ಹೋಬಾರ್ಟ್: ವಾಷಿಂಗ್ಟನ್ ಸುಂದರ್ ಸ್ಫೋಟಕ ಬ್ಯಾಟಿಂಗ್, ಟೀಂ ಇಂಡಿಯಾ ಆಲ್‌ರೌಂಡ್ ಪ್ರದರ್ಶನದ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧ ನಡೆದ 3ನೇ ಟಿ20 ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಟಿ20 ಸರಣಿ 1-1 ರಲ್ಲಿ ಸಮಬಲ ಸಾಧಿಸಿದೆ. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.
ಹೋಬಾರ್ಟ್‌ನ ಬೆಲ್ಲೆರಿವ್ ಓವಲ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಟಿಮ್ ಡೇವಿಡ್, ಸ್ಟೋಯ್ನಿಸ್ ಅವರ ಸ್ಫೋಟಕ ಅರ್ಧಶತಕಗಳ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತ್ತು. 187 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಭಾರತ 18.3 ಓವರ್‌ಗಳಲ್ಲೇ 5 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿ ಗೆಲುವು ಸಾಧಿಸಿತು.
ಆರಂಭದಲ್ಲೇ ಸ್ಫೋಟಕ ಪ್ರದರ್ಶನಕ್ಕಿಳಿದ ಭಾರತ ಒಂದೆಡೆ ರನ್ ಕಲೆಹಾಕುತ್ತಿದ್ರೆ, ಮತ್ತೊಂದು ಕಡೆ ಪ್ರಮುಖ ವಿಕೆಟ್‌ಗಳನ್ನ ಕಳೆದುಕೊಳ್ಳುತ್ತಾ ಸಾಗಿತು. ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ವಾಷಿಂಗ್ಟನ್ ಸುಂದರ್, ಜಿತೇಶ್ ಶರ್ಮಾ ಉತ್ತಮ ಜೊತೆಯಾಟದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ರು.
1 ರನ್‌ನಿಂದ ಕೈತಪ್ಪಿದ ಫಿಫ್ಟಿ
ಸಿಕ್ಸ್‌ನೊಂದಿಗೆ ಇನ್ನಿಗ್ಸ್ ಶುರು ಮಾಡಿದ ವಾಷಿಂಗ್ಟನ್ ಸುಂದರ್ ಆಸೀಸ್ ಬೌಲರ್‌ಗಳನ್ನ ಹಿಗ್ಗಾಮುಗ್ಗಾ ಬೆಂಡೆತ್ತಿದರು. ಕೊನೆಯಲ್ಲಿ ಇನ್ನೂ 10 ಎಸೆತಗಳು ಬಾಕಿಯಿರುವಾಗ ಗೆಲುವಿಗೆ 3 ರನ್‌ಗಳ ಅಗತ್ಯವಿತ್ತು. ಈ ವೇಳೆ ಸ್ಟ್ರೈಕ್‌ನಲ್ಲಿದ್ದ ಜಿತೇಶ್ ಶರ್ಮಾ ಕವರ್ ಡ್ರೈವ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ಗೆಲುವು ತಂದುಕೊಟ್ಟರು. ಇದರಿಂದ 49 ರನ್‌ಗಳಿಸಿ ಆಫ್‌ಸ್ಟ್ರೈಕ್‌ನಲ್ಲಿದ್ದ ವಾಷಿಂಗ್ಟನ್ ಸುಂದರ್ ಫಿಫ್ಟಿ ಬಾರಿಸುವ ಅವಕಾಶದಿಂದ ವಂಚಿತದಾದರು. ಭಾರತದ ಪರ ಅಭಿಷೇಕ್ ಶರ್ಮಾ 25 ರನ್, ಶುಭಮನ್ ಗಿಲ್ 15 ರನ್, ಸೂರ್ಯಕುಮಾರ್ ಯಾದವ್ 24 ರನ್ ತಿಲಕ್ ವರ್ಮಾ 29 ರನ್, ಅಕ್ಷರ್ ಪಟೇಲ್ 17 ರನ್ ಗಳಿಸಿದ್ರೆ, ವಾಷಿಂಗ್ಟನ್ ಸುಂದರ್ 23 ಎಸೆತಗಳಲ್ಲಿ ಸ್ಫೋಟಕ 49 ರನ್ (4 ಸುಕ್ಸರ್, 3 ಬೌಂಡರಿ), ಜಿತೇಶ್ ಶರ್ಮಾ 22 ರನ್ ಗಳಿಸಿ ಅಜೇಯರಾಗುಳಿದರು.
