ಜೇಬಿಗೆ ಕೈ ಹಾಕಿ ಚೆಂಡು ವಿರೂಪ – ಆ್ಯಡಂ ಜಂಪಾ ವಿರುದ್ಧ ನೆಟ್ಟಿಗರಿಂದ ಕಿಡಿ

Public TV
2 Min Read
adam zampa

ಲಂಡನ್: ವಿಶ್ವಕಪ್ ಕ್ರಿಕೆಟಿನ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 36 ರನ್ ಗಳಿಂದ ಪಂದ್ಯ ಗೆದ್ದರೂ ಆಸೀಸ್ ಬೌಲರ್ ಮೇಲೆ ಚೆಂಡು ವಿರೂಪಗೊಳಿಸಿದ ಆರೋಪ ಕೇಳಿ ಬಂದಿದೆ.

ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಆ್ಯಡಂ ಜಂಪಾ ಅವರು ಬೌಲ್ ಮಾಡುವ ಸಮಯದಲ್ಲಿ ತೋರಿದ ನಡೆಯಿಂದ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಚೆಂಡು ವಿರೂಪಗೊಳಿಸಿದ ಆರೋಪ ಮಾಡುತ್ತಿದ್ದಾರೆ.

https://twitter.com/rgis1369/status/1137752772621717504

ಭಾರತದ ಇನ್ನಿಂಗ್ಸ್ 24ನೇ ಓವರ್ ಆರಂಭಕ್ಕೂ ಮುನ್ನ ಜಂಪಾ ಬಾಲನ್ನು ತೆಗೆದುಕೊಂಡು ಜೇಬಿಗೆ ಕೈ ಹಾಕಿದ್ದಾರೆ. ಒಂದು ಬಾರಿ ಜೇಬಿಗೆ ಕೈ ಹಾಕಿದರೆ ಯಾವುದೇ ಅನುಮಾನ ಬರುತ್ತಿರಲಿಲ್ಲ. ಆದರೆ ಜಂಪಾ ಎರಡು ಬಾರಿ ಜೇಬಿಗೆ ಕೈ ಹಾಕಿದ್ದರಿಂದ ಭಾರತದ ಅಭಿಮಾನಿಗಳು ಈ ನಡೆಯನ್ನು ಪ್ರಶ್ನೆ ಮಾಡುತ್ತಿದ್ದಾರೆ.

ಜಂಪಾ ಓವರ್ ಹಾಕುವ ಮೊದಲು ಶಿಖರ್ ಧವನ್ ಭರ್ಜರಿಯಾಗಿ ಆಡುತ್ತಿದ್ದರು. ಜಂಪಾ ಅವರ ಓವರ್ ಬಳಿಕ ಶಿಖರ್ ಧವನ್ ದೊಡ್ಡ ಹೊಡೆತವನ್ನು ಹೊಡೆಯಲು ಕಷ್ಟವಾಗುತಿತ್ತು ಎಂದು ಟ್ವಿಟ್ಟರಿಗರು ಆರೋಪಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ನಾಯಕ ಆ್ಯರೋನ್ ಫಿಂಚ್ ಪ್ರತಿಕ್ರಿಯಿಸಿ, ನಾನು ಫೋಟೋ ನೋಡಿಲ್ಲ. ಪ್ರತಿ ಪಂದ್ಯದ ವೇಳೆ ಜಂಪಾ ಹಿಸೆಯಲ್ಲಿ ಹ್ಯಾಂಡ್ ವಾರ್ಮರ್ಸ್ ಇರುತ್ತದೆ. ಅದನ್ನೇ ಬಳಸಿರಬಹುದು ಎಂದು ತಿಳಿಸಿದರು.

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದ ವೇಳೆ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಆಸಿಸ್ ಮಾಜಿ ನಾಯಕ ಸ್ಟೀವನ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಸಿಕ್ಕಿ ಬಿದ್ದು ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿದರೆ, ಆಸ್ಟ್ರೇಲಿಯಾ 50 ಓವರ್ ಗಳಲ್ಲಿ 316 ರನ್ ಗಳಿಗೆ ಆಲೌಟ್ ಆಯ್ತು. ಭಾರತದ ಬ್ಯಾಟ್ಸ್ ಮನ್ ಗಳು ಕೊನೆಯ 10 ಓವರ್ ಗಳಲ್ಲಿ 116 ರನ್ ಚಚ್ಚಿದರೆ ಕೊನೆಯ 11 ಓವರ್ ಗಳಲ್ಲಿ ಆಸ್ಟ್ರೇಲಿಯಾ 7 ವಿಕೆಟ್ ಕಳೆದುಕೊಂಡಿತ್ತು.

40 ಓವರ್ ಗಳಿಸಿದಾಗ ಭಾರತ 2 ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿತ್ತು. ಅಂತಿಮವಾಗಿ 50 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿತು. ಟೀಂ ಇಂಡಿಯಾ ಪರ ಶಿಖರ್ ಧವನ್ 117 ರನ್, ರೋಹಿತ್ ಶರ್ಮಾ 57 ರನ್, ವಿರಾಟ್ ಕೊಹ್ಲಿ 82 ರನ್, ಹಾರ್ದಿಕ್ ಪಾಂಡ್ಯ 48 ರನ್ ಹೊಡೆದರು.

ಆಸ್ಟ್ರೇಲಿಯಾ ಪರ ವಾರ್ನರ್ 56 ರನ್, ಸ್ಮಿತ್ 69 ರನ್, ಕ್ಯಾರಿ 55 ರನ್ ಹೊಡೆದರು. ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ತಲಾ 3 ವಿಕೆಟ್ ಪಡೆದರೆ ಚಹಾಲ್ 2 ವಿಕೆಟ್ ಪಡೆದರು.

Team India C

Share This Article
Leave a Comment

Leave a Reply

Your email address will not be published. Required fields are marked *