ಎರಡ್ಮೂರು ದಿನಗಳಿಂದ ನಟಿ ಸಾಯಿ ಪಲ್ಲವಿ ಆಡಿದ ಮಾತಿನ ಹಿನ್ನೆಲೆಯಲ್ಲಿ ಹೈದರಾಬಾದ್ ಸೇರಿದಂತೆ ಹಲವು ಕಡೆ ದೂರು ದಾಖಲಾಗಿವೆ. ಅವರು ಕೋಮು ಗಲಭೆ ಹೆಚ್ಚುವಂತಹ ಮಾತುಗಳನ್ನು ಆಡಿದ್ದರಿಂದ ಮತ್ತು ಗೋವು ಕಳ್ಳರಿಗೆ ಕಾಶ್ಮೀರಿ ಪಂಡಿತರ ಹತ್ಯೆಯನ್ನು ಹೋಲಿಸಿ ಮಾತನಾಡಿದ್ದಕ್ಕಾಗಿ ಕೂಡಲೇ ಬಂಧಿಸಬೇಕು ಎಂದು ಹೈದರಾಬಾದ್ ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ. ಈಗಾಗಲೇ ಹೈದರಾಬಾದ್ ನಲ್ಲಿ ದೂರು ಕೂಡ ದಾಖಲಾಗಿದೆ.
ಕರ್ನಾಟಕದಲ್ಲೂ ಈ ಕಾವು ಮುಂದುವರಿದಿದೆ. ಯಾರೂ ದೂರು ದಾಖಲಿಸದೇ ಇದ್ದರೂ, ಸೋಷಿಯಲ್ ಮೀಡಿಯಾಗಳಲ್ಲಿ ಮಾತ್ರ ಅಬ್ಬರ ಜೋರಾಗಿದೆ. ಕೆಲ ಸಿನಿಮಾ ನಟ, ನಟಿಯರು ಮತ್ತು ನಿರ್ದೇಶಕರು ಸಾಯಿ ಪಲ್ಲವಿ ಪರ ನಿಂತಿದ್ದರೆ, ಹಿಂದೂಪರ ಸಂಘಟನೆಯ ಸದಸ್ಯರು ಸಾಯಿ ಪಲ್ಲವಿ ವಿರೋಧಿಸಿ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಸಾಯಿ ಪಲ್ಲವಿ ಮಾತನಾಡಿದ್ದು ಸರಿಯೇ ಇರಬಹುದು. ಆದರೆ ಅವರು ಹೋಲಿಕೆ ಮಾಡಿದ್ದು ಸರಿಯಿಲ್ಲ ಎನ್ನುವ ಮತ್ತೊಂದು ವರ್ಗ ಕೂಡ ಹುಟ್ಟಿಕೊಂಡಿದೆ. ಇದನ್ನೂ ಓದಿ:ಬುದ್ದಿಜೀವಿ ವಲಯಕ್ಕೆ ನಟ ಚೇತನ್ ‘ಚಮಚ’ ಅಂದಿದ್ದು ಯಾಕೆ ಮತ್ತು ಯಾರಿಗೆ?
ಮಾಧ್ಯಮವೊಂದರ ಸಂದರ್ಶನದಲ್ಲಿ ‘ಕಾಶ್ಮೀರ ಪಂಡಿತರ ಹತ್ಯೆ ಮತ್ತು ಜೈ ಶ್ರೀರಾಮ್ ಎಂದು ಹೇಳುತ್ತಾ ಗೋ ಸಾಗಾಣಿ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿ ಮೇಲಿನ ಹಲ್ಲೆ ಎರಡೂ ಒಂದೇ ಅನಿಸುತ್ತಿದೆ. ಧರ್ಮದ ಹೆಸರಿನಲ್ಲಿ ನಡೆಯುವ ಹತ್ಯೆಗಳನ್ನು ಖಂಡಿಸಬೇಕು’ ಎಂದು ಸಾಯಿ ಪಲ್ಲವಿ ಮಾತನಾಡಿದ್ದರು. ನಾನು ಸಮಸಮಾಜದ ಕನಸು ಕಂಡಿರುವ ಹುಡುಗಿ. ನಾನು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ. ಜಾತಿ, ಧರ್ಮಗಳ ಬಡಿದಾಟಕ್ಕೂ ನಾನು ಸಿದ್ಧಳಿಲ್ಲ. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದಲೇ ಬದುಕಬೇಕು. ಧರ್ಮಗಳ ಕಚ್ಚಾಟ ಏಕೆ? ಯಾರದೋ ಲಾಭಕ್ಕಾಗಿ ಆಗುತ್ತಿರುವ ದಾಳಿಯಿದು ಅಂತ ನನಗೆ ಅನಿಸುತ್ತಿದೆ ಎಂದು ಸಾಯಿ ಪಲ್ಲವಿ ಮಾತನಾಡಿದ್ದಾರೆ.