ಪುನೀತ್ ರಾಜ್ ಕುಮಾರ್ ಅಗಲಿ ಏಳು ತಿಂಗಳು ಕಳೆದರೂ, ಅವರ ಆರಾಧನೆ ಮಾತ್ರ ಇನ್ನೂ ನಿಂತಿಲ್ಲ. ಅಪ್ಪು ಅಭಿಮಾನಿಗಳು ಒಂದಿಲ್ಲೊಂದು ರೀತಿಯಲ್ಲಿ ನೆಚ್ಚಿನ ನಟನನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಜೊತೆಗೆ ನೂರಾರು ಅಭಿಮಾನಿಗಳು ನಿತ್ಯವೂ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಬಂದು ನಮನ ಸಲ್ಲಿಸುತ್ತಲೇ ಇದ್ದಾರೆ. ಅಷ್ಟೊಂದು ಅಭಿಮಾನ ಮತ್ತು ಪ್ರೀತಿಯನ್ನು ಅಪ್ಪು ಅಭಿಮಾನಿಗಳು ಇಟ್ಟುಕೊಂಡಿದ್ದಾರೆ.
ಈಗಾಗಲೇ ಪುನೀತ್ ಅವರ ಪುತ್ಥಳಿಗಳು ರಾಜ್ಯದ ನಾನಾ ಕಡೆ ಸ್ಥಾಪಿಸಲಾಗಿದ್ದು, ನಾಳೆ ಹೊಸಪೇಟೆಯಲ್ಲಿ ಬೃಹತ್ ಪುತ್ಥಳಿಯ ಉದ್ಘಾಟನೆ ಆಗಲಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ಅಪ್ಪು ಹುಡುಗರು ಡಾ. ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಬಳಗದಿಂದ ಈ ಪ್ರತಿಮೆ ಸ್ಥಾಪಿಸಲಾಗುತ್ತಿದ್ದು, ನಾಳೆ ಅದನ್ನು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಅವರು ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಇದನ್ನೂ ಓದಿ : Exclusive : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯಸ್ಮರಣೆ : ಪುತ್ಥಳಿ ಅನಾವರಣ
ಈ ಕಾರ್ಯಕ್ರಮಕ್ಕೆ ಪುನೀತ್ ಅವರ ಸಹೋದರ, ನಟ ರಾಘವೇಂದ್ರ ರಾಜ್ ಕುಮಾರ್, ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಸಂಗೀತ ನಿರ್ದೇಶಕ ಗುರುಕಿರಣ್ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಈ ಪುತ್ಥಳಿ ಉದ್ಘಾಟನೆಯ ಕಾರ್ಯಕ್ರಮವನ್ನು ರಾಘವೇಂದ್ರ ರಾಜ್ ಕುಮಾರ್ ಮತ್ತು ಕುಟುಂಬದವರು ನೆರವೇರಿಸಲಿದ್ದಾರೆ. ನಾಳೆ ಸಂಜೆ 4 ಗಂಟೆಗೆ ಪುನೀತ್ ರಾಜ್ ಕುಮಾರ್ ಸರ್ಕಲ್ ನಲ್ಲಿ ಈ ಪುತ್ಥಳಿ ಉದ್ಘಾಟನೆ ಆಗಲಿದೆ.