ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎಟಿಎಂ ದರೋಡೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಹೊರ ರಾಜ್ಯಗಳಿಂದ ನಗರಕ್ಕೆ ಬಂದು ಬಿಡುಬಿಟ್ಟಿರುವ ಖತರ್ನಾಕ್ ಕಳ್ಳರ ಗ್ಯಾಂಗ್ ರಾತ್ರಿಯಾಗುತ್ತಿದ್ದಂತೆ ಎಟಿಎಂ ಮಷೀನ್‍ಗಳನ್ನು ದರೋಡೆ ಮಾಡುತ್ತಿದ್ದಾರೆ. ಈ ಕಳ್ಳರ ಕೈಚಳಕದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದನ್ನು ನೋಡಿ ಬ್ಯಾಂಕ್ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ.
ತಡರಾತ್ರಿ ಇಬ್ಬರು ಬಂದು ಕ್ಷಣ ಮಾತ್ರದಲ್ಲಿ ಎಟಿಎಂ ಹಣ ಲೂಟಿ ಮಾಡಿ ಪರಾರಿಯಾಗಿದ್ದಾರೆ. ಖದೀಮರ ಕೈಚಳಕ ನೋಡಿ ಬ್ಯಾಂಕ್ ಸಿಬ್ಬಂದಿಯೇ ಶಾಕ್ ಗೆ ಒಳಗಾಗಿದ್ದಾರೆ. ಎಟಿಎಂನ ನಕಲಿ ಕೀ ಬಳಸಿ ಕೈಚಳಕ ಆರಂಭಿಸೋ ಕಳ್ಳರು ಎಟಿಎಂ ಆಫ್ ಮಾಡಿದ ನಂತರ ಹಣ ಕದ್ದಿದ್ದಾರೆ.
ಮಲ್ಲೇಶ್ವರಂನ ಆಕ್ಸಿಸ್ ಬ್ಯಾಂಕ್‍ನಲ್ಲಿ ಕಳ್ಳರು ದರೋಡೆ ಮಾಡುತ್ತಿರುವ ದೃಶ್ಯಗಳು ಸಿಸಿಟಿಯಲ್ಲಿ ಸೆರೆಯಾಗಿದೆ. ನಗರದ ಹಲವೆಡೆ ಈಗಾಗಲೇ ತಮ್ಮ ಕೈಚಳಕವನ್ನು ತೋರಿಸಿರುವ ಈ ಕಳ್ಳರು, ನಕಲಿ ಕೀಗಳನ್ನು ಬಳಸಿ ಇದುವರೆಗೂ ಸುಮಾರು 2 ಕೋಟಿ ರೂ.ಗಿಂತಲೂ ಅಧಿಕ ಹಣವನ್ನು ದೋಚಿದ್ದಾರೆ ಎಂದು ತಿಳಿದುಬಂದಿದೆ.
ಇದುವರೆಗೂ ನಗರದ ನೃಪತುಂಗ ರಸ್ತೆಯಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ಎಟಿಎಂ, ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಎಟಿಎಂ ಮತ್ತು ಮಂತ್ರಿಮಾಲ್ ಬಳಿಯ ಕಾರ್ಪೊರೇಷನ್ ಬ್ಯಾಂಕ್ ಎಟಿಎಂಗೆ ಕಳ್ಳರು ಕನ್ನ ಹಾಕಿದ್ದಾರೆ.
ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಎಟಿಎಂ ದರೋಡೆ ವೇಳೆ ಉತ್ತರಪ್ರದೇಶ ಮೂಲದ ಆಯುಷ್ ಯಾದವ್ ಎಂಬ ಕಳ್ಳ ಸಿಕ್ಕಿಬಿದ್ದಿದ್ದು, ಮತ್ತೊಬ್ಬ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಸೆರೆಸಿಕ್ಕ ಕಳ್ಳ ಪೊಲೀಸ್ ವಿಚಾರಣೆಯಲ್ಲಿ ತನ್ನ ಗ್ಯಾಂಗ್ ಯಶವಂತಪುರ ಲಾಡ್ಜ್ ವೊಂದರಲ್ಲಿ ತಂಗಿರುವ ಮಾಹಿತಿಯನ್ನು ನೀಡಿದ್ದ. ಆದರೆ ಪೊಲೀಸರು ಸ್ಥಳಕ್ಕೆ ತೆರಳುವ ವೇಳೆಗೆ ಎಲ್ಲರೂ ಪರಾರಿಯಾಗಿದ್ದಾರೆ.
ಎಟಿಎಂ ಮಷೀನ್ ಆಫ್ ಮಾಡಿದ ಮೇಲೆ ಕಳ್ಳರು ತಮ್ಮ ಕೈಚಳಕವನ್ನು ತೋರಿಸುತ್ತಿದ್ದರು ಎಂದು ತಿಳಿದುಬಂದಿದೆ. ಎಟಿಎಂನಲ್ಲಿ ಹಣ ವ್ಯತ್ಯಾಸವಾದಾಗ ಎಟಿಎಂಗೆ ಹಣ ತುಂಬುವ ಏಜಿನ್ಸಿಗಳು ಠಾಣೆಗಳಿಗೆ ದೂರು ನೀಡಿದ ನಂತರ ಈ ಪ್ರಕರಣಗಳು ಬೆಳಕಿಗೆ ಬಂದಿದೆ. ಕಳ್ಳರ ಚಲನವಲನ, ಚಹರೆ ಸಿಸಿಟಿಯಲ್ಲಿ ಸೆರೆಯಾಗಿದ್ದು, ಪೊಲೀಸರ ಕಾರ್ಯಾಚರಣೆಗೆ ಸಹಾಯಕವಾಗಿದೆ.
ಪ್ರಸ್ತುತ ನಗರದಲ್ಲಿ ನಡೆದಿರುವ ಎಟಿಎಂ ಕಳ್ಳತನಗಳ ಪ್ರಕರಣಗಳು ಬಗ್ಗೆ ರಾಜಾಜಿನಗರ, ಶ್ರೀರಾಂಪುರ, ಮಲೇಶ್ವರಂ, ಹಲಸೂರು ಗೇಟ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಂತರ್ ರಾಜ್ಯ ಕಳ್ಳರ ಬೆನ್ನುಬಿದಿದ್ದಾರೆ.