ಬೆಂಗಳೂರು: ರಾಜ್ಯಪಾಲರೂ ಸೇರಿದಂತೆ ಎಲ್ಲ ನಾಯಕರೂ ಆಪರೇಷನ್ ಕಮಲ ನಡೆಸುವ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಭಯ ಇದೆ ರಕ್ಷಣೆ ಕೊಡಿ ಎಂದು ಬರವಣಿಗೆಯಲ್ಲಿ ಕೊಟ್ಟಿದ್ದರೆ ಡಿಜಿ ಅವರಿಗೆ ಸೂಚನೆ ನೀಡಬಹುದಿತ್ತು. ಅದನ್ನು ಬಿಟ್ಟು ಪೊಲೀಸ್ ಆಯುಕ್ತರನ್ನು ಕರೆಸಿಕೊಂಡು ಅವರ ಜೊತೆಯಲ್ಲೇ ಕೂರಿಸಿಕೊಂಡು ಶಾಸಕರೊಂದಿಗೆ ಮಾತನಾಡುತ್ತೀರಿ ಎನ್ನುವುದಾದರೆ, ಕುದುರೆ ವ್ಯಾಪಾರಕ್ಕೆ ನೀವೇ ಕಾರಣೀಭೂತರು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
Advertisement
Advertisement
ರಾಜ್ಯಪಾಲರೂ ಸೇರಿದಂತೆ ಎಲ್ಲ ಬಿಜೆಪಿ ಮುಖಂಡರು ಆಪರೇಷನ್ ಕಮಲದಲ್ಲಿ ಭಾಗಿಯಾಗಿದ್ದಾರೆ. ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರ ವಿಶೇಷ ವಿಮಾನದ ಮೂಲಕ ಶಾಸಕರನ್ನು ಮುಂಬೈನ ರೆಸಾರ್ಟ್ ಗೆ ಕಳುಹಿಸಲಾಗಿದೆ. ಇದರ ಅರ್ಥ ಏನು, ಇಷ್ಟೆಲ್ಲ ಆದರೂ ಸಹ ನಮಗೆ ಸಂಬಂಧವಿಲ್ಲ ಅವರು ಏನಾದರೂ ಮಾಡಿಕೊಳ್ಳಲಿ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ. ಇದು ಹೇಗೆ ಸಾಧ್ಯ, ಅವರೇ ಆಪರೇಷನ್ ಮಾಡುತ್ತಿರುವುದು. ಬಿಜೆಪಿಯವರೇ ಸರ್ಕಾರವನ್ನು ಅಸ್ಥಿರ ಹಾಗೂ ಕುದುರೆ ವ್ಯಾಪಾರ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
Advertisement
Advertisement
ರಿವರ್ಸ್ ಆಪರೇಷನ್ ಮಾಡುವ ಅಗತ್ಯ ಬಿದ್ದರೆ ಮಾಡಲೇಬೇಕಾಗುತ್ತದೆ. ಆದರೆ, ಈಗ ರಿವರ್ಸ್ ಆಪರೇಷನ್ ನಡೆಯುತ್ತಿರುವುದು ನನಗೆ ಗೊತ್ತಿಲ್ಲ. ಸದ್ಯ ಈ ಕುರಿತು ಚಿಂತನೆ ನಡೆಸಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ಶಾಸಕರು ರಾಜೀನಾಮೆ ನೀಡಿರುವುದು ನನ್ನ ಬಗ್ಗೆ ಅಸಮಾಧಾನದಿಂದಲ್ಲ, ನಾನು ಎರಡು ಬಾರಿ ಬೆಂಗಳೂರು ಶಾಸಕರ ಸಭೆ ಕರೆದಿದ್ದೇನೆ. ಬಂದಿರುವ ಕುರಿತು ಹಾಜರಾತಿ ಇದೆ. ಯಾರು ಭಾಗವಹಿಸಿದ್ದಾರೆ, ಯಾರು ಭಾಗವಹಿಸಿಲ್ಲ, ಏನು ಮಾತನಾಡಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ. ಅಲ್ಲದೆ, ಹಿಂದೆಂದಿಗಿಂತಲೂ ಈ ಬಾರಿ ಬೆಂಗಳೂರಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗಿದೆ. ಕಳೆದ ಬಾರಿ 8 ಸಾವಿರ ಕೋಟಿ ರೂ. ಕಳೆದ ಬಾರಿ ಈ ಬಾರಿ 11 ಸಾವಿರ ಕೋಟಿ ರೂ. ಅನುದಾನ ಕೊಡಿಸಿದ್ದೇನೆ. ಆದರೂ ರಾಜೀನಾಮೆ ನೀಡಿದ್ದಾರೆ. ನನ್ನ ಮೇಲಿನ ಅಸಮಾಧಾನದಿಂದ ರಾಜೀನಾಮೆ ನೀಡಿಲ್ಲ. ಬದಲಿಗೆ ಬಿಜೆಪಿಯವರ ಆಪರೇಷನ್‍ನಿಂದ ಈ ರೀತಿ ಮಾಡಿದ್ದಾರೆ.
ಇಂದು ನಡೆದ ಈ ಉಪಹಾರ ಕೂಟ ಕೇವಲ ಇಡ್ಲಿ ದೋಸೆಗೆ ಸೀಮಿತವಾಗುವುದಿಲ್ಲ. ಸರ್ಕಾರ ಸ್ಥಿರಗೊಳಿಸುವ ಸಭೆಯಾಗಿದೆ. ಎಲ್ಲ ಹಿರಿಯ ನಾಯಕರು ಚರ್ಚಿಸಿ ಸೂಕ್ತ ತೀರ್ಮಾನ ಕೂಗೊಳ್ಳುತ್ತೇವೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.