ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ (TungaBhadra Dam) ನೀರಿನ ಒಳಹರಿವು ಹೆಚ್ಚಾಗಿದ್ದು, ಅಧಿಕಾರಿಗಳು ಜಲಾಶಯವನ್ನು ಭರ್ತಿ ಮಾಡಲು ಹಿಂದೇಟು ಹಾಕುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಕೊಪ್ಪಳ (Koppala) ತಾಲೂಕಿನ ಮುನಿರಾಬಾದ್ (Munirabad) ಬಳಿಯಿರುವ ತುಂಗಭದ್ರಾ ಜಲಾಶಯ ರಾಜ್ಯದ ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳು ಹಾಗೂ ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದ ಲಕ್ಷಾಂತರ ಜನರ ಬದುಕಿಗೆ ಆಧಾರವಾಗಿದೆ. ಜಲಾಶಯ ತುಂಬಿದರೆ ಸಾಮಾನ್ಯವಾಗಿ ಜನರಿಗೆ ಸಂತಸ ಹೆಚ್ಚಾಗುತ್ತದೆ.ಇದನ್ನೂ ಓದಿ:ಮಲಪ್ರಭಾ ಜಲಾಶಯಕ್ಕೆ ಗಂಗಾ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ಹೆಬ್ಬಾಳ್ಕರ್
ಈ ಹಿಂದೆ ಮಲೆನಾಡಿನ ಮಳೆಗೆ ತುಂಗಭದ್ರಾ ಜಲಾಶಯ ಜುಲೈ ತಿಂಗಳಲ್ಲಿಯೇ ಭರ್ತಿಯಾಗಿತ್ತು. ಒಟ್ಟು 108.780 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ 105.788 ಟಿಎಂಸಿ ನೀರನ್ನು ಸಂಗ್ರಹ ಮಾಡಲಾಗಿತ್ತು. ಜಲಾಶಯಕ್ಕೆ ಬಾಗಿನ ಅರ್ಪಿಸಲು ಸಿದ್ಧತೆ ನಡೆಸಿದ್ದಾಗ ಆ.11 ರಂದು ಜಲಾಶಯದ 19ನೇ ಕ್ರಸ್ಟಗೇಟ್ ಕೊಚ್ಚಿಕೊಂಡು ಹೋಗಿತ್ತು. ಈ ವೇಳೆ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹೋಗಿತ್ತು. ಆ.18ರಂದು ಕ್ರಸ್ಟಗೇಟ್ ರಿಪೇರಿಯಾಗಿ, ಹತ್ತೇ ದಿನದಲ್ಲಿ ಜಲಾಶಯ ಮತ್ತೇ ಭರ್ತಿಯಾಗಿತ್ತು.
ಅಂದಿನಿಂದ ಜಲಾಶಯಕ್ಕೆ ಪ್ರತಿನಿತ್ಯ ಒಳಹರಿವು ಇದೆ. ಆದರೆ ಇಲ್ಲಿವರಗೆ ಮತ್ತೊಮ್ಮೆ ಜಲಾಶಯ ಭರ್ತಿ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಜಲಾಶಯದ ನೀರಿನ ಪ್ರಮಾಣವನ್ನು ಕಳೆದ ನಲವತ್ತು ದಿನಗಳಿಂದ 101.687 ಟಿಎಂಸಿಗೆ ಮಾತ್ರ ನಿಲ್ಲಿಸುತ್ತಿದ್ದಾರೆ. ಅಂದರೆ ಇನ್ನು ಸರಿಸುಮಾರು ಐದು ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಜಲಾಶಯಕ್ಕೆ ಇದೆ. ಆದರೂ ಕೂಡಾ ಜಲಾಶಯದಲ್ಲಿ ಅದಕ್ಕಿಂತ ಹೆಚ್ಚಿನ ನೀರು ಸಂಗ್ರಹ ಮಾಡುತ್ತಿಲ್ಲ.
ಈ ಹಿಂದೆ ಜಲಾಶಯಕ್ಕೆ ಯಾವುದೇ ತೊಂದರೆ ಇಲ್ಲ. ಜಲಾಶಯವನ್ನು ಸಂಪೂರ್ಣ ಭರ್ತಿ ಮಾಡುವುದಾಗಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದರು. ಆದರೆ ಇಲ್ಲಿಯವರಗೆ ಜಲಾಶಯ ಭರ್ತಿ ಮಾಡಿಲ್ಲ. ಸಿಎಂ ಬಾಗಿನ ಅರ್ಪಿಸಿದಾಗ ಕೂಡಾ ಜಲಾಶಯ ಸಂಪೂರ್ಣ ಭರ್ತಿಯಾಗಿರಲಿಲ್ಲ. ಆದರೆ ಯಾವ ಕಾರಣದಿಂದ ಜಲಾಶಯ ಭರ್ತಿ ಮಾಡಲು ಹಿಂದೇಟು ಹಾಕಲಾಗುತ್ತಿದೆ ಎನ್ನುವುದನ್ನು ಅಧಿಕಾರಿಗಳು ತಿಳಿಸುತ್ತಿಲ್ಲ.
ಜಲಾಶಯ ಸಂಪೂರ್ಣ ಭರ್ತಿಯಾದಾಗ ಕ್ರಸ್ಟಗೇಟ್ ಕೊಚ್ಚಿಕೊಂಡು ಹೋಗಿರುವ ಭಯ ಇರುವುದರಿಂದ ಮತ್ತೊಮ್ಮೆ ರಿಸ್ಕ್ ತಗೆದುಕೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಕೇಳಿಬರುತ್ತಿದೆ. ಜಲಾಶಯಕ್ಕೆ ಅಪಾರ ಪ್ರಮಾಣದ ನೀರಿನ ಒಳಹರಿವು ಇದ್ದರೂ ಜಲಾಶಯ ಭರ್ತಿ ಮಾಡದೇ ಇರುವುದು ಜಲಾಶಯದ ಭದ್ರತೆ ಬಗ್ಗೆ ಅನೇಕ ಅನುಮಾನಗಳು ಮೂಡುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ.ಇದನ್ನೂ ಓದಿ:Bengaluru | ನಿಲ್ಲದ ವರುಣನ ಆರ್ಭಟ: ನಾಳೆ ಶಾಲೆಗಳಿಗೆ ರಜೆ ಘೋಷಣೆ