ಇಂದೋರ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ನಲ್ಲಿ ಟೀಂ ಇಂಡಿಯಾ ತನ್ನ ಗೆಲುವಿನ ಓಟವನ್ನು ಮುಂದುವರಿಸಿದ್ದು, ಸತತ 6ನೇ ಟೆಸ್ಟ್ ಗೆಲುವಿನೊಂದಿಗೆ ಪಟ್ಟಿಯಲ್ಲಿ 300 ಅಂಕ ಪಡೆದು ನಂ.1 ಸ್ಥಾನದಲ್ಲೇ ಮುಂದುವರಿದಿದೆ.
ಬಾಂಗ್ಲಾದೇಶ ವಿರುದ್ಧ ಇಂದೋರ್ ಕ್ರೀಡಾಂಗಣದಲ್ಲಿ ನಡೆದ 2 ಪಂದ್ಯಗಳ ಮೊದಲ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್, 130 ರನ್ ಗಳ ಅಂತರದಲ್ಲಿಂದ ಗೆಲುವು ಪಡೆದಿದೆ. ಇದರೊಂದಿಗೆ 60 ಅಂಕಗಳನ್ನು ಪಡೆದುಕೊಂಡಿದೆ. ಟೀಂ ಇಂಡಿಯಾ ಬೌಲರ್ ಗಳ ದಾಳಿಗೆ ತತ್ತರಿಸಿದ ಬಾಂಗ್ಲಾ ಆಟಗಾರರು 2ನೇ ಇನ್ನಿಂಗ್ಸ್ ನಲ್ಲಿ 213 ರನ್ ಗಳಿಗೆ ಆಲೌಟ್ ಆಯ್ತು. ಇದಕ್ಕೂ ಮುನ್ನ ಟೀಂ ಇಂಡಿಯಾ ತಂಡ ಮಯಾಂಕ್ ಅಗರ್ವಾಲ್ ಅವರ ದ್ವಿಶತಕದ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 493 ರನ್ ಗಳಿಸಿ 343 ರನ್ ಲೀಡ್ ನೊಂದಿಗೆ ಡಿಕ್ಲೇರ್ ಮಾಡಿಕೊಂಡಿತ್ತು.
Advertisement
Advertisement
ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಇದುವರೆಗೂ 6 ಪಂದ್ಯಗಳನ್ನು ಆಡಿರುವ ಟೀಂ ಇಂಡಿಯಾ ಎಲ್ಲಾ ಪಂದ್ಯಗಳಲ್ಲಿ ಗೆಲುವು ಪಡೆಯುವುದರೊಂದಿಗೆ ಮೊದಲ ಸ್ಥಾನದಲ್ಲಿದೆ. 2 ಪಂದ್ಯಗಳನ್ನು ಆಡಿರುವ ನ್ಯೂಜಿಲೆಂಡ್, ಶ್ರೀಲಂಕಾ ತಂಡಗಳು ತಲಾ 60 ಅಂಕಗಳೊಂದಿಗೆ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದುಕೊಂಡಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್‍ಗಳು 5 ಪಂದ್ಯಗಳಲ್ಲಿ 56 ಅಂಕಗಳೊಂದಿಗೆ 4 ಮತ್ತು 5ನೇ ಸ್ಥಾನ ಪಡೆದಿವೆ. ಉಳಿದಂತೆ ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ತಂಡಗಳು ಯಾವುದೇ ಅಂಕಗಳನ್ನು ಪಡೆದುಕೊಂಡಿಲ್ಲ.
