ಬೆಂಗಳೂರು: ಆಕ್ಸೆಲ್ ಕಟ್ಟಾಗಿ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಗರ್ಭಿಣಿ ಸೇರಿ 20 ಮಂದಿಗೆ ಗಾಯಗೊಂಡ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರಿನ ಹಲಸೂರು ಲೇಕ್‍ನ ಸಂತ್ ಜಾನ್ ಸರ್ಕಲ್ ಬಳಿ ಇಂದು ಬೆಳಗ್ಗೆ 10.20 ರ ಸುಮಾರಿಗೆ ನಡೆದಿದೆ. ಘಟನೆಯಿಂದ ಗಾಯಗೊಂಡ 20 ಮಂದಿ ಕಾರ್ಮಿಕರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
- Advertisement
ಬಳ್ಳಾರಿ ಮೂಲದ ಸುಮಾರು 40 ಮಂದಿ ಕಟ್ಟಡ ಕಾರ್ಮಿಕರು ಥಣಿಸಂಧ್ರದಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ಇಂದು ಭಾನುವಾರ ರಜೆ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ನಲ್ಲಿ ಬನಶಂಕರಿ ದೇವಸ್ಥಾನಕ್ಕೆ ತೆರಳಿದ್ದರು. ಹೀಗಾಗಿ ಹಲಸೂರು ಕಡೆಯಿಂದ ಜಯನಗರದ ಕಡೆಗೆ ಟ್ರ್ಯಾಕ್ಟರ್ ಚಲಿಸುತ್ತಿದ್ದ ಸಂದರ್ಭದಲ್ಲಿ ಆಕ್ಸೆಲ್ ಕಟ್ಟಾಗಿ ಪಲ್ಟಿ ಆಗಿದೆ. ಪರಿಣಾಮ 20 ಮಂದಿ ಗಾಯಗೊಂಡಿದ್ದಾರೆ.
- Advertisement
ಘಟನೆಯಿಂದ ದೇವಿ ಎನ್ನುವ 7 ತಿಂಗಳ ಗರ್ಭಿಣಿ ತಲೆಗೆ, ಭುಜಕ್ಕೆ ಗಾಯ ಆಗಿದೆ. ಟ್ರ್ಯಾಕ್ಟರ್‍ನಲ್ಲಿದ್ದ ಐದು ಚಿಕ್ಕ ಮಕ್ಕಳಿಗೂ ಗಾಯಗಳಾಗಿವೆ. ಟ್ರ್ಯಾಕ್ಟರ್ ಪಲ್ಟಿ ಆದ ಕೂಡಲೇ ಗಾಯಾಳುಗಳನ್ನು ರಕ್ಷಣೆ ಮಾಡಿ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಗಾಯಾಳುಗಳು ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಪುಲಿಕೇಶಿ ನಗರ ಟ್ರಾಫಿಕ್ ಪೊಲೀಸ್ರು ಬಂದು ಪರಿಶೀಲನೆ ನಡೆಸಿದ್ದಾರೆ.