ದಾವಣಗೆರೆ/ಬೆಳಗಾವಿ: ರಾಜ್ಯ ಕಾಂಗ್ರೆಸ್-ಜೆಡಿಎಸ್ ನಾಯಕರ ಆಪ್ತರಿಗೆ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ಕಳೆದ ವಾರ ಬಿಸಿ ಮುಟ್ಟಿಸಿದ್ದರು. ಇಂದು ರಾಜ್ಯದ ನಾಲ್ಕು ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಹೋದರರು, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಹಾಗೂ ಮಾಜಿ ಸಚಿವ ಅನಿಲ್ ಲಾಡ್ ಅವರ ಆಪ್ತರ ಮನೆ ಮೇಲೆ ಐಟಿ ಅಧಿಕಾರಿಗಳು ಇಂದು ದಾಳಿ ಮಾಡಿದ್ದಾರೆ.
ದಾವಣಗೆರೆಯ ವಿದ್ಯಾನಗರದ ವಿವೇಕಾನಂದ ಬಡಾವಣೆಯಲ್ಲಿರುವ ಉದಯ ಶಿವಕುಮಾರ್ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. 10 ಜನ ಐಟಿ ಅಧಿಕಾರಿಗಳ ತಂಡವು ಉದಯ ಶಿವಕುಮಾರ್ ಅವರ ಮನೆಯಲ್ಲಿರುವ ಅಪಾರ ಪ್ರಮಾಣದ ಕಡತಗಳ ಪರಿಶೀಲನೆ ನಡೆಸಿದೆ.
ಉದಯ ಶಿವಕುಮಾರ್, ಎಸ್.ಎಸ್.ಮಲ್ಲಿಕಾರ್ಜುನ ಅವರ ಆಪ್ತರಾಗಿದ್ದಾರೆ. ಅವರು ದಾವಣಗೆರೆ ಜಿಲ್ಲೆಯ ಬಹುತೇಕ ಕಾಮಗಾರಿಗಳನ್ನು ಅವರು ಗುತ್ತಿಗೆ ಪಡೆದಿದ್ದಾರೆ. ಇತ್ತ ಜಾರಕಿಹೊಳಿ ಸಹೋದರರಾದ ಆಪ್ತ, ಉದ್ಯಮಿ ಜಯಶೀಲ ಶೆಟ್ಟಿ ಅವರ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಐಟಿ ಅಧಿಕಾರಿಗಳು ಗೋವಾ ಮೂಲದವರಾಗಿದ್ದು, ದಾಖಲೆಗಳ ಪರಿಶೀಲೆ ನಡೆಸಿದ್ದಾರೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಬೆಂಬಲಿಗ, ಗುತ್ತಿಗೆದಾರ ಪ್ರಕಾಶ ವಂಟಮುತ್ತೆ ಅವರ ಚಿಕ್ಕೋಡಿ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಸಂಸದರು, ಚುನಾವಣಾ ಸಂದರ್ಭದಲ್ಲಿ ಐಟಿ ದಾಳಿ ಮಾಡಿದ್ದು ತಪ್ಪು. ಗುತ್ತಿಗೆದಾರರ ಮೇಲೆ ಐಟಿ ರೇಡ್ ಮಾಡುವ ಮೂಲಕ ಭಯ ಹುಟ್ಟಿಸುವ ಪ್ರಯತ್ನ ನಡೆದಿದೆ. ನಾನು ಇದಕ್ಕೆ ಭಯಪಡುವುದಿಲ್ಲ ಎಂದು ತಿಳಿಸಿದ್ದಾರೆ.