Advertisement
ವಿಶೇಷ ಎಂದರೆ ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್ ಆಡುತ್ತಿರುವ 9 ತಂಡಗಳಲ್ಲಿ ಟೀಂ ಇಂಡಿಯಾ 300 ಅಂಕಗಳನ್ನು ಪಡೆದಿದ್ದರೆ, ಉಳಿದ 7 ತಂಡಗಳ ಎಲ್ಲ ಅಂಕಗಳನ್ನು ಸೇರಿಸಿದರೆ 238 ಅಂಕ ಆಗುತ್ತದೆ. ಇತ್ತ ಪಾಕಿಸ್ತಾನ ಕ್ರಿಕೆಟ್ ತಂಡ ಯಾವುದೇ ಪಂದ್ಯವನ್ನು ಆಡದ ಕಾರಣ ಪಟ್ಟಿಯಲ್ಲಿ ಶೂನ್ಯ ಅಂಕದೊಂದಿಗೆ ಕೊನೆಯ ಸ್ಥಾನವನ್ನು ಪಡೆದಿದೆ.
Advertisement
ಪಾಕಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಿರುವ ಕಾರಣ ವಿಶ್ವದ ಇತರೇ ಕ್ರಿಕೆಟ್ ಆಡುವ ದೇಶಗಳು ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ವಿದೇಶಿ ಟೂರ್ನಿಗಳಲ್ಲಿ ಮಾತ್ರ ಹೆಚ್ಚು ಭಾಗವಹಿಸಬೇಕಾಗಿದೆ. ಇತ್ತೀಚೆಗಷ್ಟೇ ಶ್ರೀಲಂಕಾ ಕ್ರಿಕೆಟ್ ತಂಡ ಪಾಕ್ ಪ್ರವಾಸ ಕೈಗೊಂಡು ಟಿ20 ಸರಣಿಯನ್ನು ಆಡಿತ್ತು. ಉಳಿದಂತೆ ಡಿಸೆಂಬರಿನಲ್ಲಿ ಪಾಕ್, ಲಂಕಾ ನಡುವಿನ 2 ಟೆಸ್ಟ್ ಪಂದ್ಯಗಳ ಟೂರ್ನಿ ನಡೆಯಲಿದೆ.
ಅಂಕ ಹೇಗೆ ಹಂಚಲಾಗುತ್ತದೆ?
ಒಂದು ಟೆಸ್ಟ್ ಸರಣಿಗೆ 120 ಅಂಕಗಳನ್ನು ಐಸಿಸಿ ಈಗಾಗಲೇ ನಿಗದಿ ಮಾಡಿದೆ. ಸರಣಿಯಲ್ಲಿ ತಂಡಗಳು ಎಷ್ಟು ಪಂದ್ಯಗಳನ್ನು ಆಡಲಿದೆಯೋ ಆ ಪಂದ್ಯಗಳಿಗೆ ಅನುಗುಣವಾಗಿ ಅಂಕಗಳನ್ನು ವಿಭಾಗಿಸಲಾಗುತ್ತದೆ. ಉದಾಹರಣೆಗೆ ಬಾಂಗ್ಲಾ ಸರಣಿಯಲ್ಲಿ 2 ಪಂದ್ಯಗಳು ನಡೆಯಲಿದ್ದು ಪಂದ್ಯ ಗೆದ್ದರೆ ಗೆದ್ದ ತಂಡಕ್ಕೆ 60 ಅಂಕಗಳನ್ನು ನೀಡಲಾಗುತ್ತದೆ.
2 ಪಂದ್ಯಗಳ ಸರಣಿಯಲ್ಲಿ ಪಂದ್ಯ ಗೆದ್ದರೆ 60 ಅಂಕ, ಟೈ ಆದರೆ 30 ಅಂಕ, ಡ್ರಾನಲ್ಲಿ ಅಂತ್ಯಗೊಂಡರೆ 20 ಅಂಕಗಳನ್ನು ನೀಡಲಾಗುತ್ತದೆ. 3 ಪಂದ್ಯಗಳ ಸರಣಿಯಲ್ಲಿ ಜಯ ಗಳಿಸಿದ ತಂಡಕ್ಕೆ 40 ಅಂಕ, ಟೈ ಆದರೆ 20, ಯಾವುದೇ ಫಲಿತಾಂಶ ಕಾಣದೇ ಡ್ರಾ ಆದರೆ 13 ಅಂಕಗಳನ್ನು ನೀಡಲಾಗುತ್ತದೆ. 5 ಪಂದ್ಯಗಳ ಸರಣಿಯಲ್ಲಿ ಜಯಗಳಿಸಿದರೆ 24 ಅಂಕ, ಟೈ ಆದರೆ 12, ಡ್ರಾ ಆದಲ್ಲಿ 8 ಅಂಕ ನೀಡಲಾಗುತ್ತದೆ.
