ಬೆಂಗಳೂರು: ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ಟಿಕೆಟ್ (BJP Ticket) ಆಕಾಕ್ಷಿಯಾಗಿದ್ದ ರೌಡಿ ಶೀಟರ್ ಮಲ್ಲಿಕಾರ್ಜುನ ಅಲಿಯಾಸ್ ಫೈಟರ್ ರವಿ (Fighter Ravi) ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ (Income Tax Department) ದಾಳಿ ನಡೆಸಿದೆ.
ಇಂದು ಬೆಳ್ಳಂಬೆಳಗ್ಗೆ ವೈಯಾಲಿಕಾವಲ್ ನಿವಾಸದ ಮೇಲೆ ದಾಳಿ ಮಾಡಿರುವ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಕಳೆದ ಬಾರಿ ನಾಗಮಂಗಲ ವಿಧಾನಸಭಾ (Nagamangala) ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಮೂಲಕ ಸ್ಪರ್ಧಿಸಲು ಫೈಟರ್ ರವಿ ಮುಂದಾಗಿದ್ದರು. ಆದರೆ ರೌಡಿಶೀಟರ್ ಹಿನ್ನೆಲೆ ಇದೆ ಎಂದು ವಿವಾದ ಆಗಿತ್ತು. ನಂತರ ಬಿಜೆಪಿಗೆ ರಾಜೀನಾಮೆ ನೀಡಿ ಪಕ್ಷೇತರವಾಗಿ ನಿಂತು ಸ್ಪರ್ಧಿಸಿದ್ದರು. ಇದನ್ನೂ ಓದಿ: ಬೇರೆ ಯುವಕರಿಂದ ಫೋನ್‌ಕಾಲ್ – ಪ್ರಶ್ನಿಸಿದ್ದಕ್ಕೆ ಕಾನ್ಸ್ಟೇಬಲ್ ಪ್ರಿಯಕರನನ್ನೇ ಬೆಂಕಿ ಹಚ್ಚಿ ಕೊಂದ ರಾಣಿ
ಪ್ರಧಾನಿ ಮೋದಿಯವರು (PM Narendra Modi) ದಶಪಥ ರಸ್ತೆ (Mysuru-Bengaluru Expressway) ಉದ್ಘಾಟನೆಗೆಂದು ಮಂಡ್ಯಕ್ಕೆ ಬಂದಾಗ ಫೈಟರ್ ರವಿ ಶುಭಾಶಯ ಕೋರುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ವಿರೋಧ ಪಕ್ಷಗಳು ಇದನ್ನೇ ದೊಡ್ಡ ವಿಷಯವನ್ನಾಗಿಸಿಕೊಂಡು ದಾಳಿ ಮಾಡಿದ್ದವು. ಪ್ರಧಾನಿಗೆ ಮುಜುಗರ ಉಂಟುಮಾಡಿರುವುದಕ್ಕೆ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿತ್ತು ಎಂದು ಮೂಲಗಳು ತಿಳಿಸಿತ್ತು.
ಬಿಜೆಪಿ ಟಿಕೆಟ್ ಸಿಗುತ್ತದೆಂದು ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಸುತ್ತಾಟ ನಡೆಸಿದ್ದರು. ಮಾತ್ರವಲ್ಲದೆ ಬಿಜೆಪಿಯ ಘಟಾನುಘಟಿ ನಾಯಕರ ಸಮ್ಮುಖದಲ್ಲೇ ಫೈಟರ್ ರವಿ ಕಮಲ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.