– ರಾಹುಲ್ ಗಾಂಧಿ ವಿರುದ್ಧ ಕೆ.ಸುರೇಂದ್ರನ್ ಸ್ಪರ್ಧೆ
– ವರುಣ್ ಗಾಂಧಿಗೆ ಬಿಜೆಪಿ ಶಾಕ್!
ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆ 17 ರಾಜ್ಯಗಳ 111 ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಬಿಜೆಪಿ ಭಾನುವಾರ ಬಿಡುಗಡೆ ಮಾಡಿದೆ. ಪಕ್ಷಕ್ಕೆ ಹೊಸದಾಗಿ ಸೇರ್ಪಡೆಗೊಂಡ ನಾಯಕರು, ಕೋರ್ಟ್ ಮಾಜಿ ನ್ಯಾಯಾಧೀಶರು, ಸಿನಿಮಾ ರಂಗದ ತಾರೆಯರಿಗೂ ಪಕ್ಷ ಟಿಕೆಟ್ ನೀಡಿದೆ.
Advertisement
ಬಾಲಿವುಡ್ ನಟಿ ಕಂಗನಾ ರಣಾವತ್‌ಗೆ ತವರು ರಾಜ್ಯ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಇವರ ಜೊತೆಗೆ ಜನಪ್ರಿಯ ಟಿವಿ ಧಾರಾವಾಹಿ ರಾಮಾಯಣದಲ್ಲಿ ರಾಮನಾಗಿ ನಟಿಸಿದ್ದ ನಟ ಅರುಣ್ ಗೋವಿಲ್ ಅವರನ್ನು ಮೀರತ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದೆ.
Advertisement
Advertisement
ಈಗಷ್ಟೇ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಕೈಗಾರಿಕೋದ್ಯಮಿ ನವೀನ್ ಜಿಂದಾಲ್, ರಂಜಿತ್ ಚೌತಾಲಾ ಮತ್ತು ಕಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ ಅವರನ್ನೂ ಅಭ್ಯರ್ಥಿಗಳಾಗಿ ಬಿಜೆಪಿ ಘೋಷಿಸಿದೆ.
Advertisement
ವರುಣ್ ಗಾಂಧಿಗೆ ಶಾಕ್
ಬಿಜೆಪಿ ತನ್ನ ಪಟ್ಟಿಯಲ್ಲಿ ಹಲವು ಪ್ರಮುಖರಿಗೆ ಶಾಕ್ ನೀಡಿದೆ. ವರುಣ್ ಗಾಂಧಿ ಅವರನ್ನು ಬಿಜೆಪಿ ಕೈಬಿಟ್ಟಿದೆ. ಅಚ್ಚರಿ ಎಂಬಂತೆ ವರುಣ್ ಗಾಂಧಿ ತಾಯಿ ಮೇನಕಾ ಗಾಂಧಿ ಅವರನ್ನು ಸುಲ್ತಾನ್‌ಪುರದಿಂದ ಬಿಜೆಪಿ ಕಣಕ್ಕಿಳಿಸಿದೆ. ವರುಣ್ ಗಾಂಧಿ ಪ್ರತಿನಿಧಿಸಿದ್ದ ಪಿಲಿಭೀತ್ ಕ್ಷೇತ್ರದಲ್ಲಿ ಮಾಜಿ ಕಾಂಗ್ರೆಸ್ಸಿಗ ಜಿತಿನ್ ಪ್ರಸಾದ್‌ಗೆ ಬಿಜೆಪಿ ಮಣೆ ಹಾಕಿದೆ.
ರಾಹುಲ್ ಗಾಂಧಿ ವಿರುದ್ಧ ಸುರೇಂದ್ರನ್ ಕಣಕ್ಕೆ
ಕೇರಳದ ವಯನಾಡಿನಲ್ಲಿ ಕಾಂಗ್ರೆಸ್‌ನ ರಾಹುಲ್ ಗಾಂಧಿ ವಿರುದ್ಧ ಹಿರಿಯ ನಾಯಕ ಮತ್ತು ಕೇರಳ ಬಿಜೆಪಿ ಮುಖ್ಯಸ್ಥ ಕೆ.ಸುರೇಂದ್ರನ್ ಸ್ಪರ್ಧಿಸಲಿದ್ದಾರೆ. ಮಾಜಿ ಉಪಪ್ರಧಾನಿ ದೇವಿ ಲಾಲ್ ಅವರ ಪುತ್ರ ರಂಜಿತ್ ಚೌತಾಲಾ, ಹಿಸಾರ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ನಿವೃತ್ತ ನ್ಯಾಯಾಧೀಶರಿಗೂ ಬಿಜೆಪಿ ಟಿಕೆಟ್
ಸ್ವಯಂ ನಿವೃತ್ತಿ ಪಡೆದು ಇತ್ತೀಚೆಗೆ ಬಿಜೆಪಿ ಸೇರಿದ್ದ ಕೋಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ ಅವರು ಬಂಗಾಳದ ತಮ್ಲುಕ್‌ನಿಂದ ಸ್ಪರ್ಧಿಸಲಿದ್ದಾರೆ. ನ್ಯಾಯಾಂಗ ವ್ಯವಸ್ಥೆಯಿಂದ ದೂರ ಸರಿದು ಚುನಾವಣಾ ರಾಜಕೀಯಕ್ಕೆ ಸೇರಿದ ಮೊದಲ ನಿವೃತ್ತ ನ್ಯಾಯಾಧೀಶರು. ಒಡಿಶಾದಲ್ಲಿ ಪಕ್ಷವು ಸಂಭಾಲ್‌ಪುರದಿಂದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಪುರಿಯಿಂದ ಸಂಬಿತ್ ಪಾತ್ರ ಈ ಇಬ್ಬರು ಪ್ರಮುಖ ನಾಯಕರನ್ನು ಕಣಕ್ಕಿಳಿಸಿದೆ.
ಮತ್ತೊಬ್ಬ ಹೊಸ ಸದಸ್ಯೆ, ಮಾಜಿ ಸಿಎಂ ಹೇಮಂತ್ ಸುರೇನ್ ಅವರ ಅತ್ತಿಗೆ ಸೀತಾ ಸೊರೆನ್ ಜಾರ್ಖಂಡ್‌ನ ದುಮ್ಕಾದಿಂದ ಸ್ಪರ್ಧಿಸಲಿದ್ದಾರೆ. ಇವರು ಜಾರ್ಖಂಡ್ ಮುಕ್ತಿ ಮೋರ್ಚಾ ತೊರೆದು ಬಿಜೆಪಿ ಸೇರಿದ್ದರು. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಬೇಗುಸರಾಯ್ ಕ್ಷೇತ್ರದಿಂದ ಹಾಗೂ ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.