ಅರ್ಷ್‌ದೀಪ್ ಆಕ್ರಮಣ
ಇದಕ್ಕೂ ಮುನ್ನ ಎಡಗೈ ವೇಗಿ ಅರ್ಶದೀಪ್ ಸಿಂಗ್ ಅವರ ಆಕ್ರಮಣಕಾರಿ ಬೌಲಿಂಗ್ ದಾಳಿಯಿಂದಾಗಿ ಆಸ್ಟ್ರೇಲಿಯಾ ತಂಡವನ್ನು ಭಾರತ ತಂಡ 186 ರನ್ ಗಳಿಗೆ ಕಟ್ಟಿ ಹಾಕಲು ಸಾಧ್ಯವಾಯಿತು. ಭಾರತದ ಪರ ಚುಟುಕು ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿರುವ ಬೌಲರ್ ಆಗಿದ್ದರೂ ಅವರನ್ನ ಹೊರಗಿಟ್ಟು ಹರ್ಷಿತ್ ರಾಣಾ ಅವರನ್ನು ಕಣಕ್ಕಿಳಿಸಿದ್ದು ತೀವ್ರ ಟೀಕೆಗೆ ಒಳಗಾಗಿತ್ತು. 3ನೇ ಟಿ20 ಪಂದ್ಯದಲ್ಲಿ ಅವರು ತಮಗೆ ಸಿಕ್ಕ ಅವಕಾಶವನ್ನ ಸಮರ್ಥವಾಗಿ ಬಳಸಿಕೊಂಡು 3 ವಿಕೆಟ್ ಉಡೀಸ್ ಮಾಡಿದ್ರು.
ಡೇವಿಡ್, ಸ್ಟೋಯ್ನಿಸ್ ಆಸರೆ
ಆಸ್ಟ್ರೇಲಿಯಾ ತಂಡ ಅನುಭವಿ ಟ್ರಾವಿಸ್ ಹೆಡ್ (6) ಮತ್ತು ವಿಕೆಟ್ ಕೀಪರ್ ಬ್ಯಾಟರ್ ಜೋಶ್ ಇಂಗ್ಲಿಷ್(1) ಅವರು ಬೇಗನೇ ವಿಕೆಟ್ ಕಳೆದುೊಂಡಿದ್ದರಿಂದ ಆಸ್ಟ್ರೇಲಿಯಾ ತಂಡ ಒತ್ತಡಕ್ಕೆ ಬಿತ್ತು. ಈ ಹಂತದಲ್ಲಿ ಒಂದಾದ ಮಿಚೆಲ್ ಮಾರ್ಷ್ ಮತ್ತು ಟಿಂ ಡೇವಿಡ್ ರನ್ ಕುಸಿತ ತಡೆದರು. ಮಾರ್ಷ್ ಅವರು ಎಂದಿನ ತಮ್ಮ ಅಬ್ಬರದ ಬ್ಯಾಟಿಂಗ್ ಅನ್ನು ಮಾಡದೆ ಟಿಮ್ ಡೇವಿಡ್ ಅವರಿಗೆ ಸ್ಸ್ಟ್ರೈಕ್ ನೀಡಿದರು. ಪರಿಣಾಮ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಟಿಂ ಡೇವಿಡ್ ಸ್ಕೋರ್ ಬೋರ್ಡ್ ನಲ್ಲಿ ಆಸೀಸ್ ತಂಡವನ್ನು ಬೀಳದಂತೆ ನೋಡಿಕೊಂಡರು. ಆಸ್ಟ್ರೇಲಿಯಾ ತಂಡ ಬೃಹತ್ ಮೊತ್ತದತ್ತ ಮುನ್ನಡೆಯುತ್ತಿದ್ದಾಗ 9ನೇ ಓವರ್ ನಲ್ಲಿ ಡಬಲ್ ಶಾಕ್ ನೀಡಿದವರು ಸ್ಪಿನ್ನರ್ ವರುಣ್ ಚಕ್ರವರ್ತಿ. ತಂಡದ ಮೊತ್ತ 73 ಆಗಿದ್ದಾಗ ನಿರಂತರ ಎರಡು ಎಸೆತಗಳಲ್ಲಿ ಮಿಚ್ ಮಾರ್ಷ್ (11 ರನ್) ಮತ್ತು ಮಿಚೆಲ್ ಓವನ್ ಅವರ ವಿಕೆಟ್‌ಗಳನ್ನ ಬ್ಯಾಕ್ ಟು ಬ್ಯಾಕ್ ಎಗಸಿರಿದ್ರು. ಬಾಳಿಕ ಮಾರ್ಕಸ್ ಸ್ಟೋಯ್ನಿಸ್ ಸ್ಫೋಟಕ ಪ್ರದರ್ಶನ ನೀಡುವ ಮೂಲಕ ತಂಡವನ್ನ 180 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ತಂಡದ ಮೊತ್ತ 118 ಆಗಿದ್ದಾಗ ಅಪಾಯಕಾರಿ ಟಿಂ ಡೇವಿಡ್ ಅವರು ಶಿವಂ ದುಬೆ ಬೌಲಿಂಗ್ ನಲ್ಲಿ ಸಿಕ್ಸರ್ ಗೆತ್ತಲು ಪ್ರಯತ್ನಪಟ್ಟರು. ಈ ವೇಳೆ ಬೌಂಡರಿ ಲೈನ್ ಬಳಿ ತಿಲಕ್ ವರ್ಮಾ ಅವರು ಹಿಡಿದ ಸುಂದರ ಕ್ಯಾಚಿಗೆ ಅವರು ವಿಕೆಟ್ ಒಪ್ಪಿಸಬೇಕಾಯಿತು. ಕೇವಲ 38 ಎಸೆತಗಳನ್ನು ಎದುರಿಸಿದ ಟಿಂ ಡೇವಿಡ್ ಅವರು 8 ಬೌಂಡರಿ ಮತ್ತು 5 ಸಿಕ್ಸರ್ ಗಳನ್ನು ಸಿಡಿಸಿದ್ದರು.
ಅವರ ಬಳಿಕ ಸ್ಟಯೋನಿಸ್ (39 ಎಸೆತಗಳಲ್ಲಿ 64) ಮತ್ತು ಮ್ಯಾಥ್ಯೂ ಶಾರ್ಟ್ (15 ಎಸೆತಗಳಲ್ಲಿ 26) ತಂಡವನ್ನು ಡೆತ್ ಓವರ್ ಗಳಲ್ಲಿ ರನ್ ಧಾರಣೆ ಕಡಿಮೆಯಾಗದಂತೆ ನೋಡಿಕೊಂಡರು. ಅಂತಿಮ ಓವರ್ ನಲ್ಲಿ ಸ್ಟಯೋನಿಸ್ ವಿಕೆಟ್ ಪಡೆದ ಅರ್ಶದೀಪ್ ಸಿಂಗ್ ಆಸೀಸ್ ಮೊತ್ತ 200ರ ಸಮೀಪ ಸಾಗದಂತೆ ನೋಡಿಕೊಂಡರು. ಭಾರತ ತಂಡ ಈ ಸರಣಿಯಲ್ಲಿ ಮೊದಲ ಬಾರಿಗೆ ಟಾಸ್ ಗೆಲುವು ಸಾಧಿಸಿದೆ.