ಭಾರತ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಪಾಕಿಸ್ತಾನ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಆಡಲಿವೆ. ಒಂದು ಸರಣಿಯಲ್ಲಿ ಗರಿಷ್ಠ 5, ಕನಿಷ್ಠ 2 ಪಂದ್ಯ ಗಳನ್ನು ಆಡಬೇಕು. ಪ್ರತಿಯೊಂದು ತಂಡ ತವರಿನಲ್ಲಿ 3, ವಿದೇಶಗಳಲ್ಲಿ 3 ಸರಣಿಯನ್ನು ಆಡಬೇಕೆಂಬ ನಿಯಮ ಹೇರಲಾಗಿದೆ. ಅತ್ಯಧಿಕ ಅಂಕ ಸಂಪಾದಿಸಿದ ಅಗ್ರ 2 ತಂಡಗಳ ನಡುವಿನ ಫೈನಲ್ ಪಂದ್ಯ 2021ರ ಜೂನ್‍ನಲ್ಲಿ ನಡೆಯಲಿದೆ. ಭಾರತ ತನ್ನ ಅಭಿಯಾನವನ್ನು ವೆಸ್ಟ್ ಇಂಡೀಸ್ ಪ್ರವಾಸದೊಂದಿಗೆ ಆರಂಭಿಸಿತ್ತು.
ರನ್ಸ್ ಪರ್ ವಿಕೆಟ್ ಅನುಪಾತ ಲೆಕ್ಕಾಚಾರ ಹೇಗೆ?
ತಂಡಗಳು ಸಮಾನ ಅಂಕ ಪಡೆದರೆ ಸ್ಥಾನ ಹಂಚಿಕೆ ಮಾಡುವುದು ಕಷ್ಟವಾಗುತ್ತದೆ. ಈ ಕಾರಣಕ್ಕೆ ಎರಡು ಇನ್ನಿಂಗ್ಸ್ ಗಳಲ್ಲಿ ಕಳೆದುಕೊಂಡ ವಿಕೆಟ್ ಮತ್ತು ಒಟ್ಟು ರನ್ ಗಳ ಲೆಕ್ಕಾಚಾರ ಹಾಕಿ ಅಂಕ ನೀಡಲಾಗುತ್ತದೆ. ಭಾರತ ಮತ್ತು ವೆಸ್ಟ್ ಇಂಡೀಸ್ ಉದಾಹರಣೆಗೆ ತೆಗೆದುಕೊಂಡರೆ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 297 ರನ್‍ಗಳಿಗೆ ಆಲೌಟ್ ಆಗಿದ್ದರೆ ಎರಡನೇ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 343 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ವಿಂಡೀಸ್ ಮೊದಲ ಇನ್ನಿಂಗ್ಸ್ ನಲ್ಲಿ 222 ರನ್ ಗಳಿಗೆ ಆಲೌಟ್ ಆಗಿದ್ದರೆ ಎರಡನೇ ಇನ್ನಿಂಗ್ಸ್ ನಲ್ಲಿ 100 ರನ್ ಗಳಿಗೆ ಆಲೌಟ್ ಆಗಿತ್ತು.
((297+343)/17)/(222+100)/20)
=(640/17)/(322/20)
=37.647/16.1
=2.338