ಸಿನಿ ದುನಿಯಾದಲ್ಲಿ ಸ್ನೇಹ- ಸಂಬಂಧಕ್ಕೆ ಸಾಕ್ಷಿಯಾಗಿ ಸಹಸ್ರಾರು ಸಿನಿಮಾಗಳು ನಿರ್ಮಾಣಗೊಂಡಿವೆ. ಆ ಸಾಲಿಗೆ ಸಂದೇಶ್ ಶೆಟ್ಟಿ ಆಜ್ರಿ (Sandesh Shetty Ajri) ನಿರ್ದೇಶನದ, ನಿರಂಜನ್ ಶೆಟ್ಟಿ ತಲ್ಲೂರು ನಿರ್ಮಾಣದ ‘ಇನಾಮ್ದಾರ್’ (Inamdar) ಚಿತ್ರ ಹೊಸದಾಗಿ ಸೇರ್ಪಡೆಗೊಳ್ಳಲು ರೆಡಿಯಾಗಿದೆ. ಇದೇ ಅಕ್ಟೋಬರ್ 27 ರಂದು ರಾಜ್ಯಾದ್ಯಂತ ಚಿತ್ರ ತೆರೆಗಪ್ಪಳಿಸಲು ಸಜ್ಜಾಗಿದ್ದು ಚಿತ್ರದ ನಿರ್ಮಾಪಕರಾದ ನಿರಂಜನ್ ಶೆಟ್ಟಿ ತಲ್ಲೂರು ತಮ್ಮ ನಿರೀಕ್ಷೆಯನ್ನು ಹೊರಹಾಕಿದ್ದಾರೆ. ಇನಾಮ್ದಾರ್ ಗಾಗಿ ಖಜಾನೆ ತೆರೆದಿಟ್ಟಿದ್ದರ ಹಿಂದಿನ ಸ್ನೇಹದ ಕಥೆಯನ್ನು ಹಾಗೂ ಶ್ರಮದ ವ್ಯಥೆಯನ್ನು ಜಗಜ್ಜಾಹೀರು ಮಾಡಿದ್ದಾರೆ.
Advertisement
ನಿರಂಜನ್ ಶೆಟ್ಟಿ ಕರಾವಳಿ ಭಾಗದವರು. ಮೂಲತಃ ಉದ್ಯಮಿಯಾಗಿರುವ ಇವರಿಗೆ ಸಿನಿಮಾರಂಗದ ನಂಟಿರಲಿಲ್ಲ. ಆದರೆ, ಸ್ನೇಹಕ್ಕೋಸ್ಕರ ಸಿನಿಮಾಲೋಕ ಪ್ರವೇಶಿಸಿದರು. ಅರ್ಧಕ್ಕೆ ನಿಂತು ಹೋಗಿದ್ದ ಸಿನಿಮಾಗೆ ಬಂಡವಾಳ ಸುರಿಯುವ ಮೂಲಕ ಕುಸಿದುಬಿದ್ದಿದ್ದ ಗೆಳೆಯ ಕಂ ನಿರ್ದೇಶಕ ಸಂದೇಶ್ ಶೆಟ್ಟಿನಾ ಕೈ ಹಿಡಿದರು. ಇವತ್ತು ಇನಾಮ್ದಾರ್ ಸಿನಿಮಾ ರಿಲೀಸ್ ಹಂತ ತಲುಪಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುವ ಗುಣಮಟ್ಟ ಕಾಯ್ದಿರಿಸಿಕೊಂಡಿದೆ ಅಂದರೆ ಅದಕ್ಕೆ ಮೊದಲ ಕಾರಣ ನಿರ್ದೇಶಕರಾದರೆ, ಮೂಲ ಕಾರಣ ನಿರ್ಮಾಪಕ ನಿರಂಜನ್ ಶೆಟ್ಟಿ ತಲ್ಲೂರ್ ಅವರು.
Advertisement
Advertisement
ಇವರಿಗೆ ಸಿನಿಮಾದ ಮೇಲೆ ಅಪಾರವಾದ ಆಸಕ್ತಿ. ಅದರಲ್ಲೂ ತಾವು ಬಂಡವಾಳ ಸುರಿದು ತಯಾರಿಸಿರುವ ಇನಾಮ್ದಾರ್ ಮೇಲಂತೂ ಬೆಟ್ಟದ್ದಷ್ಟು ನಿರೀಕ್ಷೆಯಿದೆ. ನಮ್ಮ ಸಿನಿಮಾ ನಮಗೆ ಹೇಗಿದ್ದರೂ ಚೆಂದಾನೆ ಎನ್ನುವ ನಿರಂಜನ್, ಫೈನಲೀ ಪ್ರೇಕ್ಷಕರು ಒಪ್ಪಿಕೊಳ್ಳಬೇಕು. ಅವರು ಇನಾಮ್ದಾರ್ ನ ಅಕ್ಸೆಪ್ಟ್ ಮಾಡೇ ಮಾಡ್ತಾರೆ, ನಮ್ಮ ಶ್ರಮಕ್ಕೆ ಪ್ರತಿಫಲ ಸಿಕ್ಕೆ ಸಿಗುತ್ತೆನ್ನುವ ಆತ್ಮವಿಶ್ವಾಸ ಹೊರಹಾಕಿದ್ದಾರೆ.
