆಟ್ ಪಡೆದರು
Advertisement
ವಿಕೆಟ್ ಪತನಗೊಂಡಿದ್ದು ಹೀಗೆ:
1-8, 2-55, 3-119, 4-119, 5-119, 6-123, 7-127, 8-127, 9-127, 10-127
Advertisement
ಸಿಕ್ಸರ್, ಬೌಂಡರಿ ಅಬ್ಬರ: ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಬ್ ಏರ್ ಸೌಲಭ್ಯ ಅಳವಡಿಕೆಯಾದ ನಡೆದ ಮೊದಲ ಅಂತರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಬ್ಯಾಟ್ಸ್ ಮನ್‍ಗಳು ರನ್ ಸುರಿಮಳೆಗೈದಿದ್ದರು. ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ಆರಂಭದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡರೂ ಸುರೇಶ್ ರೈನಾ, ಧೋನಿ ಅರ್ಧಶತಕ, ಕೊನೆಯಲ್ಲಿ ಯುವರಾಜ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತ್ತು.
ಎರಡನೇ ಓವರ್‍ನ ಮೊದಲ ಎಸೆತದಲ್ಲಿ ನಾಯಕ ಕೊಹ್ಲಿ ಜೊರ್ಡನ್ ಬೌಲಿಂಗ್‍ನಲ್ಲಿ ರನೌಟ್ ಆದರು. ಆರಂಭದಲ್ಲಿ ಕುಸಿತ ಕಂಡರೂ ಎರಡನೇ ವಿಕೆಟ್‍ಗೆ ರಾಹುಲ್ ಮತ್ತು ರೈನಾ 6.1 ಓವರ್ನಲ್ಲಿ 61 ರನ್ ಕಲೆ ಹಾಕಿ ಭದ್ರವಾದ ಇನ್ನಿಂಗ್ಸ್ ಕಟ್ಟಿದರು.
22 ರನ್(18 ಎಸೆತ, 2 ಬೌಂಡರಿ, 1ಸಿಕ್ಸರ್) ಗಳಿಸಿದ್ದ ರಾಹುಲ್ ಔಟಾದಾಗ ತಂಡದ ಮೊತ್ತ 65 ಆಗಿತ್ತು. ಧೋನಿ ಕ್ರೀಸ್‍ಗೆ ಬಂದ ಮೇಲೆ ಸಿಕ್ಸರ್, ಬೌಂಡರಿ ಸಿಡಿಯಲು ಆರಂಭವಾಯಿತು.
ರೈನಾ ಮತ್ತು ಧೋನಿ 37 ಎಸೆತದಲ್ಲಿ 55 ರನ್ ಜೊತೆಯಾಟವಾಡಿದರು. 39 ಎಸೆತದಲ್ಲಿ ಅರ್ಧಶತಕ ಹೊಡೆದ ರೈನಾ ಅಂತಿಮವಾಗಿ 63 ರನ್(45 ಎಸೆತ, 2 ಬೌಂಡರಿ, 5 ಸಿಕ್ಸರ್) ಗಳಿಸಿದ್ದಾಗ ಮೊರ್ಗನ್‍ಗೆ ಕ್ಯಾಚ್ ನೀಡಿ ಹೊರ ನಡೆದರು.
ಯುವರಾಜ್ ಬಂದ ಕೂಡಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಪರಿಣಾಮ ಜೊರ್ಡನ್ ಎಸೆದ 18ನೇ ಓವರ್ ನಲ್ಲಿ ಯುವರಾಜ್ ಮೂರು ಸಿಕ್ಸರ್ ಒಂದು ಬೌಂಡರಿ ಚಚ್ಚಿದರು. ಈ ಓವರ್ನಲ್ಲಿ ಧೋನಿ ಮತ್ತು ಯುವಿ 24 ರನ್ ಸೊರೆಗೈದರು. ಉತ್ತಮವಾಗಿ ಆಡುತ್ತಿದ್ದ ಯುವರಾಜ್ ಸಿಂಗ್ 27 ರನ್( 10 ಎಸೆತ, 1 ಬೌಂಡರಿ,1 ಸಿಕ್ಸರ್) ಗಳಿಸಿದ್ದಾಗ ಮಿಲ್ಸ್ ಎಸೆದ ಸ್ಲೋ ಬಾಲಿಗೆ ಕೀಪರ್ಗೆ ಕ್ಯಾಚ್ ನೀಡಿ ಹೊರ ನಡೆದರು. ಇವರಿಬ್ಬರು 28 ಎಸೆತದಲ್ಲಿ 57 ರನ್ ಚಚ್ಚುವ ಮೂಲಕ ತಂಡದ ಮೊತ್ತವನ್ನು 170 ರನ್‍ಗಳ ಗಡಿ ದಾಟಿಸಿದರು.
ಧೋನಿ 56 ರನ್(36 ಎಸೆತ,5 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರೆ, 11 ರನ್(4 ಎಸೆತ, 1 ಸಿಕ್ಸರ್) ಗಳಿಸಿದ್ದ ಹಾರ್ದಿಕ್ ಪಾಂಡ್ಯಾ ಇನ್ನಿಂಗ್ಸ್ ಕೊನೆಯ ಬಾಲ್‍ನಲ್ಲಿ ರನ್ ಔಟಾದರು. ಕೊನೆಯಲ್ಲಿ ರಿಶಬ್ ಪಂತ್ 6 ರನ್ ಗಳಿಸಿ ಔಟಾಗದೇ ಉಳಿದರು. 12 ಸಿಕ್ಸರ್, 11 ಬೌಂಡರಿ ಸಿಡಿದರೆ, ಇತರೇ ರೂಪದಲ್ಲಿ 15 ರನ್ ಟೀಂ ಇಂಡಿಯಾಗೆ ಬಂತು.
ಭಾರತದ ರನ್ ಏರಿದ್ದು ಹೀಗೆ:
50 ರನ್ – 5.5 ಓವರ್
100 ರನ್ – 12.1 ಓವರ್
150 ರನ್ – 16.5 ಓವರ್
200 ರನ್ – 19.5 ಓವರ್
202 ರನ್ – 20 ಓವರ್
ಕಾನ್ಪುರದಲ್ಲಿ ನಡೆದ ಮೊದಲ ಪಂದ್ಯವನ್ನು ಇಂಗ್ಲೆಂಡ್ 7 ವಿಕೆಟ್‍ನಿಂದ ಗೆದ್ದಿದ್ದರೆ, ನಾಗ್ಪುರದಲ್ಲಿ ನಡೆದ ಎರಡನೇ ಪಂದ್ಯವನ್ನು ಭಾರತ ಜಸ್‍ಪ್ರೀತ್ ಬುಮ್ರಾ ಅವರ ಅಮೋಘ ಬೌಲಿಂಗ್ ಪ್ರದರ್ಶನದಿಂದಾಗಿ 5ರನ್‍ಗಳ ರೋಚಕ ಜಯವನ್ನು ಸಾಧಿಸಿತ್ತು.
ಯಜುವೇಂದ್ರ ಚಹಲ್ ಪಂದ್ಯಶ್ರೇಷ್ಠ ಮತ್ತು ಸರಣಿಯಲ್ಲಿ 8 ವಿಕೆಟ್ ಕಿತ್ತ ಹಿನ್ನೆಲೆಯಲ್ಲಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.