ಬೆಂಗಳೂರು: ಯಶವಂತಪುರ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಅವರಿಗೆ ಐಟಿ ನೋಟಿಸ್ ಜಾರಿ ಮಾಡಿದ್ದು ಇಂದು ಆದಾಯ ತೆರಿಗೆ ಕಚೇರಿಗೆ ಭೇಟಿ ನೀಡಿ ಮಾಹಿತಿಗಳನ್ನು ನೀಡಿದ್ದಾರೆ.
ಈ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಜವರಾಯಿಗೌಡ ಅವರು, ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್ ಪರ ಕೆಲಸ ಮಾಡುವಂತೆ ಕಮಲ ಪಡೆಯ ನಾಯಕರು ಆಫರ್ ಕೊಟ್ಡಿದ್ದರು. ನಿಮ್ಮನ್ನ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುತ್ತೇವೆ, ಬೋರ್ಡ್ ಅಧ್ಯಕ್ಷ ಸ್ಥಾನ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ನಾನು ಪಕ್ಷ ನಿಷ್ಠೆಯಿಂದ ಹೋಗಿಲ್ಲ. ನಾನು ಎರಡು ಬಾರಿ ಸೋತಿರಬಹುದು, ಮತದಾರರನ್ನು ವಂಚಿಸಲ್ಲ ಎಂದು ಹೇಳಿದ್ದಾರೆ.
Advertisement
Advertisement
ಐಟಿ ಇಲಾಖೆ ನೋಟಿಸ್ ನೀಡಿದ ಹಿನ್ನೆಲೆ ಜವರಾಯಿಗೌಡ ಅವರು ಇಂದು ನಗರದ ಐಟಿ ಕಚೇರಿಗೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ವೈಯಕ್ತಿಕ ವಿಚಾರಕ್ಕೆ ಮಾತ್ರ ನೋಟಿಸ್ ನೀಡಿದ್ದಾರೆ. ಕೆಲ ವರ್ಷಗಳ ಹಿಂದೆ ನೋಟ್ ಬ್ಯಾನ್ ಆದಾಗ ಆಸ್ತಿ ಪಡೆದಿದ್ದೆ. ಅದರ ಹಣಕಾಸಿನ ವ್ಯವಹಾರದ ಬಗ್ಗೆ ಮಾಹಿತಿ ಕೇಳಿದರು. ಇಂದು ಕೊಟ್ಟು ಬಂದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ತಿಳಿಸಿದರು.
Advertisement
ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಬ್ಲ್ಯಾಕ್‍ಮೇಲ್ ಮೂಲಕ ಗುತ್ತಿಗೆದಾರರನ್ನು ಬಿಜೆಪಿ ಸೇರಿಸಿಕೊಳ್ಳುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಕಾಂಗ್ರೆಸ್‍ನ ಕೆಲ ಜನರಿಗೆ ಗುತ್ತಿಗೆ ನೀಡಿರುವುದು ಗೊತ್ತಾಗಿದೆ. ಅವರನ್ನು ಮಾತ್ರ ಬ್ಲ್ಯಾಕ್‍ಮೇಲ್ ಮಾಡಲಾಗಿದೆ. ಜೆಡಿಎಸ್ ಬೆಂಬಲಿಗರಿಗೆ ಆಮಿಷ ಒಡ್ಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.
Advertisement
59.30 ಕೋಟಿ ರೂ. ಆಸ್ತಿಯ ಒಡೆಯ:
ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಒಟ್ಟು 59.30 ಕೋಟಿ ರೂ. ಆಸ್ತಿಯ ಒಡೆಯರಾಗಿದ್ದಾರೆ. ಈ ಪೈಕಿ ಜವರಾಯಿಗೌಡರ ಚರಾಸ್ತಿ 15.93 ಕೋಟಿ ರೂ. ಇದ್ದರೆ, ಅವರ ಪತ್ನಿ ಗಾಯತ್ರಿ 8.33 ಕೋಟಿ ರೂ. ಹೊಂದಿದ್ದಾರೆ. ಜವರಾಯಿಗೌಡ ಒಟ್ಟು 44.37 ಕೋಟಿ ರೂ. ಸ್ಥಿರಾಸ್ತಿ ಹಾಗೂ ಪತ್ನಿ 85.56 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಒಟ್ಟು ಸಾಲ 32 ಕೋಟಿ ರೂ. ಹಾಗೂ ಪತ್ನಿ ಹೆಸರಲ್ಲಿ ಒಟ್ಟು 28.18 ಕೋಟಿ ರೂ. ಸಾಲ ಇದೆ ಎಂದು ಅಫಿಡೆವಿಟ್‍ನಲ್ಲಿ ಜವರಾಯಿಗೌಡ ಘೋಷಿಸಿಕೊಂಡಿದ್ದಾರೆ.
ಹಿಂದಿನ ಚುನಾವಣೆ:
ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಅವರು 2013 ಹಾಗೂ 2018ರ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿ ಎಸ್.ಟಿಸೋಮಶೇಖರ್ ವಿರುದ್ಧ ಸೋತಿದ್ದರು. 2013ರಲ್ಲಿ ಎಸ್.ಸೋಮಶೇಖರ್ 1,20,380 ಮತ ಪಡೆದಿದ್ದರೆ ಜವರಾಯಿಗೌಡ 91,280 ಮತ ಗಳಿಸಿದ್ದರು. ಈ ಮೂಲಕ 29,100 ಮತಗಳ ಅಂತರದಿಂದ ಸೋತಿದ್ದ ಜವರಾಯಿಗೌಡ ಅವರು 2018 ಚುನಾವಣೆಯಲ್ಲಿ ಪ್ರಭಲ ಸ್ಪರ್ಧೆ ನೀಡಿ 10,711 ಮತಗಳಿಂದ ಪರಾಭವಗೊಂಡಿದ್ದರು. ಈ ವೇಳೆ ಎಸ್.ಟಿ.ಸೋಮಶೇಖರ್ 1,15,273 ಮತ ಪಡೆದಿದ್ದರೆ ಜವರಾಯಿ ಗೌಡ 1,04,562 ಮತವನ್ನು ಪಡೆದಿದ್ದರು.