Advertisement
ಅಂದ್ಹಾಗೇ, ಇನಾಮ್ದಾರ್ ಚಿತ್ರ ಶೀರ್ಷಿಕೆಯಿಂದಲೇ ಸುದ್ದಿಮನೆ ಬಾಗಿಲು ಬಡಿದಿತ್ತು. ಟೀಸರ್, ಹಾಡುಗಳ ಮೂಲಕಪ್ರೇಕ್ಷಕ ವಲಯದಲ್ಲಿ ಕುತೂಹಲ ಗರಿಗೆದರುವಂತೆ ಮಾಡಿತ್ತು. ಇತ್ತೀಚೆಗೆ ಇದರ ಟ್ರೇಲರ್ ಹೊರಬಿದ್ದಿದ್ದು ಮತ್ತಷ್ಟು ನಿರೀಕ್ಷೆ ಹೆಚ್ಚಿದೆ. ಉತ್ತರ ಕರ್ನಾಟಕದಲ್ಲಿ ಛತ್ರಪತಿ ಶಿವಾಜಿ ಮಹಾರಾಜನನ್ನು ಆರಾಧಿಸುವ ವಂಶ ಹಾಗೂ ಕರಾವಳಿಯಲ್ಲಿ ಪರಶಿವನನ್ನು ಆರಾಧಿಸುವ ಕಾಡು ಜನಾಂಗವನ್ನು ಮುಖ್ಯ ಭೂಮಿಕೆಗೆ ತಂದು ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ವರ್ಣ ಸಂಘರ್ಷದ ಕಥೆ ಎಣೆದಿದ್ದಾರೆ.
ಚಿತ್ರದಲ್ಲಿ ಪ್ರತಿಭಾನ್ವಿತ ಕಲಾವಿದರ ದಂಡೇ ಇದೆ. ಶರತ್ ಲೋಹಿತಾಶ್ವ, ಅವಿನಾಶ್, ಥ್ರಿಲ್ಲರ್ ಮಂಜು, ಪ್ರಮೋದ್ ಶೆಟ್ಟಿ (Pramod Shetty), ಎಂಕೆ ಮಠ ಅವ್ರಂತ ಹಿರಿಕರ ಜೊತೆಗೆ ಚಿತ್ರಕಲಾ ರಾಜೇಶ್,ಕಾಂತಾರ ಖ್ಯಾತಿಯ ನಾಗರಾಜ್ ಬೈಂದೂರು, ಪ್ರಶಾಂತ್ ಸಿದ್ದಿ, ರಘು ಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ಸಂಜು ಬಸಯ್ಯ, ಹಾಲಂಬಿಯಂತಹ ಪ್ರತಿಭೆಗಳು ಇದ್ದಾರೆ. ನಾಯಕ ರಂಜನ್ ಛತ್ರಪತಿ ಗೆ ಚಿರಶ್ರೀ ಅಂಚನ್ ಹಾಗೂ ಎಸ್ತರ್ ನರೋನಾ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ.
ಬೆಳಗಾವಿ, ನಿಪ್ಪಾಣಿ, ಧಾರವಾಡ, ಹುಬ್ಬಳಿ, ಚಿಕ್ಕಮಂಗಳೂರು, ಕರಾವಳಿ ಭಾಗ ಸುತ್ತಮುತ್ತ ಸುಮಾರು 65 ದಿನ ಶೂಟಿಂಗ್ ಮಾಡಿದ್ದು, ಮುರುಳಿ ಕ್ಯಾಮೆರಾ ಕೈಚಳಕ ಚಿತ್ರದ ಶ್ರೀಮಂತಿಕೆ ಹೆಚ್ಚಿಸಿದೆ. ಶಿವರಾಜ್ ಮೇಹು ಸಂಕಲನ, ರಾಕಿ ಸೋನು ಸಂಗೀತ, ನಕುಲ್ ಅಭಯಂಕರ್ ಹಿನ್ನಲೆ ಸಂಗೀತ `ಇನಾಮ್ದಾರ್’ಗೆ ಶಕ್ತಿತುಂಬಿದೆ. ಶ್ರೀ ಕುಂತಿಯಮ್ಮ ಪ್ರೊಡಕ್ಷನ್ ನಿರ್ಮಾಣದಲ್ಲಿ ಅದ್ದೂರಿಯಾಗಿ ಸಿನಿಮಾ ಮೂಡಿಬಂದಿದ್ದು, ವಿಜಯ್ ಫಿಲಂಸ್ ವಿತರಣೆ ಹೊಣೆ ಹೊತ್ತಿದ್ದಾರೆ. ಸುಮಾರು 150 ಥಿಯೇಟರ್ ನಲ್ಲಿ ರಾಜ್ಯಾದ್ಯಂತ ರಿಲೀಸ್ ಮಾಡುವ ಪ್ಲ್ಯಾನ್ ಹಾಕ್ಕೊಂಡಿದ್ದು, ಇದೇ ಅಕ್ಟೋಬರ್ 27ರಂದು ಬೆಳ್ಳಿಭೂಮಿಗೆ ತರುತ್ತಿದ್ದಾರೆ.
Web Stories