107 ಭಾರತೀಯರು ಸೇರಿ ಅಫ್ಘಾನಿಸ್ತಾನದಿಂದ 168 ಜನರ ಆಗಮನ

Public TV
3 Min Read
afghanistan rescue

– ಭಾರತಕ್ಕೆ ಕಾಲಿಡುತ್ತಿದ್ದಂತೆ ಗಳಗಳನೆ ಅತ್ತ ಅಫ್ಘಾನ್ ಸಂಸದ

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಹಿಂಸಾಚಾರ ಅತಿರೇಕಕ್ಕೆ ತಿರುಗಿದ್ದು, 107 ಭಾರತೀಯರು ಸೇರಿ ಒಟ್ಟು 168 ಜನರನ್ನು ಅಫ್ಘಾನಿಸ್ತಾನದಿಂದ ಭಾರತಕ್ಕೆ ಕರೆ ತರಲಾಗಿದೆ. ಭಾರತೀಯ ಸೇನೆಯ ವಿಮಾನದ ಮೂಲಕ ಕಾಬೂಲ್‍ನಿಂದ ಹಿಂಡನ್ ಏರ್ ಫೋರ್ಸ್ ಬೇಸ್‍ನ ಗಾಜಿಯಾಬಾದ್‍ಗೆ ಕರೆತರಲಾಗಿದೆ.

ಭಾರತೀಯ ವಾಯು ಸೇನೆಯ ಸಿ-17 ವಿಮಾನದ ಮೂಲಕ ಕಾಬೂಲ್‍ನಿಂದ ಇಂದು ಬೆಳಗ್ಗೆ 107 ಜನ ಭಾರತೀಯರು ಸೇರಿ ಒಟ್ಟು 168 ಜನ ಭಾರತಕ್ಕೆ ಬಂದಿಳಿದಿದ್ದಾರೆ. ವಿದೇಶಾಂಗ ಸಚಿವಾಲಯದ ಅರಿಂದಮ್ ಬಾಗ್ಚಿ ಅವರು ಈ ಕುರಿತು ಟ್ವೀಟ್ ಮಾಡಿ ಖಚಿತಪಡಿಸಿದ್ದಾರೆ. ಸ್ಥಳಾಂತರಿಸುವ ಕಾರ್ಯ ಮುಂದುವರಿದಿದ್ದು, ಭಾರತೀಯ ವಾಯು ಸೇನೆಯ ವಿಶೇಷ ವಿಮಾನದ ಮೂಲಕ 107 ಭಾರತೀಯರು ಸೇರಿ ಒಟ್ಟು 168 ಜನರು ಭಾರತಕ್ಕೆ ಬಂದಿಳಿದಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಮಧ್ಯರಾತ್ರಿ ಆಪರೇಷನ್ ಇಂಡಿಯನ್ಸ್ – ಕಾಬೂಲ್‍ನಿಂದ ದೋಹಾ ಮೂಲಕ ದೆಹಲಿಗೆ ಭಾರತೀಯರು

ಇದೇ ವೇಳೆ ಅಫ್ಘಾನಿಸ್ತಾನದ ಸಂಸದ ನರೇಂದ್ರ ಸಿಂಗ್ ಖಲ್ಸಾ ಅವರು ಕಾಬೂಲ್‍ನಿಂದ ಭಾರತಕ್ಕೆ ಲ್ಯಾಂಡ್ ಆಗುತ್ತಿದ್ದಂತೆ ಭಾವುರಾಗಿ ಕಣ್ಣೀರಿಟ್ಟಿದ್ದಾರೆ. ನನಗೆ ಅಳು ಬರುತ್ತಿದೆ. ಕಳೆದ 20 ವರ್ಷಗಳಿಂದ ನಾವು ಸಂಪಾದಿಸಿದ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಇದೀಗ ಝೀರೋ ಆಗಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅಮ್ಮನಿಂದ ದೂರವಾದ ಕಂದಮ್ಮನನ್ನ ರಕ್ಷಿಸಿದ ಟರ್ಕಿ ಸೈನಿಕರು

ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಹೀಗಾಗಿ ನನ್ನ ಮಗಳು ಹಾಗೂ ಇಬ್ಬರು ಮೊಮ್ಮಕ್ಕಳೊಂದಿಗೆ ಇಲ್ಲಿಗೆ ಬಂದಿದ್ದೇವೆ. ನಮ್ಮ ಭಾರತದ ಸಹೋದರ, ಸಹೋದರಿಯರು ಕಾಪಾಡಲು ಬಂದಿದ್ದರು. ತಾಲಿಬಾನಿಗಳು ನಮ್ಮ ಮನೆಯನ್ನು ಸುಟ್ಟು ಹಾಕಿದರು. ನಮಗೆ ಸಹಾಯ ಮಾಡಿದ್ದಕ್ಕೆ ಭಾರತಕ್ಕೆ ನಾನು ಧನ್ಯವಾದ ಸಮರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ವಿಮಾನದಲ್ಲಿ ಬಂದವರ ಪೈಕಿ ಬಹುತೇಕ ಸಿಖ್ಖರಿದ್ದು, 87 ಜನ ಇತರೆ ಭಾರತೀಯರಿದ್ದಾರೆ. ಇಬ್ಬರು ನೇಪಾಳದವರಿದ್ದಾರೆ. ಕೆಲ ದಿನಗಳ ಹಿಂದೆ ಯುಎಸ್ ಹಾಗೂ ನಾಟೊ ವಿಮಾನದ ಮೂಲಕ ಕಾಬೂಲ್‍ನಿಂದ ದೋಹಾಗೆ ಸ್ಥಳಾಂತರಿಸಲಾಗಿದ್ದ 135 ಭಾರತೀಯರು ಸಹ ಭಾರತಕ್ಕೆ ಮರಳಿದ್ದಾರೆ.

Share This Article